ಮನೆ ಮನರಂಜನೆ ಜೂ.21ರಂದು “ಸಂಭವಾಮಿ ಯುಗೇ ಯುಗೇ’ ಚಿತ್ರ ಬಿಡುಗಡೆ

ಜೂ.21ರಂದು “ಸಂಭವಾಮಿ ಯುಗೇ ಯುಗೇ’ ಚಿತ್ರ ಬಿಡುಗಡೆ

0

ಸಂಭವಾಮಿ ಯುಗೇ ಯುಗೇ’.ಹೀಗೊಂದು ಚಿತ್ರ ಸದ್ದಿಲ್ಲದೇ ಚಿತ್ರೀಕರಣ ಮುಗಿಸಿ ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ ಮಾತನ್ನೇ ಚಿತ್ರದ ಟೈಟಲ್‌ನ್ನಾಗಿಸಿದ ಖುಷಿ ಚಿತ್ರತಂಡದ್ದು.

Join Our Whatsapp Group

ರಾಜಲಕ್ಷ್ಮೀ ಎಂಟರ್‌ಟೈನ್ಮೆಂಟ್‌ ಲಾಂಛನದಲ್ಲಿ ಪ್ರತಿಭಾ ಅವರು ನಿರ್ಮಿಸುತ್ತಿರುವ, ಚೇತನ್‌ ಚಂದ್ರಶೇಖರ್‌ ಶೆಟ್ಟಿ ನಿರ್ದೇಶನದಲ್ಲಿ ಜಯ್‌ ಶೆಟ್ಟಿ ನಾಯಕನಾಗಿ ನಟಿಸಿರುವ “ಸಂಭವಾಮಿ ಯುಗೇ ಯುಗೇ’ ಚಿತ್ರ ಜೂ.21ರಂದು ತೆರೆಕಾಣುತ್ತಿದೆ. ನಿರ್ದೇಶಕ ಚೇತನ್‌ ಶೆಟ್ಟಿ ಅವರಿಗೆ ಇದು ಚೊಚ್ಚಲ ಚಿತ್ರ. ಸುಮಾರು 10 ವರ್ಷಗಳ ಕಾಲ ಹಲವು ನಿರ್ದೇಶಕರ ಬಳಿ ಕೆಲಸ ಕಲಿತಿರುವ ಚೇತನ್‌ ಶೆಟ್ಟಿಗೆ ಒಂದು ಹೊಸ ಬಗೆಯ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರಬೇಕೆಂಬ ಆಸೆ ಇತ್ತಂತೆ. ಈಗ ಆ ಆಸೆ ಈಡೇರಿದ ಖುಷಿ ಅವರದು.

ಚಿತ್ರದ ಬಗ್ಗೆ ಮಾತನಾಡುವ ಚೇತನ್‌, “ಸಂಭವಾಮಿ ಯುಗೇ ಯುಗೇ’ ಚಿತ್ರ ಹಳ್ಳಿ ಹಿನ್ನೆಲೆಯಲ್ಲಿ ನಡೆಯುತ್ತದೆ. ಇಂದಿನ ಯುವ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ಈ ಸಿನಿಮಾ ಮಾಡಿದ್ದೇನೆ. ಧರ್ಮ-ಅಧರ್ಮದ ನಡುವಿನ ಸಂಘರ್ಷ ಕೂಡಾ ಇಲ್ಲಿದೆ. ಅವೆಲ್ಲವನ್ನು ಕಮರ್ಷಿಯಲ್‌ ಚೌಕಟ್ಟಿನಲ್ಲಿ ತೋರಿಸಿದ್ದೇನೆ. ಇದೊಂದು ಕಂಟೆಂಟ್‌ ಸಿನಿಮಾ. ಶಿಕ್ಷಣ ಪಡೆದ ಪ್ರತಿಯೊಬ್ಬರು ಹಳ್ಳಿ ಬಿಟ್ಟು ಸಿಟಿ ಸೇರಿದರೆ ಮುಂದೊಂದು ಕೃಷಿ ಮಾಡುವವರೇ ಇಲ್ಲ ಎಂಬಂತಾಗುತ್ತದೆ.. ಇಂತಹ ಹಲವು ಅಂಶಗಳೊಂದಿಗೆ ನಮ್ಮ ಚಿತ್ರ ಸಾಗುತ್ತದೆ. ಮುಖ್ಯವಾಗಿ ಚಿತ್ರದಲ್ಲಿ ಸಾಕಷ್ಟು ಥ್ರಿಲ್ಲರ್‌ ಅಂಶಗಳಿದ್ದು, ಪ್ರೇಕ್ಷಕರಿಗೆ ಇಷ್ಟವಾಗುವ ವಿಶ್ವಾಸವಿದೆ’ ಎನ್ನುತ್ತಾರೆ.

