ಮನೆ ರಾಜ್ಯ 5 ಕೋಟಿ ಸಸಿಗಳಲ್ಲಿ ಬದುಕುಳಿದಿದ್ದೆಷ್ಟು?: ಆಡಿಟ್ ವರದಿ ಸಲ್ಲಿಸಲು 3 ತಿಂಗಳ ಗಡುವು- ಈಶ್ವರ ಖಂಡ್ರೆ

5 ಕೋಟಿ ಸಸಿಗಳಲ್ಲಿ ಬದುಕುಳಿದಿದ್ದೆಷ್ಟು?: ಆಡಿಟ್ ವರದಿ ಸಲ್ಲಿಸಲು 3 ತಿಂಗಳ ಗಡುವು- ಈಶ್ವರ ಖಂಡ್ರೆ

0

ಬೆಂಗಳೂರು, ಮೇ 18: ಕಳೆದ ವರ್ಷ ಜುಲೈನಲ್ಲಿ ನಡೆದ ವನಮಹೋತ್ಸವದ ಸಂದರ್ಭದಲ್ಲಿ ಅರಣ್ಯ ಇಲಾಖೆಯಿಂದ ನಡೆಲಾದ 5 ಕೋಟಿ ಸಸಿಗಳ ಪೈಕಿ ಎಷ್ಟು ಬದುಕುಳಿದಿವೆ ಎಂಬ ಬಗ್ಗೆ ಆಡಿಟ್ ವರದಿಯನ್ನು 3 ತಿಂಗಳೊಳಗಾಗಿ ಸಲ್ಲಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಆದೇಶ ನೀಡಿದ್ದಾರೆ.

Join Our Whatsapp Group


ಬೆಂಗಳೂರಿನ ಅರಣ್ಯ ಭವನದಲ್ಲಿಂದು ನಡೆದ ಅರಣ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಪ್ರಸಕ್ತ ಸಾಲಿನಲ್ಲಿ ಎಷ್ಟು ಸಸಿಗಳನ್ನು ನೆಡಲು ಯೋಜನೆ ರೂಪಿಸಲಾಗಿದೆ. ಇಲಾಖೆಯ ನರ್ಸರಿಗಳಲ್ಲಿ ಎಷ್ಟು ಎತ್ತರದ ಸಸಿ ಬೆಳೆಸಲಾಗಿದೆ ಎಂಬ ಬಗ್ಗೆ 7 ದಿನಗಳೊಳಗಾಗಿ ಮಾಹಿತಿ ನೀಡುವಂತೆಯೂ ತಿಳಿಸಿದರು.
ವನ್ಯಜೀವಿಗಳ ಅಂಗಾಂಗಗಳಿಂದ ತಯಾರಿಸಿದ ಉತ್ಪನ್ನಗಳನ್ನು, ಟ್ರೋಫಿ, ಫಲಕಗಳನ್ನು ಸರ್ಕಾರಕ್ಕೆ ಮರಳಿಸಲು ನೀಡಲಾಗದ್ದ ಗಡುವು ಏಪ್ರಿಲ್ 9ರಂದು ಮುಕ್ತಾಯವಾಗಿದ್ದು, ಕೆಲವರು ಹೈಕೋರ್ಟ್ ನಲ್ಲಿ ತಡೆಯಾಜ್ಞೆ ತಂದ ಹಿನ್ನೆಲೆಯಲ್ಲಿ ಉಂಟಾಗಿರುವ ಗೊಂದಲದಿಂದಾಗಿ ಮತ್ತೆ 2-3 ತಿಂಗಳುಗಳ ಕಾಲ ಹೆಚ್ಚಿನ ಕಾಲಾವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ನ್ಯಾಯಾಲಯದ ತೀರ್ಪು ಬಂದ ಬಳಿಕ ಈ ಬಗ್ಗೆ ಕಾನೂನು ಇಲಾಖೆಯ ಸಲಹೆ ಪಡೆದು ನಿರ್ಧರಿಸೋಣ ಎಂದರು.
ಅರಣ್ಯ ಮತ್ತು ಪಟ್ಟಾ ಭೂಮಿಯಲ್ಲಿ ಮರಗಳ ಅಕ್ರಮ ಕಡಿತಲೆ ಆಗುತ್ತಿರುವ ಬಗ್ಗೆ ಸತತ ದೂರುಗಳು ಬರುತ್ತಿದ್ದು, ನಿರ್ಲಕ್ಷ್ಯ ವಹಿಸುವ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವ ಎಚ್ಚರಿಕೆಯನ್ನು ಅರಣ್ಯ ಸಚಿವರು ನೀಡಿದರು. ಕೊಡಗು ಜಿಲ್ಲೆಯ ವೀರಾಜಪೇಟೆಯ ಬಳಿ ಸಾವಿರಾರು ಮರಗಳನ್ನು ಅಕ್ರಮವಾಗಿ ಕಡಿಯಲಾಗಿದೆ ಎಂಬ ದೂರಿನ ಕುರಿತಂತೆ ಎ.ಪಿ.ಸಿಸಿ.ಎಫ್. ದರ್ಜೆಯ ಅಧಿಕಾರಿಯಿಂದ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದರು.


