ಮನೆ ಕಾನೂನು ಮಕ್ಕಳ ಸುಪರ್ದಿಗೆ ಕೋರುವವರು ತಮ್ಮ ವ್ಯಾಪ್ತಿಯಲ್ಲಿನ ನ್ಯಾಯಾಲಯದಲ್ಲೇ ಅರ್ಜಿ ಸಲ್ಲಿಸಬೇಕು: ಹೈಕೋರ್ಟ್

ಮಕ್ಕಳ ಸುಪರ್ದಿಗೆ ಕೋರುವವರು ತಮ್ಮ ವ್ಯಾಪ್ತಿಯಲ್ಲಿನ ನ್ಯಾಯಾಲಯದಲ್ಲೇ ಅರ್ಜಿ ಸಲ್ಲಿಸಬೇಕು: ಹೈಕೋರ್ಟ್

0

ಬೆಂಗಳೂರು: ಮಕ್ಕಳ ಸುಪರ್ದಿಗೆ ಕೋರುವವರು ತಾವು ನೆಲೆಸಿರುವ ವ್ಯಾಪ್ತಿಯಿಂದ ಹೊರಭಾಗಗಳ ನ್ಯಾಯಾಲಯಗಳಲ್ಲಿ ಅರ್ಜಿ ಸಲ್ಲಿಸುವುದಕ್ಕೆ ಅವಕಾಶವಿಲ್ಲ ಎಂದು ಹೈಕೋರ್ಟ್ ತಿಳಿಸಿದೆ.

Join Our Whatsapp Group

ಚಾಮರಾಜನಗರ ಜಿಲ್ಲೆಯ ನಿವಾಸಿಗಳಾದ ಸಮೀವುಲ್ಲಾ ಮತ್ತು ಮುಬೀನ್ ತಾಜ್ ದಂಪತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿದೆ.

ಪ್ರಕರಣದಲ್ಲಿ ಅರ್ಜಿದಾರರ ಮೊಮ್ಮಗು ಚಾಮರಾಜನಗರದಲ್ಲಿ ನೆಲೆಸಿದೆ. ಮಗುವಿನ ಸುಪರ್ದಿ ಕೋರಿ ತಂದೆ ಮೈಸೂರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಸುಪ್ರಿಂ ಕೋರ್ಟ್ ತೀರ್ಪಿನ ಪ್ರಕಾರ ಮಗುವಿನ ಸುಪರ್ದಿಗೆ ಕೋರಿ ಎಲ್ಲೆಂದರಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಮಗು ನೆಲೆಸಿರುವ ವ್ಯಾಪ್ತಿಯ ಸ್ಥಳೀಯ ನ್ಯಾಯಾಲಯಕ್ಕೇ ಅರ್ಜಿ ಸಲ್ಲಿಸಬೇಕು. ಅದರಂತೆ ತಂದೆಯು ಚಾಮರಾಮನಗರದ ಸಂಬಂಧಪಟ್ಟ ನ್ಯಾಯಾಲಯಲ್ಲಿಯೇ ಮಗುವಿನ ಸುಪರ್ದಿಗೆ ಅರ್ಜಿ ಸಲ್ಲಿಸಬೇಕು ಎಂದು ನ್ಯಾಯಪೀಠ ತಿಳಿಸಿದೆ.

ಪ್ರಸ್ತುತ ಮಗು ಚಾಮರಾಜನಗರ ಜಿಲ್ಲೆಯಲ್ಲಿ ನೆಲೆಸಿರುವ ಕಾರಣ ಅಲ್ಲಿನ ಸ್ಥಳೀಯ ನ್ಯಾಯಾಲಯವು ಪ್ರಕರಣದ ವಿಚಾರಣೆ ನಡೆಸಬೇಕಿದೆ. ಮೈಸೂರಿನ ಕೌಟುಂಬಿಕ ನ್ಯಾಯಾಲಯವು ಮಗುವಿನ ತಂದೆಯ ಅರ್ಜಿಯನ್ನು ವಿಚಾರಣೆ ನಡೆಸಲು ಪ್ರಾದೇಶಿಕ ವ್ಯಾಪ್ತಿ ಹೊಂದಿಲ್ಲ ಎಂದು ಪೀಠ ಹೇಳಿದೆ. ಅಂತಿಮವಾಗಿ, ಮೈಸೂರು ನ್ಯಾಯಾಲಯದ ಆದೇಶ ರದ್ದುಪಡಿಸಿ, ಮಗು ನೆಲೆಸಿರುವ ಪ್ರದೇಶ ವ್ಯಾಪ್ತಿಯ ನ್ಯಾಯಾಲಯಕ್ಕೆ ತಂದೆ ಅರ್ಜಿ ಸಲ್ಲಿಸುವಂತೆ ನಿರ್ದೇಶಿಸಿದೆ.

