ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಲೋಕಸಭಾ ಚುನಾವಣಾ ಪ್ರಚಾರ ಕಾರ್ಯದಲ್ಲಿ ಭಾಗಿಯಾಗುವುದಕ್ಕಾಗಿ ಅವರಿಗೆ ಮಧ್ಯಂತರ ಜಾಮೀನು ನೀಡಬಹುದೇ ಎಂಬ ಕುರಿತು ಆದ್ಯತೆಯ ಮೇಲೆ ಪರಿಗಣಿಸಲು ಸುಪ್ರೀಂ ಕೋರ್ಟ್ ಮಂಗಳವಾರ ನಿರ್ಧರಿಸಿದೆ.
ಈ ಸಂಬಂಧ ಮಂಗಳವಾರ ಮಧ್ಯಾಹ್ನದ ಹೊತ್ತಿಗೆ ತೀರ್ಪು ಪ್ರಕಟಿಸುವುದಾಗಿ ತಿಳಿಸಿದ್ದ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತ ಅವರಿದ್ದ ಪೀಠ ಮಧ್ಯಾಹ್ನ ತೀರ್ಪು ಪ್ರಕಟಿಸಲಿಲ್ಲ. ಗುರುವಾರ ಇಲ್ಲವೇ ಮುಂದಿನ ವಾರ ಅರ್ಜಿಯ ವಿಚಾರಣೆ ಮುಂದುವರೆಸುವುದಾಗಿ ಹೇಳಿತು.
ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇ ಡಿ) ತನ್ನನ್ನು ಬಂಧಿಸಿರುವುದನ್ನು ಪ್ರಶ್ನಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ವಿಚಾರ ತಿಳಿಸಿತು.
ಲೋಕಸಭೆ ಚುನಾವಣೆ ನಡೆಯುತ್ತಿದೆ. ಕೇಜ್ರಿವಾಲ್ ಅವರು ದೆಹಲಿಯ ಚುನಾಯಿತ ಮುಖ್ಯಮಂತ್ರಿಯಾಗಿದ್ದಾರೆ. ಇದೊಂದು ಅಸಾಧಾರಣ ಪ್ರಕರಣ.ಅವರು ಬೇರಾವುದೇ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂದು ನ್ಯಾಯಾಲಯ ನುಡಿಯಿತು.
ಆಗ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ʼಕೃಷಿಕ ನೆಲ ಉಳಬೇಕು ಎನ್ನುವುದಾದರೆ ಕಿರಾಣಿಯವ ಅಂಗಡಿಗೆ ತೆರಳಬೇಕು ಎನ್ನುವುದಾದರೆ ಒಬ್ಬ ಮುಖ್ಯಮಂತ್ರಿಯನ್ನು ʼಆಮ್ ಆದ್ಮಿʼ(ಜನಸಾಮಾನ್ಯ) ಗಿಂತಲೂ ಬೇರೆ ಹೇಗೆ ಕಾಣಲು ಸಾಧ್ಯ? ನಾವು ಇದೆಂತಹ ನಿದರ್ಶನ ನೀಡಲು ಹೊರಟಿದ್ದೇವೆ. ಇತರರಿಗೆ ಮುಖ್ಯಮಂತ್ರಿಗಿಂತಲೂ ಕಡಿಮೆ ಮಹತ್ವವೇ ಎಂದು ಪ್ರಶ್ನಿಸಿದರು. ಅಲ್ಲದೆ ಕೇಜ್ರಿವಾಲ್ ಅವರು ಹಲವು ಬಾರಿ ಸಮನ್ಸ್‌ನಿಂದ ನುಣುಚಿಕೊಂಡಿರುವುದನ್ನು ಪ್ರಸ್ತಾಪಿಸಿದರು.
ಆಗ ನ್ಯಾಯಾಲಯ ಕೇಜ್ರಿವಾಲ್ ಅವರು ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳುವುದರಿಂದ ಯಾವುದೇ ಹಾನಿ ಇಲ್ಲ. ರಾಜಕಾರಣಿಗಳನ್ನು ವಿಶೇಷವಾಗಿ ಪರಿಗಣಿಸಬೇಕಿಲ್ಲವಾದರೂ ಸಾರ್ವತ್ರಿಕ ಚುನಾವಣೆಗಳು ಐದು ವರ್ಷಕ್ಕೊಮ್ಮೆ ನಡೆಯಲಿದ್ದು ಈಗಾಗಲೇ ಮತದಾನ ಆರಂಭವಾಗಿರುವ ನೆಲೆಯಲ್ಲಿ ಯೋಚಿಸುತ್ತಿದ್ದೇವೆ ಎಂದಿತು.
ಇದೇ ವೇಳೆ ಕೇಜ್ರಿವಾಲ್ ಅವರ ಪರ ಹಾಜರಿದ್ದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರನ್ನು ಉದ್ದೇಶಿಸಿ ನ್ಯಾಯಾಲಯ ಕೇಜ್ರಿವಾಲ್ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದರೂ ಅವರು ಮುಖ್ಯಮಂತ್ರಿಯಾಗಿ ಯಾವುದೇ ಅಧಿಕೃತ ಕರ್ತವ್ಯ ನಿಭಾಯಿಸುವಂತಿಲ್ಲ ಎಂದು ಸ್ಪಷ್ಟಪಡಿಸಿತು.
