ಮನೆ ಅಪರಾಧ ಜಾರ್ಖಂಡ್ ಸಚಿವರ ಆಪ್ತ ಕಾರ್ಯದರ್ಶಿ ಮನೆ ಮೇಲೆ ಇಡಿ ದಾಳಿ: ಕಂತೆ ಕಂತೆ ಹಣ ಪತ್ತೆ

ಜಾರ್ಖಂಡ್ ಸಚಿವರ ಆಪ್ತ ಕಾರ್ಯದರ್ಶಿ ಮನೆ ಮೇಲೆ ಇಡಿ ದಾಳಿ: ಕಂತೆ ಕಂತೆ ಹಣ ಪತ್ತೆ

0

ರಾಂಚಿ: ಜಾರ್ಖಂಡ್  ಗ್ರಾಮೀಣಾಭಿವೃದ್ಧಿ ಸಚಿವ ಅಲಂಗೀರ್ ಆಲಂ ಅವರ ಆಪ್ತ ಕಾರ್ಯದರ್ಶಿ ಸಂಜೀವ್ ಲಾಲ್ ಮನೆಯ ಮೇಲೆ ಇಡಿ ದಾಳಿ ನಡೆಸಿದ್ದು,  ಲೆಕ್ಕರಹಿತವಾಗಿರುವ ಕಂತೆ ಕಂತೆ ನೋಟಗಳ ರಾಶಿಯನ್ನು ಜಾರಿ ನಿರ್ದೇಶನಾಲಯ ಪತ್ತೆ ಮಾಡಿದೆ.

Join Our Whatsapp Group

ಫೆಬ್ರವರಿ 2023 ರಲ್ಲಿ ಇಡಿ ಜಾರ್ಖಂಡ್ ಗ್ರಾಮೀಣಾಭಿವೃದ್ಧಿ ಇಲಾಖೆಯ ಮುಖ್ಯ ಇಂಜಿನಿಯರ್ ವೀರೇಂದ್ರ ರಾಮ್ ಎಂಬುವವರನ್ನು ಕೆಲವು ಯೋಜನೆಗಳ ಅನುಷ್ಠಾನಕ್ಕಾಗಿ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದರೆ ಎಂದು ಬಂಧಿಸಲಾಗಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಜಾರ್ಖಂಡ್ ಗ್ರಾಮೀಣಾಭಿವೃದ್ಧಿ ಸಚಿವ ಅಲಂಗೀರ್ ಆಲಂ ಅವರ ಆಪ್ತ ಕಾರ್ಯದರ್ಶಿಯ ಮನೆಯ ಮೇಲೆ ದಾಳಿ ಮಾಡಿದೆ.

ಇನ್ನು ಇಡಿ ಅಂದಾಜಿಸಿರುವ ಪ್ರಕಾರ ಪತ್ತೆಯಾಗಿರುವ ಹಣ ಕಂತೆಯಲ್ಲಿ 25 ಕೋಟಿ ರೂ. ಗೂ ಅಧಿಕ ಮೊತ್ತಗಳು ಇರಬಹುದು ಎಂದು ಹೇಳಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಫೆಬ್ರವರಿ 2023ರಂದು ಜಾರ್ಖಂಡ್ ಗ್ರಾಮೀಣಾಭಿವೃದ್ಧಿ ಇಲಾಖೆಯ ಮಾಜಿ ಮುಖ್ಯ ಇಂಜಿನಿಯರ್ ವೀರೇಂದ್ರ ರಾಮ್ ಮತ್ತು ಅವರ ಆಪ್ತ ವಲಯಕ್ಕೆ ಸಂಬಂಧಿಸಿದ ಸುಮಾರು ಸ್ಥಳಗಳ ಮೇಲೆ ದಾಳಿ ನಡೆಸಲಾಗಿತ್ತು.

ಈ ದಾಳಿಯ  ಬಗ್ಗೆ ಮಾತನಾಡಿದ ಜಾರ್ಖಂಡ್ ಬಿಜೆಪಿ ವಕ್ತಾರ ಪ್ರತುಲ್ ಶಾಹದೇವ್, ಜಾರ್ಖಂಡ್‌ನಲ್ಲಿ ಭ್ರಷ್ಟಾಚಾರ ಕೊನೆಗೊಳ್ಳುತ್ತಿಲ್ಲ, ಈ ಹಣಗಳನ್ನು ಇವರು ಚುನಾವಣೆಗಾಗಿ ಬಳಸಿಕೊಳ್ಳುತ್ತಿದ್ದಾರೆ. ಚುನಾವಣಾ ಆಯೋಗ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.

ರಾಂಚಿಯ ಸೈಲ್ ಸಿಟಿ ಸೇರಿದಂತೆ ಒಂಬತ್ತು ಸ್ಥಳಗಳಲ್ಲಿ ತನಿಖಾ ಸಂಸ್ಥೆ ಏಕಕಾಲದಲ್ಲಿ ದಾಳಿ ನಡೆಸುತ್ತಿದೆ. ಇಡಿಯ ಒಂದು ತಂಡ ಸೋಮವಾರ ಬೆಳಗ್ಗೆ, ರಸ್ತೆ ನಿರ್ಮಾಣ ವಿಭಾಗದ ಇಂಜಿನಿಯರ್ ವಿಕಾಸ್ ಕುಮಾರ್ ಅವರ ಮೇಲೆ ದಾಳಿಯನ್ನು ನಡೆಸಿತ್ತು. ಇನ್ನೊಂದು ತಂಡ ಬರಿಯಾತು, ಮೊರಬದಿ ಮತ್ತು ಬೋಡಿಯಾ ಪ್ರದೇಶಗಳಲ್ಲಿ ದಾಳಿ ನಡೆಸುತ್ತಿದೆ.