ದೇವಾಲಯದಲ್ಲಿ ಸಿದ್ದಪಡಿಸುವ ಪ್ರಸಾದಕ್ಕೆ ಎಷ್ಟು ಪ್ರಮಾಣದ ಸಕ್ಕರೆ, ಎಷ್ಟು ಪ್ರಮಾಣದ ಅಕ್ಕಿ ಬಳಸಲಾಗುತ್ತಿದೆ ಎಂಬತಹ ಪ್ರಶ್ನೆಗಳನ್ನು ಕೇಳುವ ಮೂಲಕ ದೇವಾಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅರ್ಚಕರಿಗೆ ವಿನಾ ಕಾರಣ ಕಿರಿಕಿರಿ ಉಂಟು ಮಾಡಲಾಗುತ್ತಿದೆ. ಹೀಗಾಗಿ, ಮಾಹಿತಿ ಹಕ್ಕು ಕಾಯಿದೆ ನಿಬಂಧನೆಗಳು ದೇವಾಲಯಗಳಿಗೆ ಅನ್ವಯಿಸುವುದಿಲ್ಲ ಎಂದು ಆದೇಶಿಸುವಂತೆ ಕೋರಿ ಕರ್ನಾಟಕ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.
ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಪೂಜಾರಿಗಳು, ಆಗಮಿಕರು ಮತ್ತು ಆರ್ಚಕರ ಸಂಘ ಸಲ್ಲಿಸಿರುವ ಪಿಐಎಲ್ ಅನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್ ಅವರ ನೇತೃತ್ವದ ವಿಭಾಗೀಯ ಪೀಠವು ಕೆಲ ಕಾಲ ವಿಚಾರಣೆ ನಡೆಸಿ, ಜೂನ್ 11ಕ್ಕೆ ಮುಂದೂಡಿತು.
ಅರ್ಜಿದಾರರ ಪರ ವಕೀಲರು, “ಪ್ರಸಾದ ಸಿದ್ದಪಡಿಸುವ ಸಂದರ್ಭದಲ್ಲಿ ಎಷ್ಟು ಪ್ರಮಾಣದ ಸಕ್ಕರೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಎಷ್ಟು ಅಕ್ಕಿ ಬಳಸಲಾಗುತ್ತಿದೆ. ದಿನಕ್ಕೆ ದೇವರಿಗೆ ಎಷ್ಟು ಅರ್ಚನೆಗಳನ್ನು ಮಾಡಲಾಗುತ್ತಿದೆ ಎಂಬ ಪ್ರಶ್ನೆಗಳನ್ನು ಆರ್‌ಟಿಐ ಕಾಯಿದೆ ಅಡಿ ಕೇಳುವ ಮೂಲಕ ಕೆಲವರು ಕಾಯಿದೆಯನ್ನು ದುರ್ಬಳಕೆ ಮಾಡಿಕೊಳ್ಳುವುದಲ್ಲದೇ ಅರ್ಚಕರಿಗೆ ಹಿಂಸೆ ಹಾಗೂ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ” ಎಂದು ಆಕ್ಷೇಪಿಸಿದರು.
“ದೇವಾಲಯಗಳಿಗೆ ಭಕ್ತರು ಕಾಣಿಕೆಯ ಮೂಲಕ ಎಲ್ಲವನ್ನೂ ನೀಡುತ್ತಾರೆ. ಸರ್ಕಾರದ ನೆರವು ಅಷ್ಟಕಷ್ಟೆ. ಆದರೆ, ಆರ್‌ಟಿಐ ಅಡಿ ಮಾಹಿತಿ ಕೇಳುವ ಮೂಲಕ ಹಿಂಸೆ ನೀಡಲಾಗುತ್ತಿದೆ. ಆದ್ದರಿಂದ ದೇವಾಲಯಗಳನ್ನು ಮಾಹಿತಿ ಹಕ್ಕು ಕಾಯಿದೆಯಿಂದ ಹೊರಗಿಡಬೇಕು” ಎಂದು ಕೋರಿದರು.
ಇದಕ್ಕೆ ಆಕ್ಷೇಪಿಸಿದ ಸರ್ಕಾರಿ ವಕೀಲೆ ನಿಲೋಫರ್ ಅಕ್ಬರ್ “ಈ ರೀತಿ ಅರ್ಜಿ ಸಲ್ಲಿಕೆಗೆ ಕಾರಣವೇ ಇಲ್ಲ. ಆದರೂ ಅರ್ಜಿ ಸಲ್ಲಿಕೆಯಾಗಿದೆ. ಈ ರೀತಿಯಲ್ಲಿ ಮಾಹಿತಿ ಹಕ್ಕು ಕಾಯಿದೆಯಡಿ ಮಾಹಿತಿ ಕೇಳುವುದು ತಪ್ಪು ಎಂದರೆ ಹೇಗೆ?” ಎಂದು ಪೀಠಕ್ಕೆ ವಿವರಿಸಿದರು.