ಸರ್ಕಾರ ಮುನ್ನಡೆಸುವ ಭಾಗವಾಗಿ ಕೇಜ್ರಿವಲ್ ಅವರು ನಿರ್ಧಾರ ಕೈಗೊಂಡರೆ ಅದು ಹಿತಾಸಕ್ತಿ ಸಂಘರ್ಷಕ್ಕೆ ಕಾರಣವಾಗುತ್ತದೆ. ಅದನಕ್ಕೆ ಅವಕಾಶ ನೀಡುವುದಿಲ್ಲ. ಚುನಾವಣಾ ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳಲಿ ಎಂಬ ಉದ್ದೇಶದಿಂದ ಮಾತ್ರ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕಾಗುತ್ತದೆ ಎಂದಿತು.
ಅಲ್ಲದೆ ಬಂಧಿಸುವ ಅಧಿಕಾರಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯ ಸೆಕ್ಷನ್ 19ರ ಅಡಿಯಲ್ಲಿ ಮಾನದಂಡಗಳನ್ನು ನಿಗದಿಪಡಿಸಲು ಬಯಸುವುದಾಗಿ ತಿಳಿಸಿತು.
ವಿಚಾರಣೆಯ ಆರಂಭದಲ್ಲಿ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು ಅವರು ತನಿಖೆ ಆರಂಭವಾದಾಗ ಅರವಿಂದ್ ಕೇಜ್ರಿವಾಲ್ ಮೇಲೆ ಕೇಂದ್ರೀಕೃತವಾಗಿರಲಿಲ್ಲ. ತನಿಖೆ ಮುಂದುವರೆದಾಗ, ಅವರನ್ನು ಹೆಸರಿಸಲಾಯಿತು ಮತ್ತು ಅವರ ಪಾತ್ರವು ಸ್ಪಷ್ಟವಾಯಿತು ಎಂದರು.
ತನಿಖೆ ಆರಂಭವಾದ ಅವಧಿಯನ್ನೂ ಕೇಜ್ರಿವಾಲ್ ಬಂಧನವಾದ ಅವಧಿಯ ಕುರಿತು ಪ್ರಸ್ತಾಪಿಸಿದ ನ್ಯಾಯಾಲಯ ತನಿಖಾ ಸಂಸ್ಥೆ ಎರಡು ವರ್ಷಗಳ ಕಾಲ ತನಿಖೆ ನಡೆಸುವುದು ಒಳ್ಳಯದಲ್ಲ ಎಂದಿತು.
ಈ ಹಂತದಲ್ಲಿ ಎಎಸ್‌ಜಿ ಅವರು ಕೇಜ್ರಿವಾಲ್ ಅವರು ಗೋವಾ ವಿಧಾನಸಭಾ ಚುನಾವಣೆ ವೇಳೆ ಸೆವೆನ್ ಸ್ಟಾರ್ ಹೋಟೆಲ್‌ನಲ್ಲಿ ತಂಗಿದ್ದರು. ಆ ಹೋಟೆಲ್ ಬಿಲ್ಲನ್ನು ಚನ್‌ಪ್ರೀತ್ ಸಿಂಗ್ ಪಾವತಿಸಿದ್ದರು. ಚುನಾವಣಾ ಪ್ರಚಾರಕ್ಕಾಗಿ ಆಮ್ ಆದ್ಮಿ ಪಕ್ಷಕ್ಕೆ ನಗದು ರೂಪದಲ್ಲಿ ನೀಡಿದ್ದ ಹಣವನ್ನು ಸಿಂಗ್ ಸ್ವೀಕರಿಸಿದ್ದರು ಎಂಬ ಆರೋಪ ಇದೆ ಎಂದರು.
ಬಂಧನದ ಆಧಾರಗಳು ಮತ್ತು ನಂಬುವ ಕಾರಣಗಳು ಒಂದೇ ಆಗಿರುಬೇಕು. ನಂಬುವ ಕಾರಣಗಳು ಬಂಧನದ ಆಧಾರಗಳಿಗಿಂತ ಹೆಚ್ಚು ವಿಸ್ತಾರವಾಗಿರಬೇಕು. ಅದಕ್ಕಾಗಿ ಸ್ವಲ್ಪ ಕಷ್ಟ ಪಡಬೇಕು ಎಂದು ನ್ಯಾಯಾಲಯ ಕಿವಿಮಾತು ಹೇಳಿತು.
ಅಲ್ಲದೆ ಕೇಜ್ರಿವಾಲ್ ಅವರನ್ನು ಆರೋಪಿಯಾಗಿಸುವಂಗಹ ಹೇಳಿಕೆಗಳನ್ನು ದಾಖಲೆಯಲ್ಲಿ ಸಲ್ಲಿಸುವಂತೆಯೂ ನ್ಯಾಯಾಲಯ ಸೂಚಿಸಿತು.