ಮನೆ ಸುದ್ದಿ ಜಾಲ ಕೃಷಿ ಅನುದಾನ ಬಳಸಿಕೊಳ್ಳುವಲ್ಲಿ ರಾಜ್ಯಗಳು ವಿಫಲ: ಸಚಿವೆ ಶೋಭಾ ಕರಂದ್ಲಾಜೆ

ಕೃಷಿ ಅನುದಾನ ಬಳಸಿಕೊಳ್ಳುವಲ್ಲಿ ರಾಜ್ಯಗಳು ವಿಫಲ: ಸಚಿವೆ ಶೋಭಾ ಕರಂದ್ಲಾಜೆ

0

ಮೈಸೂರು(Mysuru)-ಜಿಲ್ಲಾವಾರು ಕೃಷಿ ಯೋಜನಾ ವರದಿಗಳನ್ನು ಸಲ್ಲಿಸುವಲ್ಲಿ ರಾಜ್ಯ ಸರ್ಕಾರಗಳು ವಿಫಲವಾಗಿರುವ ಕಾರಣ ಕೇಂದ್ರ ಸರ್ಕಾರದ ಕೃಷಿ ಅನುದಾನ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ ಎಂದು ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಅಸಮಾಧಾನ ವ್ಯಕ್ತಪಡಿಸಿದರು.
ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ 1 ಲಕ್ಷ ಕೋಟಿ ರೂ. ಕೃಷಿ ಅನುದಾನ ಇಟ್ಟಿದ್ದರೂ ಕೇವಲ 6  ಸಾವಿರ ಕೋಟಿ ಮಾತ್ರ ಬಳಕೆಯಾಗಿದೆ ಇದಕ್ಕೆ ಕಾರಣವೇನು ಎಂಬ ಸುದ್ದಿಗಾರರ ಪ್ರಶ್ನೆಗೆ ಮೇಲಿನಂತೆ ಉತ್ತರಿಸಿದರು.
ಕೃಷಿಗೆ ಪೂರಕವಾದ ತೋಟಗಾರಿಕೆ, ಕೃಷಿ, ಸಕ್ಕರೆ, ಮೀನುಗಾರಿಕೆ, ರೇಷ್ಮೆ ಸೇರಿದಂತೆ ಐದು ಇಲಾಖೆಗಳು ಪ್ರತ್ಯೇಕವಾಗಿವೆ. ರೈತರ ಅಭಿವೃದ್ಧಿ ದೃಷ್ಟಿಯಿಂದ ಇವುಗಳೆಲ್ಲಾ ಒಂದೇ ಇಲಾಖೆಯಾಗಬೇಕು. ಈ ಹಂತದಲ್ಲಿ ಕೃಷಿ ಮತ್ತು ತೋಟಗಾರಿಕೆ ಮೊದಲು ಒಂದಾಗಬೇಕು ಎಂದು ಸಲಹೆ ನೀಡಿದರು.
ನಮ್ಮದು ಕೃಷಿ ಆಧಾರಿತ ದೇಶ. ಶೇ.80ರಷ್ಟು ಜನರು ಕೃಷಿ ಮತ್ತು ಕೃಷಿ ಆಧಾರಿತ ಕಸುಬು ನಿರ್ವಹಿಸುತ್ತಿದ್ದರೂ ಕೃಷಿ ಲಾಭದಾಯಕವಲ್ಲ ಎಂದು ಬಹುತೇಕ ರೈತರು ವ್ಯವಸಾಯದಿಂದ ದೂರ ಉಳಿದಿದ್ದಾರೆ. ಕೃಷಿ ಭೂಮಿ ನಿವೇಶನಗಳಾಗುತ್ತಿದೆ. ಕೆಲವು ಕಡೆ ಪಾಳು ಬಿದ್ದಿದೆ. ಇದನ್ನು ಮನಗಂಡು ಪ್ರಧಾನಿ ನರೇಂದ್ರ ಮೋದಿಯವರು 10 ಸಾವಿರ ಕೃಷಿ ಉತ್ಪಾದಕರ ಸಂಘಗಳನ್ನು ನಿರ್ಮಾಣ ಮಾಡಿ ರೈತರಿಗೆ ಮಾರುಕಟ್ಟೆ ವ್ಯವಸ್ಥೆ, ಮೂಲಭೂತ ಸೌಲಭ್ಯ ಒದಗಿಸುವುದು, ಸಣ್ಣ ಮತ್ತು ಮಧ್ಯಮ ಕೃಷಿಕರನ್ನು ಒಟ್ಟುಗೂಡಿಸಿ ಒಂದೇ ರೀತಿಯ ಬೆಳೆಗಳನ್ನು ಬೆಳೆಯಲು ಉತ್ತೇಜನ ನೀಡುವ ಕೆಲಸ ಮಾಡುತ್ತಿದ್ದಾರೆ ಎಂದರು.
ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಗೆಲುವು ಖಚಿತ:
ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮೈ.ವಿ.ರವಿಂಶಕರ್ ಗೆಲ್ಲುವುದರಲ್ಲಿ ಯಾವುದೇ ಸಂದೇಹವಿಲ್ಲ. ಪರಿಷತ್‌ನ ಒಟ್ಟು ನಾಲ್ಕೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂದರು.
ಪಿಎಸ್‌ಐ ಹಗರಣ-ಶೋಭಾ ಮೌನ:
ರಾಜ್ಯದಲ್ಲಿ ಸಂಚಲನ ಮೂಡಿಸಿರುವ ಪಿಎಸ್‌ಐ ಹಗರಣ ವಿಧಾನ ಪರಿಷತ್ ಚುನಾವಣೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲವೇ ಎಂಬ ಪತ್ರಕರ್ತರ ಪ್ರಶ್ನೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಯಾವುದೇ ಉತ್ತರ ನೀಡದೆ ಮೌನ ವಹಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಗೋ.ಮಧುಸೂಧನ್, ಅಭ್ಯರ್ಥಿ ಮೈ.ವಿ.ರವಿಶಂಕರ್, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ ಮುಂತಾದವರು ಉಪಸ್ಥಿತರಿದ್ದರು.