ಮನೆ ಕಾನೂನು ಆಕ್ರಮಣಕಾರಿ ವಿದೇಶಿ ನಾಯಿಗಳ ನಿಷೇಧ ಪ್ರಕರಣ: ಶ್ವಾನಗಳ ಸೈಕಾಲಜಿ ಅಧ್ಯಯನ ನಡೆಸಿ ನಿರ್ಧಾರ ಕೈಗೊಳ್ಳಲು ಮದ್ರಾಸ್...

ಆಕ್ರಮಣಕಾರಿ ವಿದೇಶಿ ನಾಯಿಗಳ ನಿಷೇಧ ಪ್ರಕರಣ: ಶ್ವಾನಗಳ ಸೈಕಾಲಜಿ ಅಧ್ಯಯನ ನಡೆಸಿ ನಿರ್ಧಾರ ಕೈಗೊಳ್ಳಲು ಮದ್ರಾಸ್ ಹೈಕೋರ್ಟ್ ಆದೇಶ

0

ಚೆನ್ನೈ (ತಮಿಳುನಾಡು): ಆಕ್ರಮಣಕಾರಿ ವಿದೇಶಿ ನಾಯಿಗಳಾದ ಪಿಟ್‌ಬುಲ್, ಟೋಸಾ ಇನು, ಅಮೇರಿಕನ್ ಸ್ಟಾಫರ್ಡ್ ಟೆರಿಯರ್, ರೊಟ್‌ವೀಲರ್, ಫಿಲಾ ಬ್ರೆಸಿಲಿರೊ, ಡೊಕೊ ಅರ್ಜೆಂಟಿನೋ, ಅಮೇರಿಕನ್ ಬುಲ್‌ಡಾಗ್, ಪೋರ್ಬೋಲ್, ಕಂಗಲ್ ಶೆಫರ್ಡ್ ಡಾಗ್, ಮಧ್ಯ ಏಷ್ಯಾದ ಶೆಫರ್ಡ್, ಕಕೇಶಿಯನ್ ಶೆಫರ್ಡ್, ಸೌತ್ ಏಷ್ಯನ್ ಶೆಫರ್ಡ್ ಸೇರಿದಂತೆ ಇತರ ನಾಯಿಗಳ ಆಮದನ್ನು ಭಾರತ ಕೇಂದ್ರ ಸರ್ಕಾರವು ನಿಷೇಧ ಮಾಡಿತ್ತು.

Join Our Whatsapp Group

ವಿವಿಧ ರಾಜ್ಯ ಹೈಕೋರ್ಟ್‌ಗಳು ಆದೇಶಕ್ಕೆ ತಡೆ ನೀಡಿದ್ದರೂ, ಕೇಂದ್ರ ಪಶುವೈದ್ಯಕೀಯ ಇಲಾಖೆ ನಾಯಿಗಳ ವರ್ಗೀಕರಣದ ಬಗ್ಗೆ ಸಾರ್ವಜನಿಕ ಅಭಿಪ್ರಾಯವನ್ನು ಕೇಳಿದೆ. ಇದರ ವಿರುದ್ಧ ದಿ ಕೆನಲ್ ಕ್ಲಬ್ ಆಫ್ ಇಂಡಿಯಾ ಪರವಾಗಿ ಮದ್ರಾಸ್ ಹೈಕೋರ್ಟ್​ನಲ್ಲಿ ಮೊಕದ್ದಮೆ ಹೂಡಲಾಗಿತ್ತು. ಈ ಪ್ರಕರಣವನ್ನು ನ್ಯಾಯಮೂರ್ತಿ ಅನಿತಾ ಸುಮಂತ್ ಅವರು ವಿಚಾರಣೆ ನಡೆಸಿದರು. ಅರ್ಜಿದಾರರ ಪರ ವಕೀಲರು, ಇತ್ತೀಚೆಗೆ ಬಾಲಕಿಯನ್ನು ಕಚ್ಚಿದ್ದಕ್ಕಾಗಿ ರೊಟ್ವೀಲರ್ ಮತ್ತು ಬಾಕ್ಸರ್ ನಾಯಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಮತ್ತು ಬಾಕ್ಸರ್ ನಾಯಿಯು ತಮಾಷೆಯ ರೀತಿಯ ನಾಯಿ ಎಂದು ಹೇಳಿದರು.

ಆಗ ಮಧ್ಯ ಪ್ರವೇಶಿಸಿದ ನ್ಯಾಯಾಧೀಶರು, ”ಮಗುವಿಗೆ ಲ್ಯಾಬ್ರಡಾರ್ ನಾಯಿ ಕಚ್ಚಿದೆ ಎಂಬ ವರದಿಗಳಿದ್ದು, ಆ ಕಾರಣಕ್ಕೆ ಲ್ಯಾಬ್ರಡಾರ್ ನಾಯಿಗಳ ಆಮದು ನಿಷೇಧಿಸಬೇಕು ಎಂದು ಹೇಳಲಾಗದು, ವೈಜ್ಞಾನಿಕವಾಗಿ ಅಧ್ಯಯನ ನಡೆಸಿ ನಿರ್ಧಾರ ಕೈಗೊಳ್ಳಬೇಕು” ಎಂದು ಸೂಚಿಸಿದರು.

ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅವರು, ”ನಾಯಿಗಳ ವರ್ಗೀಕರಣಕ್ಕೆ ನಿಷೇಧ ಹೇರುವ ಕುರಿತು ಸಮಿತಿ ರಚಿಸಲಾಗಿದ್ದು, ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸುವ ಅವಧಿಯನ್ನು ಜೂ.30ರವರೆಗೆ ವಿಸ್ತರಿಸಲಾಗಿದೆ” ಎಂದು ವಿವರಿಸಿದರು.

ಇದನ್ನು ದಾಖಲಿಸಿಕೊಂಡ ನ್ಯಾಯಾಧೀಶರು, ನಾಯಿಗಳ ಮನೋವಿಜ್ಞಾನ ಮತ್ತು ಅವುಗಳ ವರ್ತನೆಯ ಬಗ್ಗೆ ವಿವರವಾದ ಅಧ್ಯಯನ ನಡೆಸಿ, ಅವು ಆಕ್ರಮಣಕಾರಿಯೇ ಅಥವಾ ಇಲ್ಲವೇ? ತೀರ್ಮಾನ ಕೈಗೊಳ್ಳಬೇಕು ಎಂದು ಆದೇಶಿಸಿ ಪ್ರಕರಣವನ್ನು ಮುಕ್ತಾಯಗೊಳಿಸಿದರು.