ಮನೆ ಆರೋಗ್ಯ ಹಾವೇರಿಯಲ್ಲಿ ತೀವ್ರಗೊಂಡ ಡೆಂಗ್ಯೂ ಪ್ರಕರಣ: 14 ವರ್ಷದೊಳಗಿನ ಮಕ್ಕಳಲ್ಲಿ ಹೆಚ್ಚಿದ ರೋಗ

ಹಾವೇರಿಯಲ್ಲಿ ತೀವ್ರಗೊಂಡ ಡೆಂಗ್ಯೂ ಪ್ರಕರಣ: 14 ವರ್ಷದೊಳಗಿನ ಮಕ್ಕಳಲ್ಲಿ ಹೆಚ್ಚಿದ ರೋಗ

0

ಹಾವೇರಿ: ಮುಂಗಾರುಪೂರ್ವ ಮಳೆಯೊಂದಿಗೆ ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣಗಳು ತೀವ್ರಗೊಂಡಿದ್ದು, 14 ವರ್ಷದೊಳಗಿನ ಮಕ್ಕಳಲ್ಲಿ ಹೆಚ್ಚಾಗಿ ರೋಗ ಕಾಣಿಸಿಕೊಳ್ಳುತ್ತಿದೆ.

Join Our Whatsapp Group

ಸದ್ಯ ಜಿಲ್ಲೆಯಾದ್ಯಂತ 162 ಜನರಿಗೆ ಡೆಂಗ್ಯೂ ಬಾಧಿಸಿದ್ದು, ಈ ಪೈಕಿ 108 ಪ್ರಕರಣಗಳು ಮಕ್ಕಳಲ್ಲಿ ಕಂಡುಬಂದಿದೆ. ಜಿಲ್ಲಾಸ್ಪತ್ರೆಯಲ್ಲಿ 50ಕ್ಕೂ ಹೆಚ್ಚು ಡೆಂಗ್ಯೂ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಕಳೆದ ಜನವರಿಯಿಂದ ಮೇ ಅಂತ್ಯದವರೆಗೆ ಹಾವೇರಿ ತಾಲೂಕಿನಲ್ಲಿ 10, ಬ್ಯಾಡಗಿ ತಾಲೂಕಿನಲ್ಲಿ 30, ರಾಣೇಬೆನ್ನೂರು ತಾಲೂಕಿನಲ್ಲಿ 18, ಹಿರೇಕೆರೂರು ತಾಲೂಕಿನಲ್ಲಿ 20, ರಟ್ಟಿಹಳ್ಳಿ ತಾಲೂಕಿನಲ್ಲಿ 08, ಶಿಗ್ಗಾಂವಿ ತಾಲೂಕಿನಲ್ಲಿ 06, ಸವಣೂರು ತಾಲೂಕಿನಲ್ಲಿ 01 ಹಾನಗಲ್ ತಾಲೂಕಿನಲ್ಲಿ 69 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಬರಗಾಲ ಮತ್ತು ನೀರಿನ ಕೊರತೆಯಿಂದಾಗಿ ಜನರು ನೀರನ್ನು ಹೆಚ್ಚು ಶೇಖರಿಸಿ ಬಳಕೆ ಮಾಡಿದ್ದಾರೆ. ಹೀಗೆ ಶೇಖರಣೆ ಮಾಡಿದ ನೀರಿನ ಮೇಲೆ ಏನನ್ನೂ ಮುಚ್ಚದಿರುವುದರಿಂದ ಈಡಿಸ್ ಇಜಿಪ್ಟ ಎನ್ನುವ ಸೊಳ್ಳೆ ಉತ್ಪತ್ಪಿಯಾಗಿ ಜನರು ಅದನ್ನೇ ಕುಡಿಯುತ್ತಿದ್ದಾರೆ. ಇದರಿಂದಲೂ ರೋಗ ಉಲ್ಬಣಿಸಿದೆ ಎಂದು ವೈದ್ಯರು ಹೇಳಿದ್ದಾರೆ.

ಸುರಕ್ಷತೆ ಹೇಗೆ?:

ಮನೆಯ ಸುತ್ತ ನೀರು ನಿಲ್ಲದಂತೆ ಶುಚಿಯಾಗಿಟ್ಟುಕೊಳ್ಳಬೇಕು. ಮಕ್ಕಳು ಮತ್ತು ವಯೋವೃದ್ದರಿರುವ ಮನೆಗಳಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಲಗುವ ಮುನ್ನ ಸೊಳ್ಳೆ ಪರದೆ, ಸೊಳ್ಳೆಬತ್ತಿ, ಬೇವಿನ ಎಲೆಯ ಹೂಗೆ ಹಾಕುವುದರಿಂದ ಸೊಳ್ಳೆಗಳನ್ನು ನಿಯಂತ್ರಿಸಬಹುದು. ಆರೋಗ್ಯ ಇಲಾಖೆ ಜೊತೆ ಸಾರ್ವಜನಿಕರು ಸಹಕರಿಸಿದಾಗ ಈ ರೀತಿಯ ರೋಗಗಳಿಗೆ ಕಡಿವಾಣ ಹಾಕಬಹುದು ಎಂದು ವೈದ್ಯರು ತಿಳಿಸಿದ್ದಾರೆ.