ಸಿನಿಮಾ: ಕೋಟಿ. ನಿರ್ಮಾಣ: ಜಿಯೋ ಸ್ಟುಡಿಯೋ. ನಿರ್ದೇಶನ: ಪರಮೇಶ್ವರ್ ಗುಂಡ್ಕಲ್. ಪಾತ್ರವರ್ಗ: ಧನಂಜಯ್, ಮೋಕ್ಷಾ ಕುಶಾಲ್, ರಮೇಶ್ ಇಂದಿರಾ, ತಾರಾ, ರಂಗಾಯಣ ರಘು, ಪೃಥ್ವಿ ಶಾಮನೂರು, ದುನಿಯಾ ವಿಜಯ್ ಮೊದಲಾದವರು.
ಧನಂಜಯ್ ಅವರು ಮಾಸ್ ಸಿನಿಮಾ ಜೊತೆಗೆ ಫ್ಯಾಮಿಲಿ ಆಡಿಯನ್ಸ್ಗೂ ಹೆಚ್ಚು ಕನೆಕ್ಟ್ ಆಗಿದ್ದಾರೆ. ಅವರ ನಟನೆಯ ‘ರತ್ನನ್ ಪ್ರಪಂಚ’ ಚಿತ್ರದಲ್ಲಿ ತಾಯಿ ಸೆಂಟಿಮೆಂಟ್ ಹೈಲೈಟ್ ಆಗಿತ್ತು. ಈಗ ಮತ್ತೊಮ್ಮೆ ಅವರು ಫ್ಯಾಮಿಲಿ ಆಡಿಯನ್ಸ್ಗೆ ಇಷ್ಟ ಆಗುವ ಸಿನಿಮಾ ಮಾಡಿದ್ದಾರೆ. ‘ಕೋಟಿ’ ಸಿನಿಮಾದಲ್ಲಿ ಏನೆಲ್ಲ ಇದೆ ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.
ಕೋಟಿ (ಧನಂಜಯ್) ಅತ್ಯಂತ ಪ್ರಾಮಾಣಿಕ ವ್ಯಕ್ತಿ. ಅದೆಷ್ಟು ಪ್ರಾಮಾಣಿಕ ಎಂದರೆ ಚಿಕ್ಕ ವಯಸ್ಸಿನಿಂದ ಬೆಳೆದು ದೊಡ್ಡವನಾಗುವವರೆಗೆ ಒಂದೇ ಒಂದು ತಪ್ಪು ಕೆಲಸ ಮಾಡಿಲ್ಲ. ಪ್ರಾಮಾಣಿಕವಾಗಿ ಏನೇ ಇದ್ದರೂ ಮಾಡುತ್ತಾನೆ. ಎಲ್ಲಾದರೂ ಮೋಸ ನಡೆಯುತ್ತಿದೆ ಎಂದರೆ ಅಲ್ಲಿ ಆತ ಇರುವುದಿಲ್ಲ. ಇಷ್ಟು ಪ್ರಾಮಾಣಿಕನಾಗಿರುವ ಆತನಿಗೆ ಕೋಟ್ಯಾಧೀಶ್ವರ ಆಗೋ ಬಯಕೆ. ಅದು ಸಾಧ್ಯವಿಲ್ಲ ಎಂದು ಎಲ್ಲರೂ ಹೇಳಿದರೆ ಅದನ್ನು ಒಪ್ಪೋಕೆ ಆತ ರೆಡಿ ಇಲ್ಲ. ಕೊನೆಯಲ್ಲಿ ಕೋಟಿ ಹಣ ಮಾಡುತ್ತಾನಾ? ಪ್ರಾಮಾಣಿಕತೆ ಬಿಟ್ಟು ಕೆಟ್ಟ ಹಾದಿ ಹಿಡಿಯುತ್ತಾನಾ? ಅನ್ನೋ ಕುತೂಹಲಕ್ಕೆ ಸಿನಿಮಾದಲ್ಲಿ ಉತ್ತರ ಕಂಡುಕೊಳ್ಳಬೇಕು.
ಧನಂಜಯ್ ಅವರು ಮಾಸ್ ಜೊತೆ ಕ್ಲಾಸ್ ಪಾತ್ರಗಳಿಗೂ ಒಪ್ಪುತ್ತಾರೆ. ಈ ಸಿನಿಮಾದಲ್ಲಿ ಅವರದ್ಧು ಪ್ರಬುದ್ಧವಾದ ನಟನೆ. ಮಾಸ್ ಆಗಿ, ಅಮ್ಮನಿಗೆ ಮಗನಾಗಿ, ತಂಗಿ, ತಮ್ಮನಿಗೆ ಅಣ್ಣನಾಗಿ, ಪ್ರೀತಿಗಾಗಿ ಒದ್ಡಾಡೋ ಹುಡುಗನಾಗಿ ಅವರು ಇಷ್ಟ ಆಗುತ್ತಾರೆ. ಪೂರ್ಣವಾಗಿ ಪ್ರಾಮಾಣಿಕನಾದರೆ ಏನೆಲ್ಲ ಒದ್ದಾಟ ಇರುತ್ತದೆ ಎಂಬುದನ್ನು ಕಣ್ಣಿಗೆ ಕಟ್ಟುವಂತೆ ನಟಿಸಿದ್ದಾರೆ ತಾಯಿ ಹಾಗೂ ಮಗನ ಸೆಂಟಿಮೆಂಟ್ ಹೆಚ್ಚು ಕನೆಕ್ಟ್ ಆಗುತ್ತದೆ. ಧನಂಜಯ್ ಅವರ ಮುಗ್ಧ ನಗು ಮತ್ತಷ್ಟು ಸೆಳೆಯುತ್ತದೆ.