ಆಗ ಪೀಠವು “ಇದು ಸಾರ್ವಜನಿಕ ಹಿತಾಸಕ್ತಿ ಅಡಿಯಲ್ಲಿ ಬರುವುದಿಲ್ಲ. ಸಾಮಾನ್ಯವಾಗಿ ಈ ರೀತಿಯಲ್ಲಿ ಆದೇಶಿಸುವುದಕ್ಕೂ ಅವಕಾಶವಿಲ್ಲ. ಯಾವ ದೇವಾಲಯ ಸಾರ್ವಜನಿಕ ಪ್ರಾಧಿಕಾರ, ಯಾವ ದೇವಾಲಯ ಸಾರ್ವಜನಿಕ ಪ್ರಾಧಿಕಾರವಲ್ಲ ಎಂಬುದು ನಮಗೆ ಗೊತ್ತಾಗುವುದಿಲ್ಲ. ಪ್ರತೀ ಪ್ರಕರಣವನ್ನು ಪರಿಶೀಲಿಸಲಾಗುವುದಿಲ್ಲ” ಎಂದು ತಿಳಿಸಿ ವಿಚಾರಣೆ ಮುಂದೂಡಿತು.
ಅರ್ಜಿಯಲ್ಲಿ ಏನಿದೆ: ಸಮಾಜದ ಸೇವೆ ಮಾಡುತ್ತಿರುವ ಅರ್ಚಕರು, ವೇದ ವಿದ್ವಾಂಸರು, ಪುರೋಹಿತರಿಗೆ ಮಾಹಿತಿ ಹಕ್ಕು ಕಾಯಿದೆಯಡಿ ವೈಯಕ್ತಿಕ ಮಾಹಿತಿ ಕೇಳುವ ಮೂಲಕ ಅವರಿಗೆ ಕಿರುಕುಳ ನೀಡಲಾಗುತ್ತಿದೆ. ಅಲ್ಲದೇ, ಹಣ ಮತ್ತು ಬೆಲ ಬಾಳುವ ವಸ್ತುಗಳಿಗೆ ಬೇಡಿಕೆ ಇಡುತ್ತಾರೆ. ನೀಡದಿದ್ದಲ್ಲಿ ದೇವರಿಗೆ ಮಾಡುವ ಹೋಮ, ಅಭಿಷೇಕಗಳನ್ನು ಮಾಡಿಕೊಡುವಂತೆ ಕೋರುತ್ತಾರೆ. ಭಕ್ತರು ದೇವರಿಗೆ ನೀಡುವ ದಾನಗಳಲ್ಲಿ ತಮಗೂ ಪಾಲು ನೀಡಬೇಕು ಎಂದು ಬೇಡಿಕೆ ಇಡುತ್ತಾರೆ. ಇದರಿಂದ ಅರ್ಚಕರು ತಮ್ಮ ಕಾರ್ಯ ನಿರ್ವಹಿಸಲು ತೊಂದರೆಯಾಗಿದೆ. ಹೀಗಾಗಿ ದೇವಾಲಯಗಳನ್ನು ಮಾಹಿತಿ ಹಕ್ಕು ಕಾಯಿದೆಯಿಂದ ಹೊರಗಿಡಬೇಕು ಎಂದು ಕೋರಲಾಗಿದೆ.
ದೇವಾಲಯಗಳು ಸಾರ್ವಜನಿಕ ಪ್ರಾಧಿಕಾರಗಳಲ್ಲ ಎಂದು ಘೋಷಿಸಬೇಕು. ಈ ಮೂಲಕ ದೇವಾಲಯಗಳನ್ನು ಆರ್‌ಟಿಐ ಕಾಯಿದೆಯಿಂದ ಹೊರಗಿಡಬೇಕು. ಮಾಹಿತಿ ಹಕ್ಕು ಕಾಯಿದೆಯಡಿ ಸಾರ್ವಜನಿಕರು ಕೇಳುವ ಮಾಹಿತಿಯನ್ನು ಒದಗಿಸುವ ಸಲುವಾಗಿ ಧಾರ್ಮಿಕ ದತ್ತಿ ಇಲಾಖೆಗೆ ಸಂಬಂಧಿಸಿದಂತೆ ಸಾರ್ವಜನಿಕ ಮಾಹಿತಿ ಅಧಿಕಾರಿ, ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ ಮತ್ತು ಮೇಲ್ಮನವಿ ಪ್ರಾಧಿಕಾರ ನೇಮಿಸುವ ಸಂಬಂಧ ರಾಜ್ಯ ಸರ್ಕಾರ 2007ರ ಜೂನ್ 16ರಂದು ಮತ್ತು 2017ರ ಫೆಬ್ರವರಿ 3ರಂದು ಹೊರಡಿಸಿರುವ ಎರಡು ಅಧಿಸೂಚನೆಗಳನ್ನು ರದ್ದುಮಾಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.