ಮನೆ ಕಾನೂನು ಪ್ರೀತಿಸಿ ವಿವಾಹವಾದ ಅಂತರ್‌ಧರ್ಮಿಯ ಜೋಡಿ ಒಂದಾಗಿರಲು ಹೈಕೋರ್ಟ್ ಅವಕಾಶ

ಪ್ರೀತಿಸಿ ವಿವಾಹವಾದ ಅಂತರ್‌ಧರ್ಮಿಯ ಜೋಡಿ ಒಂದಾಗಿರಲು ಹೈಕೋರ್ಟ್ ಅವಕಾಶ

0

ಬೆಂಗಳೂರು: ವಿದೇಶದಲ್ಲಿ ನೆಲೆಸಿದ್ದ ಅನ್ಯಕೋಮಿನ ಯುವಕನೊಂದಿಗೆ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್​ನಲ್ಲಿ ಪರಿಚಯವಾಗಿ ಪ್ರೀತಿಸಿ ವಿವಾಹವಾಗಲು ಮನೆಯಿಂದ ಪರಾರಿಯಾಗಿದ್ದ ಮತ್ತೊಂದು ಧರ್ಮದ ಯುವತಿಯ ಅಭಿಪ್ರಾಯದಂತೆ ತನ್ನ ಪತಿಯೊಂದಿಗೆ ನೆಲೆಸಲು ಹೈಕೋರ್ಟ್ ಅವಕಾಶ ಕಲ್ಪಿಸಿ ಆದೇಶಿಸಿದೆ.

Join Our Whatsapp Group

ಯುವತಿಯ ತಾಯಿ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನೀಲ್ ದತ್ತಯಾದವ್ ಮತ್ತು ನ್ಯಾಯಮೂರ್ತಿ ವೆಂಕಟೇಶ್ ನಾಯ್ಕ್ .ಟಿ. ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಅಲ್ಲದೇ, ಯುವತಿ ವಯಸ್ಕಳಾಗಿದ್ದಾಳೆ. ಈಗಾಗಲೇ ವಿವಾಹವೂ ಆಗಿದೆ. ತನಗೆ ಆಕೆಯ ಯೋಗಕ್ಷೇಮ, ಭದ್ರತೆ ಮತ್ತು ಶಿಕ್ಷಣವನ್ನು ನೋಡಿಕೊಳ್ಳುವುದಕ್ಕೆ ಅನುಮತಿ ನೀಡಬೇಕೆಂದು ಪತಿ ಮುಚ್ಚಳಿಕೆ ನೀಡಿದರು. ಈ ಅಂಶ ದಾಖಲಿಸಿಕೊಂಡ ನ್ಯಾಯಾಲಯ ಪತಿಯೊಂದಿಗೆ ತೆರಳಲು ಅವಕಾಶ ಮಾಡಿಕೊಟ್ಟಿದೆ.

ಕಚೇರಿಯಲ್ಲಿ ಚರ್ಚೆ: ಸುಪ್ರೀಂ ಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳು ತಮ್ಮ ಕೊಠಡಿಯಲ್ಲಿ ಚರ್ಚೆ ನಡೆಸಿದರು. ಈ ವೇಳೆ ‘ನಾನು ತಾಯಿಯೊಂದಿಗೆ ತೆರಳುವುದಿಲ್ಲ. ನಾನು ವಯಸ್ಕಳಾಗಿದ್ದೇನೆ. ದ್ವಿತೀಯ ವರ್ಷದ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದೇನೆ. ಸ್ವಯಂಪ್ರೇರಿತವಾಗಿ ಯುವಕನೊಂದಿಗೆ ಹೋಗಿದ್ದೇನೆ. 2024ರ ಏ.1 ರಂದು ಆತನನ್ನು ವಿವಾಹವಾಗಿದ್ದೇನೆ. ಆತನೊಂದಿಗೆ ಕಣ್ಣೂರಿನಲ್ಲೇ ನೆಲೆಸಿದ್ದೇನೆ. ಆತ ಅಥವಾ ಇತರೆಯಾರಿಂದಲೂ ಯಾವುದೇ ರೀತಿಯ ಒತ್ತಡ ಅಥವಾ ಪ್ರಭಾವಕ್ಕೆ ಒಳಗಾಗಿಲ್ಲ’ ಎಂದು ಯುವತಿ ನ್ಯಾಯಮೂರ್ತಿಗಳ ಮುಂದೆ ವಿವರಿಸಿದ್ದರು. ಈ ಅಂಶವನ್ನು ಪರಿಗಣಿಸಿದ ನ್ಯಾಯಪೀಠ ಯುವತಿಯನ್ನು ಯುವಕನ ಸುಪರ್ದಿಗೆ ಕೂಡಲೇ ಒಪ್ಪಿಸುವಂತೆ ಪೊಲೀಸರಿಗೆ ಆದೇಶಿಸಿ ಇತ್ಯರ್ಥಪಡಿತು.

