ಜೆರುಸಲೇಂ: ವಿಪರೀತ ತಾಪಮಾನದ ಪರಿಣಾಮ ಸುಮಾರು 550ಕ್ಕೂ ಅಧಿಕ ಮಂದಿ ಹಜ್ ಯಾತ್ರಾರ್ಥಿಗಳು ಮೆಕ್ಕಾದಲ್ಲಿ ಸಾವನ್ನಪ್ಪಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಪ್ರತಿ ವರ್ಷ ಮೆಕ್ಕಾದಲ್ಲಿ ನಡೆಯುವ ಹಜ್ ಯಾತ್ರೆಗೆ ಜಾಗತಿಕವಾಗಿ ಎಲ್ಲೆಡೆಯಿಂದ ಯಾತ್ರಾರ್ಥಿಗಳು ಆಗಮಿಸುತ್ತಿದ್ದು, ಈ ಬಾರಿಯೂ ಲಕ್ಷಾಂತರ ಸಂಖ್ಯೆಯಲ್ಲಿ ಹಜ್ ಯಾತ್ರಾರ್ಥಿಗಳು ಭಾಗವಹಿಸಿದ್ದರು.
ಅತಿಯಾದ ತಾಪಮಾನದ ಪರಿಣಾಮ 550ಕ್ಕೂ ಅಧಿಕ ಮಂದಿ ಹಜ್ ಯಾತ್ರಾರ್ಥಿಗಳು ಕೊನೆಯುಸಿರೆಳೆದಿದ್ದು, ಇದರಲ್ಲಿ ಕನಿಷ್ಠ 323 ಮಂದಿ ಈಜಿಪ್ಟ್ ದೇಶಕ್ಕೆ ಸೇರಿದವರು ಎಂದು ಅರಬ್ ರಾಜತಾಂತ್ರಿಕ ಅಧಿಕಾರಿಗಳು ಎಎಫ್ ಪಿಗೆ ತಿಳಿಸಿದ್ದಾರೆ.
ವಿಪರೀತ ಬಿಸಿಲ ಝಳದಿಂದ ಹಜ್ ಯಾತ್ರಾರ್ಥಿಗಳು ಸಾವನ್ನಪ್ಪಿದ್ದು, ಇವರಲ್ಲಿ ಬಹುತೇಕ ಮಂದಿ ಈಜಿಪ್ಟ್ ನವರು, ಇದರಲ್ಲಿ ಓರ್ವ ಯಾತ್ರಿ ನೂಕುನುಗ್ಗಲಿನಿಂದ ಗಾಯಗೊಂಡು ಸಾವನ್ನಪ್ಪಿರುವುದಾಗಿ ರಾಜತಾಂತ್ರಿಕ ಅಧಿಕಾರಿಗಳು ಮಾಹಿತಿ ನೀಡಿರುವುದಾಗಿ ವರದಿ ಹೇಳಿದೆ.
ಜೋರ್ಡಾನ್ ದೇಶದ ಸುಮಾರು 60 ಮಂದಿ ಸೇರಿದಂತೆ ಪ್ರಪಂಚದ ವಿವಿಧ ದೇಶಗಳ ಒಟ್ಟು 577 ಮಂದಿ ಹಜ್ ಯಾತ್ರಿಗಳು ಕೊನೆಯುಸಿರೆಳೆದಿದ್ದಾರೆ ಎಂದು ಎಎಫ್ ಪಿ ವರದಿ ಮಾಡಿದೆ. ಪವಿತ್ರ ಮಸೀದಿ ಹೊಂದಿರುವ ಮೆಕ್ಕಾದಲ್ಲಿ 52 ಡಿಗ್ರಿ ಸೆಲ್ಸಿಯಸ್ ತಾಪಮಾನ ಇದ್ದಿರುವುದಾಗಿ ವರದಿ ತಿಳಿಸಿದೆ.