ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾಗಿರುವ ಅಶ್ಲೀಲ ವಿಡಿಯೋಗಳಿರುವ ಪೆನ್ಡ್ರೈವ್ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ದಳ ನಡೆಸುತ್ತಿದೆ. ಪ್ರಕರಣದ ಕುರಿತು ಕೆಲ ಸಚಿವರ ಹೇಳಿಕೆಗಳು ತನಿಖೆಯ ತಪ್ಪಿಸುವ ಸಾಧ್ಯತೆ ಇದೆ. ಹೇಳಿಕೆಗಳಿಂದ ಪಕ್ಷಕ್ಕೂ ಕೂಡ ಡ್ಯಾಮೆಜ್ ಆಗುವ ಸಾಧ್ಯತೆ ಇದೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವರಿಗೆ ಕೆಲ ಸೂಚನೆ ನೀಡಿದ್ದಾರೆ.
ಪೆನ್ಡ್ರೈವ್ ಪ್ರಕರಣದಲ್ಲಿ ಅನಗತ್ಯವಾಗಿ ಪ್ರತಿಕ್ರಿಯೆ ಕೊಡಬೇಡಿ. ಮಾತು ಹೆಚ್ಚಾದರೆ ಇಡೀ ಪ್ರಕರಣದ ದಿಕ್ಕೇ ತಪ್ಪಿ ಹೋಗಬಹುದು. ಹೀಗಾಗಿ ಪ್ರತಿಕ್ರಿಯೆ ಕೊಡುವಾಗ ಎಚ್ಚರಿಕೆ ವಹಿಸಿ ಎಂದು ಮುಖಮಂತ್ರಿ ಸಿದ್ದರಾಮಯ್ಯ ಅವರು ಸಚಿವರಿಗೆ ಸಲಹೆ ನೀಡಿದ್ದಾರೆ. ಮುಖ್ಯಮಂತ್ರಿಗಳ ಈ ಸಲಹೆಯನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಸಚಿವರು ಗಂಭೀರವಾಗಿ ಪರಿಗಣಿಸಿದ್ದಾರೆ.
ಇನ್ನು ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ಒಕ್ಕಲಿಗ ನಾಯಕರಾಗಿ ಗುರುತಿಸಿಕೊಂಡಿದೆ. ಇದೀಗ, ಹೆಚ್ಡಿ ದೇವೇಗೌಡರ ಮಗ ಮತ್ತು ಮೊಮ್ಮಗ ಇಂತಹ ಪ್ರಕರಣದಲ್ಲಿ ಸಿಲುಕಿಕೊಂಡಿದ್ದು, ಸಹಜವಾಗಿ ಒಕ್ಕಲಿಗ ಸಮಾಜ ಕೂಡ ಮುಜುಗುರ ಪಡುವಂತಾಗಿದೆ. ಅಲ್ಲದೆ, ಹೆಚ್ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ಅವರನ್ನು ಈ ಪ್ರಕರಣದಲ್ಲಿ ಸಿಲುಕಿಸುವಲ್ಲಿ ಡಿಕೆ ಶಿವಕುಮಾರ್ ಅವರ ಪಾತ್ರವೂ ಇದೆ ಎಂಬ ಆರೋಪ ಕೇಳಿ ಬಂದಿದೆ. ಇದರಿಂದ ಒಕ್ಕಲಿಗರು ಡಿಕೆ ಶಿವಕುಮಾರ್ ಮೇಲೆ ಮುನಿಸಿಕೊಳ್ಳಲು ಸಾಧ್ಯತೆ ಇದೆ. ಒಂದು ವೇಳೆ ಒಕ್ಕಲಿಗರು ಮುನಿಸಿಕೊಂಡರೆ ಕಾಂಗ್ರೆಸ್ಗೆ ಹಳೇ ಮೈಸೂರು ಭಾಗದಲ್ಲಿ ನಷ್ಟವಾಗಲಿದೆ.
ಹೀಗಾಗಿ ಪ್ರಕರಣದಿಂದ ಅಂತರ ಕಾಯ್ದುಕೊಳ್ಳವಂತೆ ಡಿಕೆ ಶಿವಕುಮಾರ್ ಅವರಿಗೆ ಒಕ್ಕಲಿಗ ನಾಯಕರು ಸಲಹೆ ನೀಡಿದ್ದಾರೆ. ಪೆನ್ಡ್ರೈವ್ ಕೇಸ್ನಲ್ಲಿ ಮಾತನಾಡದಂತೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.