ನವದೆಹಲಿ: ‘ಸರ್ವಾಧಿಕಾರಿ ಶಕ್ತಿಗಳನ್ನು ಸೋಲಿಸಿದಾಗ ಮಾತ್ರ ಪ್ರಜಾಪ್ರಭುತ್ವ ಯಶಸ್ಸು ಕಾಣಲಿದೆ’ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಲೋಕಸಭೆಗೆ ಏಳನೇ ಹಂತದ ಮತದಾನ ಇಂದು ನಡೆಯುತ್ತಿದ್ದು, ಗರಿಷ್ಠ ಸಂಖ್ಯೆಯಲ್ಲಿ ಅರ್ಹ ಮತದಾರರು ಭಾಗವಹಿಸುವಂತೆ ಖರ್ಗೆ ಕರೆ ನೀಡಿದ್ದಾರೆ.
ಹೋರಾಟ ಈಗ ಅಂತಿಮ ಹಂತವನ್ನು ತಲುಪಿದೆ. ಪ್ರತಿ ಹಂತದಲ್ಲೂ ಜನರಿಂದ ಉತ್ತಮ ಬೆಂಬಲ ದೊರಕಿದೆ. ದೇಶದಲ್ಲಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ರಕ್ಷಿಸಲು ಕೊನೆಯ ಹಂತದ ಮತದಾನ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್‌ನ ‘ಯುವ ನ್ಯಾಯ’, ‘ಕಿಸಾನ್ ನ್ಯಾಯ’, ‘ನಾರಿ ನ್ಯಾಯ’, ‘ಶ್ರಮಿಕ್ ನ್ಯಾಯ’ ಹಾಗೂ ‘ಹಿಸ್ಸೇದಾರಿ ನ್ಯಾಯ’ಗಳಿಗೆ ಜನರಿಂದ ಉತ್ತಮ ಬೆಂಬಲ ದೊರಕಿದೆ. ಪ್ರಜಾಪ್ರಭುತ್ವದ ಶಕ್ತಿಗಳು ಸರ್ವಾಧಿಕಾರಿ ಶಕ್ತಿಗಳನ್ನು ಸೋಲಿಸಿದಾಗ ಪ್ರಜಾತಂತ್ರದ ಹಬ್ಬ ಯಶ ಕಾಣಲಿದೆ ಎಂದು ಉಲ್ಲೇಖಿಸಿದ್ದಾರೆ.
ರೈತರು, ಯುವಜನತೆ, ಕಾರ್ಮಿಕರು, ಮಹಿಳೆಯರು, ದಲಿತರು, ಬುಡಕಟ್ಟು ಮತ್ತು ಇತರೆ ಹಿಂದುಳಿದ ವಿಭಾಗದವರ ಭವಿಷ್ಯದ ಬಗ್ಗೆಯೂ ಜನರು ಯೋಚಿಸಬೇಕಿದೆ ಎಂದು ಅವರು ಹೇಳಿದ್ದಾರೆ.