ಶಿವಮೊಗ್ಗ: ಎಲ್ಲ 8 ವಿಧಾನಸಭಾ ಕ್ಷೇತ್ರಗಳಲ್ಲಿನ ಮತದಾರರ ಬೆಂಬಲ ತನಗಿದೆ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಮುಖಂಡರು ಸಹ ತಾನೇ ಸೂಕ್ತ ವ್ಯಕ್ತಿ ಅಂತ ಪರಿಗಣಿಸಿದ್ದು, ಕನಿಷ್ಟ 2 ಲಕ್ಷ ಮತಗಳ ಅಂತರದಿಂದ ಗೆದ್ದು ಸಂಸತ್ ಪ್ರವೇಶಿಸಿ ನರೇಂದ್ರ ಮೋದಿಯವರ ಪರ ಕೈ ಎತ್ತುತ್ತೇನೆ ಎಂದು ಪಕ್ಷೇತರ ಅಭ್ಯರ್ಥಿ ಕೆಎಸ್ ಈಶ್ವರಪ್ಪ ತಿಳಿಸಿದರು.
ನಗರದ ಮತಗಟ್ಟಯೊಂದರಲ್ಲಿ ಕುಟುಂಬದೊಂದಿಗೆ ಮತ ಚಲಾಯಿಸಿದ ಬಳಿಕ ಮಾತನಾಡಿದ ಅವರು, ಎಲ್ಲರ ಕುತೂಹಲ ಶಿವಮೊಗ್ಗ ಕ್ಷೇತ್ರದ ಮೇಲಿರುವುದು ಸತ್ಯ ಮತ್ತು ತಾನು ಗೆಲ್ಲುತ್ತೇನೆ ಎಂಬ ನಿರೀಕ್ಷೆಯೂ ಅವರಲ್ಲಿದೆ ಎಂದು ಈಶ್ವರಪ್ಪ ಹೇಳಿದರು.
ಸೋಲು ಖಚಿತ ಅಂತ ಗೊತ್ತಾಗಿ ರಾಘವೇಂದ್ರ, ಈಶ್ವರಪ್ಪನವರು ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದಾರೆ ಅಂತ ತನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ, ಜನರ ಮುಂದೆ ಇಂಥ ಷಡ್ಯಂತ್ರಗಳೆಲ್ಲ ನಡೆಯಲ್ಲ, ಜನರಿಗೆ ಮನಸ್ಸಲ್ಲಿ ತನ್ನ ಚಿಹ್ನೆ ಅಚ್ಚು ಹಾಕಿದೆ ಎಂದು ಈಶ್ವರಪ್ಪ ಹೇಳಿದರು.
ಯಡಿಯೂರಪ್ಪ ಕಾಂಗ್ರೆಸ್ ಜೊತೆ ಒಪ್ಪಂದ ಮಾಡಿಕೊಂಡು ಗೀತಾ ಶಿವರಾಜ್ ಕುಮಾರ್ ಅವರನ್ನು ಹಾಕಿಸಿಕೊಂಡಿದ್ದಾರೆ, ಅವರೊಬ್ಬ ದುರ್ಬಲ ಅಭ್ಯರ್ಥಿ ಎಂದ ಈಶ್ವರಪ್ಪ, ಮತದಾರರಿಗೆ ರಾಘವೇಂದ್ರ ಮತ ಚಲಾಯಿಸಲು ಮನಸ್ಸಿಲ್ಲ ಹಾಗಾಗಿ ತಾನೇ ಗೆಲ್ಲೋದು ಎಂದರು.