ಮನೆ ಹವಮಾನ ಮುಂದಿನ ಐದು ದಿನಗಳ ಕಾಲ ಪೂರ್ವ ಮುಂಗಾರು ಮಳೆ: ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ

ಮುಂದಿನ ಐದು ದಿನಗಳ ಕಾಲ ಪೂರ್ವ ಮುಂಗಾರು ಮಳೆ: ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ

0

ಬೆಂಗಳೂರು: ಅರಬ್ಬೀ ಸಮುದ್ರದಲ್ಲಿ ಮುಂಗಾರು ಮಾರುತಗಳು ಬೀಸುತ್ತಿರುವ ಪರಿಣಾಮ ಮುಂದಿನ ಐದು ದಿನಗಳ ಕಾಲ ಪೂರ್ವ ಮುಂಗಾರು ಮಳೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸುರಿಯಲಿದೆ.

Join Our Whatsapp Group

ಇನ್ನು ಜೂನ್ 6 ಅಥವಾ 7 ರಂದು ರಾಜ್ಯಕ್ಕೆ ಮುಂಗಾರು ಪ್ರವೇಶಿಸಲಿದೆ ಎಂದು ಬೆಂಗಳೂರು ಹವಾಮಾನ ಕೇಂದ್ರ ಮಾಹಿತಿ ನೀಡಿದೆ.

ಜೊತೆಗೆ ಐದು ದಿನಗಳ ಕಾಲ ಕರಾವಳಿ ಜಿಲ್ಲೆಗಳಲ್ಲಿ ಗಾಳಿ ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಬೀಸಲಿದ್ದು, ಯೆಲ್ಲೋ ಅಲರ್ಟ್ ಸಹ ಘೋಷಿಸಲಾಗಿದೆ. ಇನ್ನು ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಸಾಮಾನ್ಯ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮಲೆನಾಡು ಮತ್ತು ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರು ನಗರ ಮತ್ತು ಸುತ್ತಮುತ್ತ ಸ್ಥಳಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಲಘು ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 31 ಡಿಗ್ರಿ ಮತ್ತು 22 ಡಿಗ್ರಿ ಇರಬಹುದು ಎಂದು ಅಂದಾಜಿಸಿದೆ.

“ಸದ್ಯ ಮುಂಗಾರು ಮಾರುತಗಳು ಅರಬ್ಬೀ ಸಮುದ್ರದ ಮಾಲ್ಡೀವ್ಸ್ ಮತ್ತು ಲಕ್ಷದ್ವೀಪದ ಬಳಿ ಬೀಸುತ್ತಿವೆ. ಸದ್ಯ ರಾಜ್ಯದಲ್ಲಿ ಈ ಕಾರಣಕ್ಕೆ ಪೂರ್ವ ಮುಂಗಾರು ಮಳೆ ಮುಂದುವರೆದಿದೆ. ಕೇರಳಕ್ಕೆ ಈ ಮಾರುತಗಳು ಮೇ 28 ರಂದು ಪ್ರವೇಶಿಸುವ ಸಾಧ್ಯತೆ ಇದ್ದು, ಕರ್ನಾಟಕದ ಕರಾವಳಿಗೆ ಜೂನ್ 6 ಅಥವಾ 7 ರಂದು ಅಪ್ಪಳಿಸಲಿವೆ. ಈಗ ಉಂಟಾಗಿರುವ ಪಶ್ಚಿಮ ಬಂಗಾಳ ಬಳಿಯ ಚಂಡಮಾರುತ ರಾಜ್ಯಕ್ಕೆ ಅಪ್ಪಳಿಸುವುದಿಲ್ಲ” ಎಂದು ಬೆಂಗಳೂರು ಹವಾಮಾನ ಕೇಂದ್ರದ ವಿಜ್ಞಾನಿ ಡಾ ರಾಜುವೇಲ್ ಮಾಣಿಕ್ಕಂ ಹೇಳಿದ್ದಾರೆ.

ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆ ಇದ್ದು, ರಾಜ್ಯದಲ್ಲಿ ಈಗಾಗಲೇ ಪುರ್ವ ಮುಂಗಾರು ಮಳೆ ಆರಂಭವಾಗಿದೆ. ಇನ್ನು ನಿಗದಿಯಂತೆ ಜೂನ್ 6 ಅಥವಾ 7 ರಂದು ರಾಜ್ಯಕ್ಕೆ ಮುಂಗಾರು ಪ್ರವೇಶಿಸುವ ಸಾಧ್ಯತೆ ಇದೆ.