ಪ್ರಕರಣದ ಹಿನ್ನೆಲೆ: ಅರ್ಜಿದಾರ ಸಮೀವುಲ್ಲಾ ಅವರ ಪುತ್ರಿ ಮೊಹಮ್ಮದ್ ಸಮೀರ್ (ಮಗುವಿನ ತಂದೆ) ಎಂಬುವರನ್ನು ಮದುವೆಯಾಗಿದ್ದರು. ಅವರಿಗೆ ಮಗು ಜನಿಸಿತ್ತು. ಬಳಿಕ 2021ರ ಮೇ 6ರಂದು ಅರ್ಜಿದಾರರ ಪುತ್ರಿ ನಿಧನರಾಗಿದ್ದಾರೆ. ಬಳಿಕ ಮೊಮ್ಮಗುವನ್ನು ತಮ್ಮ ಬಳಿಯೇ ಇರಿಸಿಕೊಂಡಿದ್ದರು. ಮಗು ಮತ್ತು ಸಮೀವುಲ್ಲಾ ಚಾಮರಾಜನಗರದಲ್ಲಿ ನೆಲೆಸಿದ್ದಾರೆ. ಈ ನಡುವೆ ಮಗುವಿನ ಸುಪರ್ದಿಯನ್ನು ತನಗೆ ಒಪ್ಪಿಸಲು ಆದೇಶಿಸಬೇಕು ಎಂದು ಕೋರಿ ತಂದೆ, 2021 ರ ಡಿ. 21ರಂದು ಮೈಸೂರಿನ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನು ಚಾಮರಾಜನಗರ ಕೌಟುಂಬಿಕ ನ್ಯಾಯಾಲಯಕ್ಕೆ ವರ್ಗಾಯಿಸಬೇಕು ಎಂದು ಕೋರಿ ಸಮೀವುಲ್ಲಾ ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಅದನ್ನು ತಿರಸ್ಕರಿಸಿ ಮೈಸೂರಿನ 3ನೇ ಹೆಚ್ಚುವರಿ ಪ್ರಧಾನ ಕೌಟುಂಬಿಕ ನ್ಯಾಯಾಲಯ 2023ರ ಫೆ. 3ರಂದು ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ಮಗುವಿನ ಅಜ್ಜಿ-ತಾತನ (ತಾಯಿಯ ಪೋಷಕರು) ಪರ ವಕೀಲರು, ”ಅರ್ಜಿದಾರರೊಂದಿಗೆ ಮಗು ಚಾಮರಾಜನಗರ ಜಿಲ್ಲೆಯ ಯಳಂದೂರಿನಲ್ಲಿ ನೆಲೆಸಿದೆ. ಮಗುವಿನ ತಂದೆ ಮೈಸೂರಿನ ನಿವಾಸಿ. ಮಗುವಿನ ಸುಪರ್ದಿಗೆ ಕೋರುವ ಅರ್ಜಿಯನ್ನು ಮಗು ನೆಲೆಸಿರುವ ಪ್ರದೇಶ ವ್ಯಾಪ್ತಿಯ ನ್ಯಾಯಾಲಯಕ್ಕೆ ಸಲ್ಲಿಸಬೇಕಿದೆ. ಅದು ಬಿಟ್ಟು ಸಂಬಂಧಿಗಳು, ತಂದೆ ಅಥವಾ ತಾಯಿ ನೆಲೆಸಿರುವ ವ್ಯಾಪ್ತಿಯ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವಂತಿಲ್ಲ. ಆದ್ದರಿಂದ ಮಗುವಿನ ತಂದೆಯ ಅರ್ಜಿಯನ್ನು ಚಾಮರಾಜನಗರ ನ್ಯಾಯಾಲಯಕ್ಕೆ ವರ್ಗಾಯಿಸಲು ಕೋರಿದ ಅರ್ಜಿದಾರರ ಮನವಿ ತಿರಸ್ಕರಿಸಿದ ಮೈಸೂರಿನ ನ್ಯಾಯಾಲಯದ ಕ್ರಮ ದೋಷಪೂರಿತವಾಗಿದೆ” ಎಂದು ವಾದ ಮಂಡಿಸಿದರು.

ಈ ವಾದ ಆಕ್ಷೇಪಿಸಿದ ಪ್ರತಿವಾದಿಯಾದ ಮಗುವಿನ ತಂದೆ ಪರ ವಕೀಲರು, ”ಪ್ರತಿವಾದಿ ಮೈಸೂರಿನ ನಿವಾಸಿ. ಅವರ ಪತ್ನಿ ಸಾವನ್ನಪ್ಪಿದ ನಂತರ ಮಗು ಅರ್ಜಿದಾರರ ಸುಪರ್ದಿಯಲ್ಲಿದೆ. ಹಾಗಾಗಿ, ಮಗುವಿನ ಸುಪರ್ದಿಗಾಗಿ ಮೈಸೂರಿನ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿರುವುದು ಸೂಕ್ತವಾಗಿದೆ. ಚಾಮರಾಜನಗರ ಕೋರ್ಟ್‌ಗೆ ವರ್ಗಾಯಿಸಬೇಕು ಎಂಬ ಅರ್ಜಿದಾರರ ವಾದ ತಿರಸ್ಕರಿಸಿದ ಅಧೀನ ನ್ಯಾಯಾಲಯದ ನ್ಯಾಯೋಚಿತವಾಗಿದೆ” ಎಂದು ಪ್ರತಿವಾದ ಮಂಡಿಸಿದ್ದರು.