ಅರಣ್ಯ ಒತ್ತುವರಿ ಸಹ ಅವ್ಯಾಹತವಾಗಿ ನಡೆಯುತ್ತಿದ್ದು, ನಿರಂತರವಾಗಿ ಉಪಗ್ರಹ ಚಿತ್ರ ಪರಿಶೀಲಿಸಿ ಮರ ಕಡದು, ಅರಣ್ಯ ಭೂಮಿ ಒತ್ತುವರಿ ಮಾಡುವವರ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕ್ರಮ ವಹಿಸುವಂತೆ ಹಾಗೂ ಒಂದೊಮ್ಮೆ ಅರಣ್ಯ ಇಲಾಖೆಯೇ ಪಟ್ಟಾ ಜಮೀನಿನ ಸ್ವಾಧೀನದಲ್ಲಿದ್ದರೆ ಅಂತಹ ಜಮೀನುಗಳನ್ನು ನಿಯಮ ಮತ್ತು ಸರ್ಕಾರದ ಆದೇಶದ ರೀತ್ಯ ಇತ್ಯರ್ಥಪಡಿಸಿ, ಜನರಿಗೆ ಆಗುತ್ತಿರುವ ಕಿರುಕುಳ ತಪ್ಪಿಸುವಂತೆ ಅರಣ್ಯ ಸಚಿವರು ಸೂಚಿಸಿದರು.
ಅರಣ್ಯ ಸ್ವರೂಪ ಇರುವ ಗೋಮಾಳ ರಕ್ಷಿಸಲು ಎನ್.ಜಿ.ಟಿ. ಆದೇಶ ನೀಡಿದ್ದು, ಈ ಸಂಬಂಧ ಸಮೀಕ್ಷೆ ನಡೆಸಿ, ಕಂದಾಯ ಇಲಾಖೆಯ ಸಹಯೋಗದಲ್ಲಿ ಅರಣ್ಯ ಸ್ವರೂಪದ ಸರ್ಕಾರಿ ಭೂಮಿಗಳ ಸಂರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಪರಿಭಾವಿತ ಅರಣ್ಯ (ಡೀಮ್ಡ್ ಫಾರೆಸ್ಟ್)ಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿ ವಿಸ್ತೀರ್ಣ ಕಡಿಮೆ ಮಾಡಿದ ಬಳಿಕವೂ ಸರ್ಕಾರಿ ಆಸ್ಪತ್ರೆ, ಅಂಗನವಾಡಿ, ಪಟ್ಟಾ ಭೂಮಿ ಇದರಲ್ಲಿ ಸೇರಿದ್ದು, ಜಂಟಿ ಸರ್ವೆಯನ್ನು ತ್ವರಿತವಾಗಿ ನಡೆಸಿ, ಕಾನೂನು ಇಲಾಖೆ ಸಲಹೆ ಪಡೆದು ಮತ್ತೊಮ್ಮೆ ಸುಪ್ರೀಂಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿ ಈ ಸಮಸ್ಯೆ ಪರಿಹರಿಸಲು ಕ್ರಮ ವಹಿಸುವಂತೆ ಸೂಚನೆ ನೀಡಿದರು.
ಸೆಕ್ಷನ್ 4ರಿಂದ ಸೆಕ್ಷನ್ 17 ಮಾಡುವ ಮತ್ತು ಸೆಕ್ಷನ್ 33ರಡಿ ಅರಣ್ಯ ಎಂದು ಘೋಷಿಸುವ ಪ್ರಕ್ರಿಯೆ ತುಂಬಾ ವಿಳಂಬ ಆಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಈ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಆದೇಶ ನೀಡಿದರು.
