ವಿಜಯಪುರ: ಜಮೀನು ತತ್ಕಾಲ ಪೋಡಿ ಮಾಡಲು ಲಂಚ ಸ್ವೀಕರಿಸುವಾಗ ಸರ್ವೇಯರ್ ಹಾಗೂ ಮಧ್ಯವರ್ತಿ ಹಣದ ಸಮೇತ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಪ್ರಕಾಶ ಸಿಂಗೆ ಎಂಬ ರೈತ ನಾಲ್ಕು ಎಕರೆ ಜಮೀನು ತತ್ಕಾಲ್ ಪೋಡಿ ಮಾಡಲು ಅರ್ಜಿ ಹಾಕಿದ್ದರು. ಸದರಿ ತತ್ಕಾಲ ಪೋಡಿ ಮಾಡಲು ಸರ್ವೇಯರ್ ಮಲ್ಲಪ್ಪ ಜಂಬಗಿ ಮಧ್ಯವರ್ತಿ ಗುರುದತ್ ಬಿರಾದಾರ್ ಸೇರಿ 47,500 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಹಣ ಕೊಡಲು ಇಷ್ಟವಿಲ್ಲದ ರೈತ ಪ್ರಕಾಶ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಬಳಿಕ ರೈತ ಪ್ರಕಾಶ ಅವರಿಂದ ಲಂಚ ಸ್ವೀಕರಿಸುವಾಗ ಲೋಕಾಯುಕ್ತರು ದಾಳಿ ನಡೆಸಿ ಹಣದ ಸಮೇತ ಸರ್ವೇಯರ್ ಮಲ್ಲಪ್ಪ ಜಂಬಗಿ, ಸಹಾಯಕ ಗುರುದತ್ ಬಿರಾದಾರರನ್ನೂ ಬಂಧಿಸಿದ್ದಾರೆ.
ಲೋಕಾಯುಕ್ತ ವಿಜಯಪುರ ಎಸ್ಪಿ ಮಲ್ಲೇಶ, ಡಿಎಸ್ಪಿ ಸುರೇಶರೆಡ್ಡಿ, ಸಿಪಿಐ ಆನಂದ ಟಕ್ಕನವರ, ಆನಂದ ದೋಣಿ ಇವರಿದ್ದ ಲೋಕಾಯುಕ್ತ ತಂಡ ಯಶಸ್ವಿ ಕಾರ್ಯಾಚರಣೆ ನಡೆಸಿದೆ.