ಮನೆ ಸ್ಥಳೀಯ ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಡಾ. ಪುಷ್ಪಾ ಅಮರನಾಥ್‌ ಮನವಿ

ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಡಾ. ಪುಷ್ಪಾ ಅಮರನಾಥ್‌ ಮನವಿ

0

ಮೈಸೂರು: ಶಿಕ್ಷಕರು ಮತ್ತು ಪದವೀಧರರ ಕ್ಷೇತ್ರಗಳಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷೆ ಡಾ. ಪುಷ್ಪಾ ಅಮರನಾಥ್‌ ಮನವಿ ಮಾಡಿದರು.

Join Our Whatsapp Group

ನಗರದ ಕಾಂಗ್ರೆಸ್‌ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲ ಮತದಾರರು ಪಕ್ಷಾತೀತವಾಗಿ ಜಾತ್ಯಾತೀತವಾಗಿ ಅಭಿವೃದ್ಧಿಗಾಗಿ ಕಾಂಗ್ರೆಸ್‌ಗೆ ಮತ ನೀಡುವಂತೆ ಕೋರಿದರು.

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವಿದೆ. ಹೊಸ ಪಿಂಚಣಿ ಪದ್ಧತಿ ರದ್ದು ಮಾಡಿ ಹಳೆಯ ಪಿಂಚಣಿ ವ್ಯವಸ್ಥೆ ಮರು ಜಾರಿ ಮಾಡಲಿದ್ದೇವೆ. ಶಿಕ್ಷಕರು ಮತ್ತು ಪದವೀಧರರ ಸಮಸ್ಯೆ ಇತ್ಯರ್ಥಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.

ಶಿಕ್ಷಕರು ನಡೆಸಿದ ಅನೇಕ ಹೋರಾಟಗಳಲ್ಲಿ ಭಾಗವಹಿಸಿದ್ದೇನೆ. ಕುಮಾರ್‌ ನಾಯ್ಕ ವರದಿ ಅನುಷ್ಠಾನ ಮಾಡಬೇಕಿದೆ. ಶಿಕ್ಷಕರ ಸಾಕಷ್ಟು ಸಮಸ್ಯೆಗಳನ್ನು ಬಗೆಹರಿಸುವಂತೆ ಸರ್ಕಾರದ ಮೇಲೆ ಒತ್ತಡ ತರುತ್ತೇನೆ. ಶಿಕ್ಷಕರು, ಪದವೀಧರರು ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೇ  ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಮರಿತಿಬ್ಬೇಗೌಡ ಅವರನ್ನು ಬೆಂಬಲಿಸಿ: ಪದವೀಧರ ಶಿಕ್ಷಕರ ಕ್ಷೇತ್ರದಿಂದ ನಾಲ್ಕು ಬಾರಿ ಜಯ ಗಳಿಸಿ ಐದನೇ ಬಾರಿಗೆ ಸ್ಪರ್ಧಿಸಿರುವ ಮರಿತಿಬ್ಬೇಗೌಡ ಅವರನ್ನು ಭಾರೀ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಹೇಳಿದರು.

ಮರಿತಿಬ್ಬೇಗೌಡ ಅವರು ನಾಲ್ಕು ಬಾರಿ ವಿಧಾನ ಪರಿಷತ್‌ ಸದಸ್ಯರಾಗಿ ಆಯ್ಕೆಯಾದಾಗಲೂ ವಿರೋಧ ಪಕ್ಷದಲ್ಲಿದ್ದರು. ಆಡಳಿತ ಪಕ್ಷ ಇಲ್ಲದಿದ್ದರೂ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಈ ಬಾರಿ ಅವರದೇ ಪಕ್ಷ ಅಧಿಕಾರದಲ್ಲಿದ್ದು, ಶಿಕ್ಷಕರ ಪರವಾಗಿ ಕೆಲಸ ಮಾಡಲಿದ್ದಾರೆ ಎಂದು ತಿಳಿಸಿದರು.

ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸಿದ ಬಿಜೆಪಿ ಸರ್ಕಾರಗಳು ವಿದ್ಯಾವಂತರಿಗೆ ಉದ್ಯೋಗ ಕೊಡಲು ವಿಫಲವಾಗಿದೆ. ಕಾಂಗ್ರೆಸ್‌ ಸರ್ಕಾರ ಉದ್ಯೋಗ ಕೊಡಲು ಬದ್ಧವಾಗಿದ್ದು, ಪದವೀಧರರು ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಮತ ನೀಡಬೇಕು ಎಂದು ತಿಳಿಸಿದರು.

ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ 20 ಸಾವಿರಕ್ಕೂ ಅಧಿಕ ಮತದಾರರಿದ್ದು, ಮಹಿಳಾ ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರ ಸಮಸ್ಯೆಗಳ ಬಗ್ಗೆ ನಮಗೇ ಅರಿವಿದೆ. ಪಂಚ ಗ್ಯಾರಂಟಿಗಳಿಂದ ಜನ ಸಾಮಾನ್ಯರಿಗೆ ಅನುಕೂಲವಾಗಿದೆ ಎಂದು ಪ್ರಚಾರದ ವೇಳೆ ಶಿಕ್ಷಕಿಯರು ತಿಳಿಸಿದ್ದಾರೆ. ಜನ ಸಾಮಾನ್ಯರ ಪರವಾಗಿ ಕೆಲಸ ಮಾಡಲು ಅವಕಾಶ ನೀಡುವಂತೆ ಹೇಳಿದರು.

ಮೀಸಲಾತಿ ಇಲ್ಲದಿದ್ದರೆ ಅವಕಾಶವೇ ಇಲ್ಲ

ಮೀಸಲಾತಿ ಇಲ್ಲದಿದ್ದರೆ ಮಹಿಳೆಯರಿಗೆ ರಾಜಕೀಯದಲ್ಲಿ ಅವಕಾಶವೇ ಸಿಗುತ್ತಿರಲಿಲ್ಲ ಎಂದು ಕೆಪಿಸಿಸಿ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷ ಡಾ. ಪುಷ್ಪಾ ಅಮರನಾಥ್‌ ತೀವ್ರ ಬೇಸರ ಹೊರಹಾಕಿದರು.

ವಿಧಾನ ಪರಿಷತ್‌ ಚುನಾವಣೆಯಲ್ಲಿ ಅವಕಾಶ ಸಿಗಲಿದೆಯೇ ಎಂಬ ಸುದ್ದಿಗಾರರೊಂದಿಗೆ ಪ್ರಶ್ನೆಗೆ ಉತ್ತರಿಸಿದ ಅವರು, ನೂರಾರು ಮಂದಿ ಆಕಾಂಕ್ಷಿಗಳಿದ್ದಾರೆ. ನನಗೆ ಅವಕಾಶ ಸಿಗುವ ಭರವಸೆ ಇದೆ. ಹೈಕಮಾಂಡ್‌ ಕಾರ್ಯಕರ್ತೆಯಾಗಿ ನಾನು ಮಾಡಿದ ಕೆಲಸವನ್ನು ಪರಿಗಣಿಸುವ ವಿಶ್ವಾಸವಿದೆ ಎಂದರು.

ಮೀಸಲಾತಿ ಕಾರಣಕ್ಕೆ ಬೆಂಗಳೂರಿನ ಕೃಷಿ ಉದ್ಯೋಗದಲ್ಲಿದ್ದ ನಾನು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಯಿತು. ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ದಲಿತ ಎಡಗೈ ಸಮುದಾಯದವರಿಗೆ ಟಿಕೆಟ್‌ ನೀಡಿದ್ದರಿಂದ ನನಗೆ ಅವಕಾಶ ತಪ್ಪಿತು. ಮಹಿಳೆಯರಿಗೆ ಅವಕಾಶ ನೀಡುವಾಗ ಜಾತಿ ನೋಡಬಾರದು ಎಂದು ಹೇಳಿದರು.

ಕೆಪಿಸಿಸಿ ಮಹಿಳಾ ಕಾಂಗ್ರೆಸ್‌ ಉಪಾಧ್ಯಕ್ಷೆ ಪುಷ್ಪಾವಲ್ಲಿ, ಮಾಜಿ ಮೇಯರ್‌ ಗಳಾದ ಪುಷ್ಪಾಲತಾ ಚಿಕ್ಕ ಣ್ಣ, ಪುಷ್ಪಲತಾ ಜಗನ್ನಾಥ್‌, ಮೋದಾಮಣಿ, ರಾಜೇಶ್ವರಿ ಪುಟ್ಟಸ್ವಾಮಿ, ಮೈಸೂರು ಜಿಲ್ಲಾ ಗ್ರಾಮಾಂತರ ಮಹಿಳಾ ಅಧ್ಯಕ್ಷ  ಲತಾ ಸಿದ್ದಶೆಟ್ಟಿ, ಲತಾ ಮೋಹನ್‌ ಇದ್ದರು.