ಖಾಲಿ ಹುದ್ದೆಯ ಮಾಹಿತಿ ಪಡೆದ ಸಚಿವರು:
ಅರಣ್ಯ ಇಲಾಖೆಯಲ್ಲಿನ ಹಾಲಿ ನೇಮಕಾತಿ ಪ್ರಕ್ರಿಯೆ ಮತ್ತು ಬಾಕಿ ಇರುವ ಖಾಲಿ ಹುದ್ದೆಗಳ ಭರ್ತಿಗೆ ಅದರಲ್ಲೂ ಕಲ್ಯಾಣ ಕರ್ನಾಟಕ ಭಾಗದ ನೇಮಕಾತಿಗೆ ಕೈಗೊಂಡಿರುವ ಕ್ರಮಗಳ ವಿವರ ಪಡೆದ ಸಚಿವರು, ತ್ವರಿತವಾಗಿ ನೇಮಕಾತಿ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ಮಾಡುವಂತೆ ಸೂಚನೆ ನೀಡಿದರು.
ಡಿ.ಆರ್.ಎಫ್.ಓ.ಗಳ ವರ್ಗಾವಣೆಯನ್ನು ಕೌನ್ಸಿಲಿಂಗ್ ಮೂಲಕ ಮಾಡಲು ಎಲ್ಲ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ ಈಶ್ವರ ಖಂಡ್ರೆ, ವಾಚರ್ ಮತ್ತು ಹೊರಗುತ್ತಿಗೆ ಸಿಬ್ಬಂದಿಯ ವೇತನವನ್ನು ಸಕಾಲದಲ್ಲಿ ಮಾಡಲು ಸೂಚಿಸಿದರು.
ಆನ್ ಲೈನ್ ಬುಕ್ಕಿಂಗ್:
ಅರಣ್ಯ ಇಲಾಖೆಯ ಸಫಾರಿ ಸೇರಿದಂತೆ ಎಲ್ಲ ಹಣ ಸ್ವೀಕೃತಿಗೆ ಆನ್ ಲೈನ್ ಮತ್ತು ಕಂಪ್ಯೂಟರೈಸ್ಡ್ ಬಿಲ್ ನೀಡಲು ತ್ವರಿತವಾಗಿ ಕ್ರಮ ವಹಿಸುವಂತೆ ಮತ್ತು ರಾಜ್ಯದ ಎಲ್ಲ ಚಾರಣ ಪಥಗಳಲ್ಲಿ ಆನ್ ಲೈನ್ ಬುಕ್ಕಿಂಗ್ ವ್ಯವಸ್ಥೆಯನ್ನು ಜಾರಿ ಮಾಡಲು ಇನ್ನೊಂದು ತಿಂಗಳೊಳಗೆ ತಂತ್ರಾಂಶ ಮತ್ತು ವೆಬ್ ಸೈಟ್ ರೂಪಿಸುವಂತೆ ತಿಳಿಸಿದರು.
ಸಭೆಯಲ್ಲಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಮಂಜುನಾಥ ಪ್ರಸಾದ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಅರಣ್ಯ ಪಡೆ ಮುಖ್ಯಸ್ಥರಾದ ಬ್ರಿಜೇಶ್ ದೀಕ್ಷಿತ್, ವನ್ಯಜೀವಿ ವಿಭಾಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸುಭಾಷ್ ಮಾಲ್ಕಡೆ ಸೇರಿದಂತೆ ಉನ್ನತ ಅಧಿಕಾರಿಗಳು ಪಾಲ್ಗೊಂಡಿದ್ದರು.