ಶಿವಮೊಗ್ಗ: ಬಿಜೆಪಿ ಹಿರಿಯ ಮುಖಂಡ ಮತ್ತೂರಿನ ಎಂ.ಬಿ.ಭಾನುಪ್ರಕಾಶ್ ಅವರು ಹೃದಯಾಘಾತದಿಂದ ಸೋಮವಾರ ನಿಧನ ಹೊಂದಿದರು.
ಅವರಿಗೆ 69 ವರ್ಷ ವಯಸ್ಸಾಗಿತ್ತು.
ತೈಲ ಬೆಲೆ ಏರಿಕೆ ಖಂಡಿಸಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದದ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡು ತೆರಳುತ್ತಿದ್ದ ವೇಳೆ ಭಾನುಪ್ರಕಾಶ್ ಅವರಿಗೆ ಹೃದಯಾಘಾತವಾಗಿದೆ. ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
2009 ರಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಅವರು, 2013-19 ರವರೆಗೆ ಎಂಎಲ್ ಸಿಯಾಗಿದ್ದರು. ಪಕ್ಷ ಸಂಘಟನೆಯಲ್ಲಿ ಅವರ ಕೊಡುಗೆ ಅಪಾರವಿದ್ದು, ಪಕ್ಷದ ವಿವಿಧ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು.
ಗಾಜನೂರು ಜಿ.ಪಂ. ಕ್ಷೇತ್ರದಿಂದ ಆಯ್ಕೆಯಾಗಿದ್ದ ಭಾನುಪ್ರಕಾಶ್ 2001ರಿಂದ 2005ರ ಅವಧಿಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದರು. ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಬಿಜೆಪಿ ತೊರೆದು ಸಮಾಜವಾದಿ ಪಕ್ಷದಿಂದ ಶಿವಮೊಗ್ಗ ಲೋಕಸಭೆ ಕ್ಷೇತ್ರಕ್ಕೆ ಸ್ಪರ್ಧಿಸಿದ್ದಾಗ ಬಿಜೆಪಿಯಿಂದ ಅವರಿಗೆ ಎದುರಾಳಿಯಾಗಿ ಸ್ಪರ್ಧೆ ಮಾಡಿದ್ದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಟ್ಟಾ ಅನುಯಾಯಿಯಾಗಿದ್ದ ಭಾನುಪ್ರಕಾಶ್, ತಮ್ಮ ಮಾತುಗಾರಿಕೆ, ಸರಳತೆಯಿಂದಲೇ ಗುರುತಿಸಿಕೊಂಡವರು.