ಮನೆ ಕಾನೂನು ಅಪ್ರಾಪ್ತರು ವಾಹನ ಚಲಾಯಿಸಿ ಅಪಘಾತವಾದರೆ ಮಾಲೀಕರೇ ಪರಿಹಾರ ನೀಡಬೇಕು: ಕರ್ನಾಟಕ ಹೈಕೋರ್ಟ್ ತೀರ್ಪು

ಅಪ್ರಾಪ್ತರು ವಾಹನ ಚಲಾಯಿಸಿ ಅಪಘಾತವಾದರೆ ಮಾಲೀಕರೇ ಪರಿಹಾರ ನೀಡಬೇಕು: ಕರ್ನಾಟಕ ಹೈಕೋರ್ಟ್ ತೀರ್ಪು

0

ಬೆಂಗಳೂರು: ಅಪ್ರಾಪ್ತ ವಯಸ್ಕರು ವಾಹನ ಚಲಾಯಿಸಿ ಅಪಘಾತ ಉಂಟು ಮಾಡಿದರೆ, ವಾಹನದ ಮಾಲೀಕರು ಸಂಬಂಧಪಟ್ಟವರಿಗೆ ಪರಿಹಾರ ನೀಡಬೇಕೇ ಹೊರತು ವಿಮಾ ಕಂಪನಿಯಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.

Join Our Whatsapp Group

ವಿಮಾ ಕಂಪನಿಯ ಮೇಲೆ ಹೊಣೆಗಾರಿಕೆ ವಹಿಸಿದ ಮೋಟಾರು ವಾಹನ ಅಪಘಾತ ನ್ಯಾಯಮಂಡಳಿಯ ತೀರ್ಪು ರದ್ದುಗೊಳಿಸಿ ನ್ಯಾಯಮೂರ್ತಿ ಹಂಚಾಟೆ ಸಂಜೀವ್‌ಕುಮಾರ್ ಈ ತೀರ್ಪು ನೀಡಿದ್ದಾರೆ. ಆ ಮೂಲಕ, ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್‌ನ ಮೇಲ್ಮನವಿಯನ್ನು ಪುರಸ್ಕರಿಸಿದ್ದಾರೆ.

ಅಪಘಾತದಿಂದ ತೊಂದರೆಗೆ ಒಳಗಾದವರಿಗೆ ಪರಿಹಾರವನ್ನು ಪಾವತಿಸುವ ಹೊಣೆಗಾರಿಕೆಯಿಂದ ವಿಮಾ ಕಂಪನಿಯನ್ನು ನ್ಯಾಯಾಲಯ ಮುಕ್ತಗೊಳಿಸಿದೆ. ಟ್ರಿಬ್ಯೂನಲ್ ಆದೇಶದ ಪ್ರಕಾರ ನೀಡಬೇಕಿದ್ದ ಪರಿಹಾರದ ಮೊತ್ತವಾದ 2.56 ಲಕ್ಷ ರೂ.ಗೆ ಶೇ 6ರ ವಾರ್ಷಿಕ ಬಡ್ಡಿಯೊಂದಿಗೆ 4.44 ರೂ. ಪಾವತಿಸುವಂತೆಯೂ ಹೈಕೋರ್ಟ್ ಆದೇಶಿಸಿದೆ.

ಅಪಘಾತಕ್ಕೀಡಾದ ವಾಹನದ ಮಾಲೀಕರಾದ ಮಹಮ್ಮದ್ ಮುಸ್ತಫಾ ಅವರು ಪರಿಹಾರವನ್ನು ಸಂಬಂಧಪಟ್ಟವರಿಗೆ ನೀಡಬೇಕು. ಅಪಘಾತದ ಸಮಯದಲ್ಲಿ ಮೃತಪಟ್ಟ ವ್ಯಕ್ತಿಗೆ 61 ವರ್ಷ ವಯಸ್ಸಾಗಿದ್ದು, ಅವರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದರು. ಹೀಗಾಗಿ ಅವರಿಗೆ ನೀಡಬೇಕಾದ ಪರಿಹಾರದ ಮೊತ್ತವನ್ನು ಹೆಚ್ಚಿಸಲಾಗಿದೆ.

2014ರ ಆಗಸ್ಟ್ 11ರಂದು ತೀರ್ಪು ನೀಡಿದ್ದ ಟ್ರಿಬ್ಯೂನಲ್, ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿ ನೆಲೆಸಿರುವ ಮೃತರ ಕುಟುಂಬದ ಸದಸ್ಯರಾದ ಬೀಬಿ ನೈಸಾ ಮತ್ತು ಹಕ್ಕುದಾರರಿಗೆ ವಾರ್ಷಿಕ ಶೇ 8ರ ಬಡ್ಡಿಯೊಂದಿಗೆ 2.56 ಲಕ್ಷ ರೂ.ಗಳ ಪರಿಹಾರ ನೀಡುವಂತೆ ವಿಮಾ ಕಂಪನಿಗೆ ಆದೇಶ ನೀಡಿತ್ತು.

ಪ್ರಕರಣದ ಹಿನ್ನೆಲೆ

2008 ರ ಡಿಸೆಂಬರ್ 12 ರಂದು ಬೆಳಿಗ್ಗೆ 8.45 ರ ಸುಮಾರಿಗೆ, ಭಟ್ಕಳದ ರಂಗಿನಕಟ್ಟಾ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ 17 ರಲ್ಲಿ ಅಪ್ರಾಪ್ತ ಮೋಟಾರ್ ಸೈಕಲ್ ಸವಾರ ಹಸನ್ ಶಬ್ಬೀರ್ ಎಂಬವರಿಗೆ ಡಿಕ್ಕಿ ಹೊಡೆದಿದ್ದ. ತೀವ್ರವಾಗಿ ಗಾಯಗೊಂಡ ಶಬ್ಬೀರ್ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದರು.

ಮೃತರ ಕುಟುಂಬ ಸದಸ್ಯರಿಗೆ 2.56 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ವಿಮಾ ಕಂಪನಿಗೆ ಟ್ರಿಬ್ಯೂನಲ್ ತೀರ್ಪು ನೀಡಿತ್ತು. ಅಪಘಾತವು ಆಗ 16 ವರ್ಷ ವಯಸ್ಸಿನ ಹುಡುಗನಿಂದ ಸಂಭವಿಸಿದೆ ಎಂಬ ಆಧಾರದ ಮೇಲೆ ವಿಮಾ ಕಂಪನಿಯು ಇದನ್ನು ಪ್ರಶ್ನಿಸಿತ್ತು. ಸವಾರನು ಅಪ್ರಾಪ್ತನಾಗಿದ್ದರಿಂದ, ಅವನು ಮಾನ್ಯ ಚಾಲನಾ ಪರವಾನಗಿಯನ್ನು ಹೊಂದಿರಲಿಲ್ಲ. ಆದ್ದರಿಂದ ಪರಿಹಾರವನ್ನು ಪಾವತಿಸಲಾಗದು ಎಂದು ವಿಮಾ ಕಂಪನಿ ವಾದಿಸಿತ್ತು.