ಮನೆ ರಾಜ್ಯ ಹೆಚ್.ಡಿ.ದೇವೇಗೌಡರನ್ನು ಭೇಟಿಯಾದ ಆರ್.ಅಶೋಕ್: ಪೆನ್ ಡ್ರೈವ್ ಕೇಸ್ ಸೇರಿ ಹಲವು ವಿಷಯಗಳ ಕುರಿತು ಚರ್ಚೆ

ಹೆಚ್.ಡಿ.ದೇವೇಗೌಡರನ್ನು ಭೇಟಿಯಾದ ಆರ್.ಅಶೋಕ್: ಪೆನ್ ಡ್ರೈವ್ ಕೇಸ್ ಸೇರಿ ಹಲವು ವಿಷಯಗಳ ಕುರಿತು ಚರ್ಚೆ

0

ಬೆಂಗಳೂರು: ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವಗೌಡ ಅವರನ್ನು ಭಾನುವಾರ ಭೇಟಿ ಮಾಡಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಕೇಸ್ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಸಿದ್ದಾರೆಂದು ತಿಳಿದುಬಂದಿದೆ.

Join Our Whatsapp Group

ದೇವೇಗೌಡರ 92 ವರ್ಷದ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಶೋಕ್ ಅವರು ಮಾಜಿ ಪ್ರಧಾನಮಂತ್ರಿಗಳನ್ನು ಭೇಟಿ ಮಾಡಿದರು. ಈ ವೇಳೆ ಶುಭಾಶಯಗಳನ್ನು ಕೋರಿದರು.

ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡ ಅವರೊಂದಿಗೆ ರಾಜ್ಯದ ರಾಜಕೀಯ ಬೆಳವಣಿಗೆ ಕುರಿತು ಚರ್ಚಿಸಿದೆ. ರಾಜ್ಯದಲ್ಲಿ ಕೊಲೆ, ಕಳ್ಳತನ,ದರೋಡೆ ಹೆಚ್ಚಾಗಿದೆ. ಮಳೆ ಸುರಿಯುವುದಕ್ಕಿಂತ ಹೆಚ್ಚಾಗಿ ಕೊಲೆಗಳು ನಡೆಯುತ್ತಿವೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ರೌಡಿಗಳಿಗೆ, ಕೊಲೆಗಡುಕರಿಗೆ ಹಬ್ಬ. ಈ ಹಬ್ಬಕ್ಕೆ ಕಾಂಗ್ರೆಸ್ಸೇ ನೇರ ಕಾರಣ. ಇತ್ತೀಚೆಗೆ ಹತ್ಯೆಯಾದ ಅಂಜಲಿ ಕುಟುಂಬದವರು ಕೊಲೆಗಾರರನ್ನು ಗಲ್ಲಿಗೇರಿಸಬೇಕು ಎಂದು ಹೇಳಿದ್ದಾರೆ. ಆದರೆ, ರಾಜ್ಯ ಸರ್ಕಾರವೇ ಅ‍ಪರಾಧಿ ಸ್ಥಾನದಲ್ಲಿದ್ದು, ಸರ್ಕಾರವನ್ನೇ ಗಲ್ಲಿಗೇರಿಸಬೇಕು ಎಂದು ಕಿಡಿಕಾರಿದರು.

