ಮನೆ ರಾಷ್ಟ್ರೀಯ ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್‌ ರಾಜೀನಾಮೆ

ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್‌ ರಾಜೀನಾಮೆ

0

ನವದೆಹಲಿ (New Delhi)-ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರು ರಾಜೀನಾಮೆ ಸಲ್ಲಿಸಿದ್ದಾರೆ.

ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ಅನಿಲ್ ಬೈಜಾಲ್ ಅವರು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ.

ಈ ಹಿಂದೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ಆಗಿದ್ದ ನಜೀಬ್ ಜಂಗ್ ಅವರ ಹಠಾತ್ ರಾಜೀನಾಮೆಯ ನಂತರ 2016, ಡಿಸೆಂಬರ್ 31 ರಂದು ದೆಹಲಿ ಲೆಫ್ಟಿನೆಂಟ್ ಗವರ್ನರ್ ಆಗಿ ಅನಿಲ್ ಬೈಜಾಲ್ ಅವರು ಅಧಿಕಾರ ವಹಿಸಿಕೊಂಡಿದ್ದರು.

ನಿವೃತ್ತ ಐಎಎಸ್ ಅಧಿಕಾರಿ ಅನಿಲ್ ಬೈಜಾಲ್ ಅವರು ಡಿಸೆಂಬರ್ 31, 2021ಕ್ಕೆ ಐದು ವರ್ಷಗಳ ಅಧಿಕಾರವನ್ನು ಪೂರ್ಣಗೊಳಿಸಿದ್ದರು. ದೆಹಲಿ ಲೆಫ್ಟಿನೆಂಟ್ ಗವರ್ನರ್ ಹುದ್ದೆಗೆ ಯಾವುದೇ ನಿಶ್ಚಿತ ಅಧಿಕಾರಾವಧಿ ಇಲ್ಲ. ಆದಾಗ್ಯೂ ಅನಿಲ್ ಬೈಜಾಲ್ ಅವರು ಇಂದು ರಾಷ್ಟ್ರಪತಿಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅನಿಲ್ ಬೈಜಾಲ್ ಕೇಂದ್ರಾಡಳಿತ ಪ್ರದೇಶದ ಕೇಡರ್‌ನ 1969 ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿದ್ದು, ಅವರು ದೆಹಲಿ ಅಭಿವೃದ್ಧಿ ಪ್ರಾಧಿಕಾರದ(ಡಿಡಿಎ) ಉಪಾಧ್ಯಕ್ಷರಾಗಿ ಮತ್ತು ಪ್ರಸಾರ ಭಾರತಿ ಮತ್ತು ಇಂಡಿಯನ್ ಏರ್‌ಲೈನ್ಸ್‌ನಂತಹ ಪ್ರಮುಖ ಸಾರ್ವಜನಿಕ ವಲಯದ ಕಂಪನಿಗಳ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ.

2004ರಲ್ಲಿ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದಾಗ ಈ ಮಾಜಿ ಅಧಿಕಾರಿಯನ್ನು ಕೇಂದ್ರ ಗೃಹ ಕಾರ್ಯದರ್ಶಿ ಸ್ಥಾನದಿಂದ ತೆಗೆದುಹಾಕಲಾಗಿತ್ತು.