ಮಂಡ್ಯ: ಕೆರಗೋಡು ಗ್ರಾಮದಲ್ಲಿನ ಹನುಮ ಧ್ವಜ ತೆರವು ಪ್ರಕರಣಕ್ಕೆ ಸಂಬಂದಿಸಿದಂತೆ ಪ್ರತಿಭಟನೆಯ ಭಾಗಿಯಾಗಿದ್ದ ಹಿಂದೂ ಕಾರ್ಯಕರ್ತರಿಗೆ ಕೆರಗೋಡು ಠಾಣೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
ಅಲ್ಲದೆ ರೌಡಿ ಶೀಟ್ ತೆರೆಯುವ ಸಂಬಂಧ ಏಳು ದಿನದೊಳಗೆ ಉತ್ತರ ನೀಡುವಂತೆ ಸೂಚನೆ ನೀಡಿದ್ದಾರೆ.
ಧ್ವಜ ಸ್ಥಂಭ ವಿಚಾರದಲ್ಲಿ ಅನ್ಯಕೋಮಿನ ಜನರನ್ನು ಹೆದರಿಸುವುದು, ಬೆದರಿಸುವುದು, ಅವಾಚ್ಯ ಶಬ್ದಗಳಿಂದ ನಿಂದಿಸಿ, ಪ್ರಚೋದನೆ ನೀಡಿದ್ದೀರಿ. ಹಾಗೂ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ನಿರಂತರವಾಗಿ ಸಕ್ರೀಯವಾಗಿರುವುದರಿಂದ ಏಕೆ ನಿಮ್ಮ ಮೇಲೆ ಕರಗೋಡು ಪೊಲೀಸ್ ಠಾಣೆಯಲ್ಲಿ ರೌಡಿ ಶೀಟ್ ತೆರೆಯಬಾರದೆಂದು ನಿಮ್ಮ ಸಮಜಾಯಿಸಿಯನ್ನು ಈ ನೋಟಿಸ್ ತಲುಪಿದ ಏಳು ದಿನಗಳ ಒಳಗೆ ಠಾಣೆಗೆ ಹಾಜರಾಗಿ ಮಾಹಿತಿ ಸಲ್ಲಿಸಬೇಕು ಎಂದು ಕೆರಗೋಡು ಠಾಣೆ ಪೊಲೀಸರು ವಿಶ್ವ ಹಿಂದೂ ಪರಿಷತ್ನ ಮೈಸೂರು ಭಾಗದ ಸಹಕಾರ್ಯದರ್ಶಿ ಚಿಕ್ಕಬಳ್ಳಿ ಬಾಲು, ಕಾರ್ತಿಕ್, ಹರೀಶ್ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ.
ಈ ಮೂವರ ವಿರುದ್ಧ ಗಲಭೆಗೆ ಪ್ರಚೋದನೆ ಆರೋಪದಡಿ ಕಲಂ 143, 341, 353, 149 ಸೆಕ್ಷನ್ ಅಡಿಯಲ್ಲಿ ಈಗಾಗಲೇ ಪ್ರಕರಣ ದಾಖಲಾಗಿದೆ.
ಇನ್ನು ರೌಡಿ ಶೀಟ್ ತೆರೆಯುವ ಬಗ್ಗೆ ಪೊಲೀಸರು ನೋಟಿಸ್ ನೀಡಿರುವುದನ್ನು ಖಂಡಿಸಿ ವಕೀಲರು ಹಾಗೂ ಹಿಂದೂ ಕಾರ್ಯಕರ್ತರು ಇಂದು (ಮೇ 11) ಬೆಳಗ್ಗೆ 11 ಗಂಟೆಗೆ ಕೆರಗೋಡಿನಲ್ಲಿ ಪ್ರತಿಭಟನೆ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿದ್ದಾರೆ. ವಿವಾದಿತ ಧ್ವಜಸ್ತಂಭದಿಂದ ಪೊಲೀಸ್ ಠಾಣೆವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಿದ್ದಾರೆ. ರಾಜ್ಯ ಸರ್ಕಾರ ಹಿಂದೂ ಕಾರ್ಯಕರ್ತರ ಹೋರಾಟ ಹತ್ತಿಕ್ಕಲು ಮುಂದಾಗಿದೆ. ಪೊಲೀಸರ ಮೂಲಕ ಹಿಂದೂ ಕಾರ್ಯಕರ್ತರಿಗೆ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಪ್ರತಿಭಟನೆ ಮಾಡಲಿದ್ದಾರೆ.