ಕಳೆದ ವರ್ಷ ಆಗಸ್ಟ್‌ನಲ್ಲಿ ಕಲ್ಲಿದ್ದಲು ಕುಲುಮೆಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಸಜೀವ ದಹನ ಮಾಡಿದ ಪ್ರಕರಣದಲ್ಲಿ ಇಬ್ಬರಿಗೆ ರಾಜಸ್ಥಾನದ ಭಿಲ್ವಾರಾ ಜಿಲ್ಲೆಯ ಪೋಕ್ಸೊ ನ್ಯಾಯಾಲಯ ಸೋಮವಾರ ಮರಣದಂಡನೆ ವಿಧಿಸಿದೆ.
ದೇಹ ಸಂಪೂರ್ಣವಾಗಿ ಸುಟ್ಟುಹೋಗದ ಕಾರಣ ಬಳಿಕ ಅರೆಬೆಂದ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಕಾಲುವೆಗೆ ಎಸೆದಿದ್ದರು.
ತನಿಖೆ ಕೈಗೊಂಡ ಪೊಲೀಸರಿಗೆ ಕಾಲುವೆಯಲ್ಲಿ ತುಂಬಿದ ಗೋಣಿಚೀಲ ಸಿಕ್ಕಿತ್ತು, ಅದರೊಳಗೆ ದೇಹದ ಭಾಗಗಳಿದ್ದವು. ಕುಟುಂಬಸ್ಥರು ಈ ಇಬ್ಬರ ಬಗ್ಗೆ ಅನುಮಾನ ವ್ಯಕ್ತಪಡಿಸಿದಾಗ ಪೊಲೀಸರು ಆರೋಪಿಗಳಿಬ್ಬರನ್ನು ಹಿಡಿದು ವಿಚಾರಣೆ ನಡೆಸಿದಾಗ ಸತ್ಯ ಬಾಯ್ಬಿಟ್ಟಿದ್ದಾರೆ.
ಬಾಲಕಿಯ ಮೇಲೆ ನಡೆಸಿದ ಅತ್ಯಾಚಾರ ಬಳಿಕ ಹೇಗೆ ಕೊಂದಿದ್ದಾರೆ ಎಂಬುದನ್ನು ವಿವರಿಸಿದ್ದಾರೆ. ಎರಡು ದಿನಗಳ ಹಿಂದೆ ಇಬ್ಬರೂ ತಪ್ಪಿತಸ್ಥರೆಂದು ನ್ಯಾಯಾಲಯ ಘೋಷಿಸಿತ್ತು. ನಿನ್ನೆ ಇಬ್ಬರಿಗೂ ಮರಣದಂಡನೆ ವಿಧಿಸಲಾಗಿದೆ. ಪ್ರಕರಣದ ವಿಚಾರಣೆ ವೇಳೆ 43 ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದು, ಕೂಲಂಕುಷವಾಗಿ ತನಿಖೆ ನಡೆಸಿದ ಪೊಲೀಸರು 473 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದರು.
ಚಾರ್ಜ್ ಶೀಟ್ ನಲ್ಲಿರುವ ಮಾಹಿತಿ ಪ್ರಕಾರ ಅಂದು ಕಾಲು ಹಾಗೂ ಕನ್ಹಾ ಮರಕಡಿಯಲು ಹೊರಟಿದ್ದರು. ಆಡುಗಳನ್ನು ಮೇಯಿಸುತ್ತಿದ್ದ ಹುಡುಗಿಯನ್ನು ಕಂಡರು, ಇಬ್ಬರೂ ಆಕೆಯನ್ನು ಎಳೆದೊಯ್ದು ಅತ್ಯಾಚಾರ ಮಾಡಿದ್ದಾರೆ. ಆಕೆ ಓಡಿ ಹೋಗಲು ಯತ್ನಿಸಿದಾಗ ದೊಣ್ಣೆಯಿಂದ ಆಕೆಯ ತಲೆಗೆ ಹೊಡೆದಿದ್ದಾರೆ. ಆಕೆ ಪ್ರಜ್ಞಾಹೀನಳಾದಾಗ ಮತ್ತೆ ಇಬ್ಬರು ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ.
ಬಳಿಕ ಆಕೆಯ ಮುಖಕ್ಕೆ ಬೆಂಕಿ ಹಚ್ಚಿ ಇಡೀ ದೇಹವನ್ನು ಸುಡುವ ಪ್ರಯತ್ನ ಮಾಡಿದ್ದಾರೆ, ಆದರೆ ದೇಹ ಸಂಪೂರ್ಣವಾಗಿ ಸುಡದಿದ್ದಾಗ, ದೇಹವನ್ನು ಕತ್ತರಿಸಿ ಕಾಲುವೆಗೆ ಎಸೆದಿದ್ದಾರೆ.
ಬಾಲಕಿಯ ಮನೆಯವರು ಆಕೆಯನ್ನು ಹುಡುಕಿಕೊಂಡು ಹೊಲಕ್ಕೆ ಬಂದಾಗ ಸುಟ್ಟ ಮಡಕೆಯ ಬಳಿ ಮಗಳ ಬಟ್ಟೆ, ಚಪ್ಪಲಿ, ಬಳೆಗಳು ಪತ್ತೆಯಾಗಿತ್ತು. ಮಾಂಸದ ದುರ್ವಾಸನೆಯೂ ಬರುತ್ತಿತ್ತು. ಆಗ ಪೊಲೀಸರಿಗೆ ಮಾಹಿತಿ ನೀಡಿದ್ದರು.
ನ್ಯಾ. ಅನಿಲ್ ಗುಪ್ತಾ ಅವರು ಕಾಲು ಮತ್ತು ಕನ್ಹಾ ಕಲ್ಬೆಲಿಯಾ ಅವರಿಗೆ ಮರಣದಂಡನೆ ಶಿಕ್ಷೆ ವಿಧಿಸಿದ ತಕ್ಷಣ ಕುಟುಂಬದವರ ಕಣ್ಣಂಚಲ್ಲಿ ನೀರು ಮೂಡಿತ್ತು. ಮಗಳಂತೂ ಹಿಂದಿರುಗುವುದಿಲ್ಲ ಆದರೆ ಆಕೆಯ ಸಾವಿಗೆ ನ್ಯಾಯ ಸಿಕ್ಕಿದೆ ಎನ್ನುವ ತೃಪ್ತಿ ಕಾಣುತ್ತಿತ್ತು.