ಮಹಾಲಿಂಗಪುರ: ಭ್ರೂಣಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪಟ್ಟಣದ ಜಯಲಕ್ಷ್ಮಿ ನಗರದ ನಕಲಿ ವೈದ್ಯೆ ಕವಿತಾ ಬಾಡನವರ ಅವರಿಂದ ಗರ್ಭಪಾತ ಮಾಡಿಸಿಕೊಂಡು ಮೃತಳಾದ ಮಹಾರಾಷ್ಟ್ರದ ಮೂಲದ ಸೋನಾಲಿ ಕದಂ ಕೇಸ್ಗೆ ಸಂಬಂಧಿಸಿದಂತೆ ಪ್ರಕರಣದ ಪ್ರಥಮ, ದ್ವಿತೀಯ ಆರೋಪಿಗಳಾದ ಸಾಂಗಲಿ ಜಿಲ್ಲೆಯ ದುದಗಾಂವ ಗ್ರಾಮದ ನಿವಾಸಿಗಳಾದ ಮೃತ ಸೋನಾಲಿ ತಂದೆ ಸಂಜಯ ಗೌಳಿ, ತಾಯಿ ಸಂಗೀತಾ ಗೌಳಿ ಅವರನ್ನು ಮಹಾಲಿಂಗಪುರ ಪೊಲೀಸರು ಗುರುವಾರ ರಾತ್ರಿ ಬಂಧಿಸಿ, ಶುಕ್ರವಾರ ಮಹಾಲಿಂಗಪುರ ಠಾಣೆಗೆ ಕರೆತಂದು ಜಮಖಂಡಿ ಡಿವೈಎಸ್ಪಿ ಶಾಂತಕುಮಾರ ಈ, ಬನಹಟ್ಟಿ ಸಿಪಿಆಯ್ ಸಂಜೀವ ಬಳಗಾರ ಸಮ್ಮುಖದಲ್ಲಿ ಠಾಣಾಧಿಕಾರಿ ಪ್ರವೀಣ ಬೀಳಗಿ ಅವರು ಭ್ರೂಣಹತ್ಯೆಯ ಪ್ರಕರಣದ ವಿಚಾರಣೆ ನಡೆಸಿ, ನ್ಯಾಯಾಲಯ ಹಾಜುರುಪಡಿಸಿ ಜಮಖಂಡಿ ಜೈಲಿಗೆ ಒಪ್ಪಿಸಿದ್ದಾರೆ.
ಇಲ್ಲಿಯವರೆಗೆ ಪ್ರಕರಣಕ್ಕೆ ಸಂಬಂಧಿಸಿದ ಐವರನ್ನು ಬಂಧಿಸಲಾಗಿದೆ. ಅಥಣಿಯ ರಾಮಾನಂದ ನಗರದ ಡಾ.ಕೊತ್ವಾಲೆ, ಮಿರಜ ಸ್ಕ್ಯಾನಿಂಗ್ ಸೆಂಟರ್ನ ಸೋನೋಗ್ರಾಫರ್ ಅವರನ್ನು ಬಂಧಿಸಬೇಕಾಗಿದೆ. ಗರ್ಭಪಾತ ಮಾಡಿಸಿದ ಆರೋಪಿ ಮಹಾಲಿಂಗಪುರದ ಕವಿತಾ ಬಾಡನವರ ಗುರುವಾರ ತಮ್ಮ ವಕೀಲರ ಮೂಲಕ ಕೋರ್ಟಗೆ ಜಾಮೀನು ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಜಮಖಂಡಿ ಕೋರ್ಟ ಅವರ ಜಾಮೀನು ಅರ್ಜಿಯನ್ನು ತೀರಸ್ಕಾರ ಮಾಡಿದೆ.
ತನ್ನ ಮನೆಯಲ್ಲಿಯೇ ಅಕ್ರಮವಾಗಿ ಭ್ರೂಣಹತ್ಯೆ ಮಾಡುತ್ತಿದ್ದ ಕವಿತಾ ಬಾಡನವರ, ಗರ್ಭಪಾತಕ್ಕೆ ಮೊದಲು ಚಿಕಿತ್ಸೆ ನೀಡುತ್ತಿದ್ದ ಸಾಂಗಲಿಯ ವೈದ್ಯ ಡಾ. ಮಾರುತಿ, ಗಂಡು ಹೆಣ್ಣು ಎಂಬ ಭ್ರೂಣ ಚೆಕ್ ಮಾಡುತ್ತಿದ್ದ ಮಿರಜ್ ಸ್ಕ್ಯಾನಿಂಗ್ ಸೆಂಟರ್ ಸೋನೋಗ್ರಾಪರ್, ಅಥಣಿಯ ಡಾ.ಕೋತ್ವಾಲೆ ಸೇರಿ ಒಂದು ಭ್ರೂಣಹತ್ಯೆಗೆ ಬರೊಬ್ಬರಿ 2 ಲಕ್ಷ ಹಣವನ್ನು ಪಡೆಯುತ್ತಿದ್ದರು ಎಂದು ಬಂಧಿತ ಸಂಜಯ ಗೌಳಿ, ಸಂಗೀತಾ ಗೌಳಿ ಅವರು ಪೊಲೀಸರ ವಿಚಾರಣೆಯಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.