ಮನೆ ರಾಜ್ಯ ಮೈಸೂರು: ಗುಜರಿ ಅಂಗಡಿಯಲ್ಲಿ ವಿಷಾನಿಲ ಸೋರಿಕೆ, 20ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು

ಮೈಸೂರು: ಗುಜರಿ ಅಂಗಡಿಯಲ್ಲಿ ವಿಷಾನಿಲ ಸೋರಿಕೆ, 20ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು

0

ಮೈಸೂರು: ನಗರದ ಹಳೆ ಕೆಸರೆಯಲ್ಲಿರುವ ಗುಜರಿ ಅಂಗಡಿಯಲ್ಲಿ ವಿಷಕಾರಿ ಅನಿಲ ಸೋರಿಕೆಯಾದ ಪರಿಣಾಮ 20ಕ್ಕೂ ಹೆಚ್ಚು ಮಂದಿ ಉಸಿರಾಟದ ಸಮಸ್ಯೆ ಸೇರಿದಂತೆ ಇನ್ನಿತರ ಸಮಸ್ಯೆಗಳು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

Join Our Whatsapp Group

ಮಹಮದ್ ಎಂಬುವವರಿಗೆ ಸೇರಿದ ಗುಜರಿಯಲ್ಲಿ ಈ ಘಟನೆ ನಡೆದಿದೆ. ಘಟನೆಯಿಂದಾಗಿ ಹಳೆ ಕೆಸರೆಯಲ್ಲಿ ವಾಸವಾಗಿರುವ ಹಲವರು ಉಸಿರಾಟದ ತೊಂದರೆ, ಕೆಮ್ಮು, ವಾಂತಿ ಸೇರಿದಂತೆ ಇನ್ನಿತರ ಸಮಸ್ಯೆಗಳು ಕಾಣಿಸಿಕೊಂಡಿದ್ದು, ಇವರುಗಳನ್ನು ನಗರದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬಂದಿ, ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಅಲ್ಲದೇ ಆರೋಗ್ಯ ಇಲಾಖೆ ಸಿಬಂದಿ ಸಹ ಸ್ಥಳಕ್ಕಾಗಮಿಸಿ ಘಟನೆಯಿಂದ ತೊಂದರೆಗೆ ಸಿಲುಕಿದವರ ಆರೋಗ್ಯ ತಪಾಸಣೆ ನಡೆಸಿದ್ದಾರೆ.

ಗುಜರಿ ಅಂಗಡಿಯಲ್ಲಿ ಮೂರು ತಿಂಗಳ ಹಿಂದೆ ದಾವಣಗೆರೆಯಿಂದ ಗುಜರಿ ಖರೀದಿಸಿ ತರಲಾಗಿತ್ತು. ಅದರಲ್ಲಿ ಕ್ಲೋರಿನ್ ಸಿಲಿಂಡರ್‌ಗಳು ಸಹ ಇದ್ದವು, ಈ ಪೈಕಿ ಒಂದರಲ್ಲಿ ಗ್ಯಾಸ್ ಇದ್ದು, ಇದನ್ನು ತುಂಡು ಮಾಡುವಾಗ ಸಿಲಿಂಡರ್‌ನ ಒಳಗಿದ್ದ ಕ್ಲೋರಿನ್ ಹೊರ ಬಂದಿದೆ. ಪರಿಣಾಮ ಸಮೀಪದ ಮನೆಗಳಲ್ಲಿ ವಾಸಿಸುತ್ತಿದ್ದ ನಿವಾಸಿಗಳಲ್ಲಿ ಉಸಿರಾಟದ ಸಮಸ್ಯೆ ಸೇರಿದಂತೆ ಹಲವು ರೀತಿಯ ತೊಂದರೆಗಳು ಕಾಣಿಸಿಕೊಂಡಿದೆ. ಸದ್ಯ ಇವರುಗಳನ್ನು ಮೈಸೂರಿನ ಕೆ.ಆರ್.‌ ಆಸ್ಪತ್ರೆ ಸೇರಿದಂತೆ ಇನ್ನಿತರ ಆಸ್ಪತ್ರೆಗಳಿಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.