ಮನೆ ಸ್ಥಳೀಯ ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಕೊರತೆ ಆಗಬಾರದು: ಡಾ ಕೆ.ವಿ.ರಾಜೇಂದ್ರ

ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಕೊರತೆ ಆಗಬಾರದು: ಡಾ ಕೆ.ವಿ.ರಾಜೇಂದ್ರ

0

ಮೈಸೂರು : ಜಿಲ್ಲಾಧಿಕಾರಿಗಳಾದ ಡಾ ಕೆ.ವಿ.ರಾಜೇಂದ್ರ ಅವರ ಅಧ್ಯಕ್ಷತೆಯಲ್ಲಿ ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೃಷಿ ಪರಿಕರ ಸರಬರಾಜುದಾರರು ಹಾಗೂ ವಿತರಕರ ಸಭೆಯನ್ನು ನಡೆಸಲಾಯಿತು.

Join Our Whatsapp Group

2024-25ನೇ ಸಾಲಿನಲ್ಲಿ ಮುಂಗಾರು ಹಂಗಾಮಿಗೆ ಬೇಕಾಗುವ ರಸಗೊಬ್ಬರ, ಬಿತ್ತನೆ ಬೀಜ ಹಾಗೂ ಕೀಟನಾಶಕಗಳ ದಾಸ್ತಾನುಗಳ ಲಭ್ಯತೆಯಲ್ಲಿ ಯಾವುದೇ ವ್ಯತ್ಯಾಸವಾಗದಂತೆ ಪರಿಶೀಲಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಎಲ್ಲಾ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರುಗಳಿಗೆ ಸೂಚಿಸಿದರು.

ರೈತರು ಇಚ್ಛಿಸುವ ರಸಗೊಬ್ಬರದ ಜೊತೆ ಲಿಂಕ್ ಮಾಡಿ ಮತ್ತೊಂದು ಗೊಬ್ಬರವನ್ನು ಮಾರಾಟಗಾರರು ವಿತರಿಸಬಾರದು ಹಾಗೂ ರಸಗೊಬ್ಬರಗಳನ್ನು ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಿದಲ್ಲಿ ರಸಗೊಬ್ಬರ ನಿಯಂತ್ರಣ ಕಾಯಿದೆಯ ಆದೇಶದಂತೆ ಕ್ರಮಕೈಗೊಳ್ಳಲು ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು.

 ಜಿಲ್ಲೆಯಲ್ಲಿ ಎಲ್ಲಿಯೂ ಬಿತ್ತನೆ ಬೀಜಗಳು, ರಸಗೊಬ್ಬರಗಳು ಹಾಗೂ ಕೀಟನಾಶಕಗಳ ಕೊರತೆ ಉಂಟಾಗದಂತೆ ಸಮರ್ಪಕ ದಾಸ್ತಾನು ಇಟ್ಟುಕೊಳ್ಳತಕ್ಕದ್ದು. ಪ್ರಸ್ತುತ ವರ್ಷ ವಾಡಿಕೆಗಿಂತ ಹೆಚ್ಚಿನ ಮಳೆ ಬೀಳುವ ಸಂಭವವಿರುವುದರಿಂದ ಯಾವುದೇ ಪರಿಕರಗಳ ಲಭ್ಯತೆಯಲ್ಲಿ ವ್ಯತ್ಯಾಸವಾಗದಂತೆ ಅಧಿಕೃತ ಬಿಲ್ಲನ್ನು ರೈತರಿಗೆ ನೀಡುವಂತೆ ಕ್ರಮವಹಿಸಲು ಸೂಚಿಸಿದರು. ರಸಗೊಬ್ಬರ ಸಾಗಾಣಿಕೆ ವೆಚ್ಚಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಹೆಚ್ಚಿನ ದರವನ್ನು ಸಾಗಾಣಿಕೆದಾರರು ನಿಗದಿಪಡಿಸಲಾಗುತ್ತಿದ್ದು ಈ ಬಗ್ಗೆ ಡೀಸೆಲ್ ಹಾಗೂ ಇತರೆ ವೆಚ್ಚಗಳ ಏರಿಕೆಯಾಗದಿರುವುದರಿಂದ ಸಂಬಂಧಿಸಿದ ಲಾರಿ ಮಾಲೀಕರ ಸಂಘ ಹಾಗೂ ಲಾರಿ ಅಸೋಸಿಯೇಷನ್ ಪದಾಧಿಕಾರಿಗಳೊಡನೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಹಾಗೂ ಜಂಟಿ ಕೃಷಿ ನಿರ್ದೇಶಕರು ಸಭೆ ನಡೆಸಿ ರೈತರಿಗೆ ಯಾವುದೇ ರೀತಿಯ ರಸಗೊಬ್ಬರ ಸರಬರಾಜಿನಲ್ಲಿ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು  ಸೂಚಿಸಿದರು.

2024-25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಬೆಳೆ ವಿಮೆ ನೊಂದಾಯಿಸಿಕೊಳ್ಳಲು ಕ್ರಮವಹಿಸುವಂತೆ ಕೃಷಿ ಪರಿಕರ ಮಾರಾಟಗಾರರ ಸಂಘದವರು ಸಹಕರಿಸಬೇಕು ಹಾಗೂ ಕೃಷಿ ಪರಿಕರ ಮಾರಾಟ ಮಳಿಗೆಯಲ್ಲಿ ಬೆಳೆ ವಿಮೆಗೆ ಸಂಬಂಧಿಸಿದ ಪೋಸ್ಟರ್ ಪ್ರದರ್ಶಿಸಬೇಕು ಎಂದು ಅವರು ತಿಳಿಸಿದರು.

 ರೈತರ ಪ್ರಸ್ತುತ ಸಮಸ್ಯೆಗಳ ಕುರಿತು ಕೃಷಿ ಪರಿಕರ ಮಾರಾಟಗಾರರ ಸಂಘದವರ ಮೂಲಕ ರೈತರಿಗೆ ತರಬೇತಿಯನ್ನು ನೀಡಬೇಕು ಎಂದು ತಿಳಿಸಿದರು.

ಬೆಳೆ ವಿಮೆ ಯೋಜನೆಯ ಕರಪತ್ರ ಹಾಗೂ ಪೋಸ್ಟರ್ ಗಳನ್ನು  ಜಿಲ್ಲಾಧಿಕಾರಿಗಳು ಬಿಡುಗಡೆಗೊಳಿಸಲಾಯಿತು.

 ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕರಾದ ಚಂದ್ರಶೇಖರ್, ವಿವಿಧ ಕಂಪನಿಯ ರಸಗೊಬ್ಬರ ವಿತರಕರು, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ರಸಗೊಬ್ಬರ, ಬಿತ್ತನೆ ಬೀಜ ಹಾಗೂ ಕೀಟನಾಶಕ ಮಾರಾಟಗಾರರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಕರ್ನಾಟಕ ರಾಜ್ಯ ಬೀಜ ನಿಗಮ ನಿ., ರಾಷ್ಟ್ರೀಯ ಬೀಜ ನಿಗಮ ನಿ., ಕರ್ನಾಟಕ ರಾಜ್ಯ ಸಹಕಾರ ಮಾರುಕಟ್ಟೆ ಮಹಾ ಮಂಡಳಿಯ ಅಧಿಕಾರಿಗಳು ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಗಳು ಹಾಗೂ  ಕೃಷಿ ಇಲಾಖೆಯ ಇತರೆ ಅಧಿಕಾರಿಗಳು ಹಾಜರಿದ್ದರು.