ಪ್ರಕರಣದ ಹಿನ್ನೆಲೆ: ಬೆಂಗಳೂರಿನಲ್ಲಿ ಎರಡನೇ ವರ್ಷದ ಬಿ.ಕಾಂ ವ್ಯಾಸಂಗ ಮಾಡುತ್ತಿರುವ ಯುವತಿಗೆ ಕೇರಳ ಮೂಲದ ದುಬೈನಲ್ಲಿ ಕೆಲಸ ಮಾಡುತ್ತಿದ್ದ ಯುವಕ ಇನ್‌ಸ್ಟಾಗ್ರಾಮ್ ಮೂಲಕ ಪರಿಚಿತನಾಗಿದ್ದ. ಕಾಲಕ್ರಮೇಣ ಅವರ ಸ್ನೇಹ ಪ್ರೀತಿಗೆ ತಿರುಗಿತು. ಬಳಿಕ ಆಕೆಯನ್ನು ವಿವಾಹವಾಗಲು ಬೆಂಗಳೂರಿಗೆ ಬಂದು ಯುವತಿಯನ್ನು ಕೇರಳದ ಕಣ್ಣೂರಿಗೆ ಕರೆದುಕೊಂಡು ಹೋಗಿದ್ದರು. ಇದಾದ ನಂತರ ಯುವತಿ ತಾಯಿ ಮಡಿವಾಳ ಠಾಣಾ ಪೊಲೀಸರಿಗೆ ತಾಯಿ ದೂರು ನೀಡಿದ್ದರು. ಪೊಲೀಸರು ಮಗಳನ್ನು ಪತ್ತೆಹಚ್ಚದ್ದಕ್ಕೆ ತಾಯಿ ಹೈಕೊರ್ಟ್‌ಗೆ ಹೇಬಿಯಸ್‌ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಬಳಿಕ ನ್ಯಾಯಾಲಯದ ನಿರ್ದೇಶನದಂತೆ ಯುವತಿಯನ್ನು ಪತ್ತೆ ಹಚ್ಚಿದ ಕೇರಳ-ಕರ್ನಾಟಕ ಪೊಲೀಸರು ದಂಪತಿಯುನ್ನು ಕೋರ್ಟ್ ಮುಂದೆ ಹಾಜರುಪಡಿಸಿದೆ.

ಪೊಲೀಸರಿಗೆ ನೀಡಿದ್ದ ದೂರಿನಲ್ಲಿ ಏನಿತ್ತು: 2024 ಮಾ.31ರಂದು ಮನೆಯಿಂದ ಹೊರಗೆ ಹೋಗಿದ್ದ ಹಿರಿಯ ಮಗಳು ಹಿಂದಿರುಗಲಿಲ್ಲ. ತನ್ನ ಕಿರಿಯ ಮಗಳ ಮೊಬೈಲ್‌ಗೆ, ‘ನಾನು ಯವಕನೊಂದಿಗೆ ಹೋಗಿದ್ದೇನೆ. ನಾನು ಸದ್ಯ ಅವನೊಂದಿಗೆ ಇದ್ದೇನೆ. ಕ್ಷಮಿಸಿ’ ಎಂದು ಸಂದೇಶ ರವಾನಿಸಿದ್ದಳು. ನಂತರ ಮೊಬೈಲ್ ಸ್ವಿಚ್ ಆಫ್ ಆಗಿದೆ. ಪುತ್ರಿ ಮತ್ತು ಯುವಕ ಕೇರಳದ ಕಣ್ಣೂರಿಗೆ ತೆರಳಿದ್ದಾರೆ. ಅವರು ಕಣ್ಣೂರು ಮದುವೆ ಅಧಿಕಾರಿಗಳಿಗೆ ವಿಶೇಷ ವಿವಾಹ ಕಾಯ್ದೆಯಡಿ ಮದುವೆ ನೋಂದಣಿ ಮಾಡಲು ಅರ್ಜಿ ಸಲ್ಲಿಸಿರುವ ಬಗ್ಗೆ ಮಾಹಿತಿ ಇದೆ. ಬಲವಂತವಾಗಿ ಪುತ್ರಿಯನ್ನು ಯುವಕ ಮದುವೆಯಾಗುತ್ತಿದ್ದು, ಆಕೆಯ ಜೀವಕ್ಕೆ ಅಪಾಯವಿದೆ ಎಂಬ ಆತಂಕ ಕಾಡುತ್ತಿದೆ. ಆದ್ದರಿಂದ ಪುತ್ರಿಯನ್ನು ಪತ್ತೆ ಹಚ್ಚಿ ಕೋರ್ಟ್ ಹಾಜರಿಪಡಿಸಬೇಕು ಎಂದು ಕೋರಿದ್ದರು.