ಮೋಕ್ಷಾ ಕುಶಾಲ್ ಅವರು ನಾಯಕಿಯಾಗಿ ಗಮನ ಸೆಳೆದಿದ್ದಾರೆ. ನವಮಿ ಆಗಿ ಅವರು ಇಷ್ಟ ಆಗುತ್ತಾರೆ. ಅವರಿಗಿರೋ ಅಪರೂಪದ ಕಾಯಿಲೆ ವಿಚಾರ ಸಿನಿಮಾದಲ್ಲಿ ಹೆಚ್ಚು ಹೈಲೈಟ್ ಆಗಿದೆ. ಅದೇನು ಎಂಬುದನ್ನು ಸಿನಿಮಾದಲ್ಲೇ ನೋಡಬೇಕು.
ರಮೇಶ್ ಇಂದಿರಾ ಅವರು ಅವರು ದೀನೂ ಸಾವ್ಕಾರ್ ಹೆಸರಿನ ಖಳನ ಪಾತ್ರ ಮಾಡಿದ್ದಾರೆ. ಹಣಕ್ಕಾಗಿ ಬಾಯಿ ಬಿಡೋ ದೀನು ಸಾವ್ಕಾರ್ ಇಡೀ ಚಿತ್ರವನ್ನು ಅವರು ಆವರಿಸಿಕೊಂಡಿದ್ದಾರೆ. ಇನ್ಯಾರೇ ಈ ಪಾತ್ರ ನಿರ್ವಹಿಸಿದ್ದರೂ ಈ ಪಾತ್ರ ಇಷ್ಟು ಉತ್ತಮವಾಗಿ ಮೂಡಿಬರುತ್ತಿರಲಿಲ್ಲವೇನೋ ಎಂಬ ರೀತಿಯಲ್ಲಿ ಅವರು ನಟಿಸಿದ್ದಾರೆ. ಕೋಟಿಯ ಅಮ್ಮನಾಗಿ ತಾರಾ ಭಾವನಾತ್ಮಕವಾಗಿ ಸೆಳೆದುಕೊಳ್ಳುತ್ತಾರೆ. ಪೃಥ್ವಿ, ತನುಜಾ ನಟನೆಯಲ್ಲಿ ಮೆಚ್ಚುಗೆ ಪಡೆಯುತ್ತಾರೆ. ರಂಗಾಯಣ ರಘು ಪಾತ್ರಕ್ಕೆ ಇಲ್ಲಿ ಹೆಚ್ಚಿನ ತೂಕ ಬೇಕಿತ್ತು. ದುನಿಯಾ ವಿಜಯ್ ಮಾಡಿರೋ ಅತಿಥಿ ಪಾತ್ರ ಕೋಟಿಯ ಬಾಳಲ್ಲಿ ಪ್ರಾಮುಖ್ಯತೆ ಪಡೆಯುತ್ತದೆ.
ಪರಮ್ ಅವರಿಗೆ ಸಿನಿಮಾ ನಿರ್ದೇಶಕನಾಗಿ ಇದು ಮೊದಲ ಅನುಭವ. ಮೊದಲ ಚಿತ್ರದಲ್ಲೇ ಅವರು ಭರವಸೆ ಮೂಡಿಸಿದ್ದಾರೆ. ಸೆಂಟಿಮೆಂಟ್ ಜೊತೆ ಹಲವು ಭಾವನೆಗಳನ್ನು ಅವರು ಕಟ್ಟಿಕೊಡೋ ಪ್ರಯತ್ನ ಮಾಡಿದ್ದಾರೆ. ಅವರು ಕೆಲವು ವಿಚಾರಗಳನ್ನು ಹೆಚ್ಚು ವಿವರಿಸಿ, ನಿಧಾನವಾಗಿ ಹೇಳುವ ಪ್ರಯತ್ನ ಮಾಡಿದ್ದಾರೆ. ಕೆಲವೊಮ್ಮೆ ಇದು ಪ್ರೇಕ್ಷಕರ ತಾಳ್ಮೆ ಪರೀಕ್ಷಿಸುತ್ತದೆ. ವಾಸುಕಿ ವೈಭವ್ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದ ಹಾಡುಗಳು ಕಿವಿಯಲ್ಲಿ ಗುನುಗುತ್ತವೆ. ನೋಬಿನ್ ಪೌಲ್ ಅವರ ಹಿನ್ನೆಲೆ ಸಂಗೀತ ಸಿನಿಮಾದ ತೂಕ ಹೆಚ್ಚಿಸಿದೆ.