ಪೆನ್‌ಡ್ರೈವ್‌ ವಿಚಾರದಲ್ಲಿ ದೇವರಾಜೇಗೌಡ ಸತ್ಯವನ್ನೇ ಹೇಳಿದ್ದಾರೆ. ಎಚ್‌.ಡಿ.ಕುಮಾರಸ್ವಾಮಿ ಪ್ರೈನ್‌ಡ್ರೈವ್‌ ಬಿಡುಗಡೆ ಮಾಡಿದರು ಎಂದು ಸುಳ್ಳು ಹೇಳುವುದಕ್ಕಾಗಿ ಡಿ.ಕೆ.ಶಿವಕುಮಾರ್‌ ಅಮಿಷ ಒಡ್ಡಿರುವ ವಿಚಾರದಲ್ಲಿ ಸತ್ಯವಿದೆ. ನಿಜ ಇರುವುದಕ್ಕೆ ದಾಖಲೆ ಬಿಡುಗಡೆ ಮಾಡಿದ್ದಾರೆ. ಅದಕ್ಕಾಗಿ ಬಂಧನವಾಗಿದೆ. ಮಾಧ್ಯಮಗಳಲ್ಲಿ ಸತ್ಯ ಸಂಗತಿ ಪ್ರಸಾರ ಆಗುವುದನ್ನು ತಡೆಯುವ ಉದ್ದೇಶ ಶಿವಕುಮಾರ್ ಅವರದು ಎಂದು ಹೇಳಿದರು.

ಸುರ್ಜೇವಾಲ, ಡಿ.ಕೆ.ಶಿವಕುಮಾರ್‌, ಸಿದ್ದರಾಮಯ್ಯ ಸೇರಿ ಮಾಸ್ಟರ್‌ ಪ್ಲಾನ್‌ ಮಾಡಿದ್ದಾರೆ. ಸಿದ್ದರಾಮಯ್ಯ ಈಗಾಗಲೇ ದಲಿತ ನಾಯಕರನ್ನು ಮುಗಿಸಿದ್ದಾರೆ. ಅದೇ ರೀತಿಯಲ್ಲಿ ಒಕ್ಕಲಿಗರನ್ನು ಮುಗಿಸಲು ಯೋಜನೆ ರೂಪಿಸಿದ್ದಾರೆ. ಪ್ರಜ್ವಲ್‌ ರೇವಣ್ಣ ಅವರ ಪ್ರಕರಣವನ್ನು ಸಿಬಿಐಗೆ ವಹಿಸಬೇಕಿದೆ. ಸಿಬಿಐ ಬಳಿ ಹೋದರೆ ಸರ್ಕಾರದಲ್ಲಿ ಇರುವವರೇ ಕಂಬಿ ಎಣಿಸಬೇಕಾಗುತ್ತದೆ. ಇಡೀ ಗೃಹ ಇಲಾಖೆಯನ್ನು ಯಾರೋ ಹೈಜಾಕ್‌ ಮಾಡಿ ನಡೆಸುತ್ತಿದ್ದಾರೆ. ಮಾಜಿ ಸಚಿವ ರೇವಣ್ಣ ಅವರನ್ನು ಬಂಧಿಸಿದಂತೆ ಚಾಲಕನನ್ನು ಈವರೆಗೆ ಬಂಧಿಸಿಲ್ಲ. ಪೊಲೀಸರು ಕಾಂಗ್ರೆಸ್‌ ನಾಯಕರು ಹೇಳಿದಂತೆ ಕೇಳುತ್ತಾರೆ ಎಂದು ತಿಳಿಸಿದ್ದಾರೆ.

ಪ್ರಜ್ವಲ್‌ ರೇವಣ್ಣ ವಿರುದ್ಧ ಸರ್ಕಾರ ಕ್ರಮಕೈಗೊಳ್ಳಲಿ. ಆದರೆ, ವಿಡಿಯೊ ಹಂಚಿದವರ ವಿರುದ್ಧ ಕ್ರಮ ವಹಿಸಿಲ್ಲ. ಹೀಗೆ ಕಾಂಗ್ರೆಸ್‌ ಕಣ್ಣಾ ಮುಚ್ಚಾಲೆ ಆಡುತ್ತಿದೆ. ಪ್ರಕರಣ ಮುಚ್ಚಿ ಹಾಕಲು ಎಸ್‌ಐಟಿ ಸಿದ್ಧತೆ ಮಾಡುತ್ತಿದೆ ಎಂದು ಆರೋಪಿಸಿದರು.