ಪಕ್ಕಾ ಕಮರ್ಷಿಯಲ್‌ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಥ್ರಿಲ್ಲರ್‌, ಆ್ಯಕ್ಷನ್‌, ಲವ್‌, ಸೆಂಟಿಮೆಂಟ್‌ ಸೇರಿದಂತೆ ನೋಡುಗನಿಗೆ ಬೇಕಾದ ಎಲ್ಲಾ ಅಂಶಗಳು ಇವೆ ಎನ್ನಲು ಅವರು ಮರೆಯುವುದಿಲ್ಲ. ಈ ಚಿತ್ರವನ್ನು ರಾಜಲಕ್ಷ್ಮೀ ಎಂಟರ್‌ಟೈನ್ಮೆಂಟ್‌ ಲಾಂಛನದಲ್ಲಿ ಪ್ರತಿಭಾ ಅವರು ನಿರ್ಮಿಸಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಉತ್ತಮ ಸಿನಿಮಾಗಳನ್ನು ನೀಡಬೇಕೆಂಬ ಸದುದ್ದೇಶದಿಂದ ಸಿನಿಮಾ ನಿರ್ಮಾಣಕ್ಕೆ ಇಳಿದ ಸಂಸ್ಥೆ ಇದು. ಕೃಷಿ ಮತ್ತು ರೈತರ ಮೇಲೆ ಮಾಡಿದ ಚಿತ್ರವಿದು, ತನಗೆ ಆಶ್ರಯ ಕೊಟ್ಟ ಊರಿಗೆ ಏನಾದರೂ ಮಾಡಬೇಕು ಎಂದು ನಾಯಕ ಮುಂದಾಗುತ್ತಾನೆ. ಮುಂದೇನಾಗುತ್ತದೆ ಎನ್ನುವುದೇ ಈ ಚಿತ್ರದ ಕಥಾಹಂದರ ಎನ್ನುವುದು ನಾಯಕ ಜಯ್‌ ಶೆಟ್ಟಿ ಮಾತು.

ನಾಯಕಿ ನಿಶಾ ರಜಪೂತ್‌ ಮಾತನಾಡುತ್ತ ನಾನು ಬಿಜಾಪುರದವಳಾದರೂ, ಬೆಳೆದಿದ್ದು ಮುಂಬೈನಲ್ಲಿ. ಕನ್ನಡದಲ್ಲಿ ನಟಿಸಬೇಕು ಎಂಬ ಆಸೆ ಇತ್ತು. ಈ ಚಿತ್ರದಲ್ಲಿ ಸ್ವಾತಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದು ಹೇಳಿದರು.

ನಾಯಕನ ತಂಗಿಯ ಪಾತ್ರ ಮಾಡಿರುವ ಮಧುರಾ ಗೌಡ ಮಾತನಾಡಿ ಈ ಚಿತ್ರದಲ್ಲಿ ಸುಧಾರಾಣಿ ಅವರ ಮಗಳಾಗಿ ನಟಿಸಿದ್ದು ನನ್ನ ಅದೃಷ್ಟ ಎಂದು ತನ್ನ ಪಾತ್ರದ ಕುರಿತು ಹೇಳಿಕೊಂಡರು.