ಮನೆ ಕಾನೂನು ರೇಣುಕಾಸ್ವಾಮಿ ಕೊಲೆ ಪ್ರಕರಣ: ದರ್ಶನ್‌ ಮತ್ತೆ ಕಸ್ಟಡಿಗೆ, ಪವಿತ್ರಾ ಸೇರಿ 10 ಮಂದಿ ನ್ಯಾಯಾಂಗ ಬಂಧನ

ರೇಣುಕಾಸ್ವಾಮಿ ಕೊಲೆ ಪ್ರಕರಣ: ದರ್ಶನ್‌ ಮತ್ತೆ ಕಸ್ಟಡಿಗೆ, ಪವಿತ್ರಾ ಸೇರಿ 10 ಮಂದಿ ನ್ಯಾಯಾಂಗ ಬಂಧನ

0

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನವಾಗಿರುವ ನಟ ದರ್ಶನ್‌ ಸೇರಿದಂತೆ ಇತರೆ ಆರೋಪಿಗಳ ಪೊಲೀಸ್‌ ಕಸ್ಟಡಿ ಅಂತ್ಯವಾದ ಹಿನ್ನೆಲೆ ಗುರುವಾರ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ವಿಚಾರಣೆ ನಡೆಸಿದ ನ್ಯಾಯಾಧೀಶರು ಪವಿತ್ರಾ ಗೌಡ ಸೇರಿ 10 ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ದರ್ಶನ್‌ ಹಾಗೂ ಉಳಿದ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ಕೋರಿದ ಹಿನ್ನೆಲೆಯಲ್ಲಿ ಪೊಲೀಸ್‌ ಕಸ್ಟಡಿಗೆ ನೀಡಲಾಗಿದೆ.

Join Our Whatsapp Group

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪವಿತ್ರಾ ಗೌಡ ಎ1, ದರ್ಶನ್‌ ಎ2 ಆಗಿದ್ದಾರೆ. ಈಗಾಗಲೇ ಪ್ರಕರಣ ಸಂಬಂಧ ಆರೋಪಿಗಳನ್ನು ಎರಡು ಬಾರಿ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದಾರೆ. ಕಳೆದ 10 ದಿನಗಳಿಂದ ಆರೋಪಿಗಳ ಸ್ವ-ಇಚ್ಚಾ ಹೇಳಿಕೆ, ಸ್ಥಳ ಮಹಜರು ಸೇರಿದಂತೆ ಪ್ರಕರಣದಲ್ಲಿ ಕೆಲ ಮಹತ್ವದ ಸಾಕ್ಷ್ಯಗಳನ್ನು ಕಲೆಹಾಕಿದ್ದಾರೆ.

ಎ1 ಪವಿತ್ರಾ, ಎ2 ದರ್ಶನ್‌, ಎ3 ಪವನ್‌, ಎ4 ರಾಘವೇಂದ್ರ, ಎ5 ನಂದೀಶ, ಎ6 ಜಗದೀಶ್‌(ಜಗ್ಗ), ಎ7 ಅನುಕುಮಾರ್‌,ಎ8 ರವಿಶಂಕರ್‌,‌ ಎ9 ಧನರಾಜ್‌, ಎ10 ವಿನಯ್‌, ಎ11 ನಾಗರಾಜ್ ಎ12 ಲಕ್ಷ್ಮಣ, ಎ13 ದೀಪಕ್‌, ಎ14 ಪ್ರದೋಶ್‌, ಎ16 ಕೇಶವಮೂರ್ತಿ ಅವರನ್ನು ಕಸ್ಟಡಿಗೆ ನೀಡಲಾಗಿತ್ತು.

ದರ್ಶನ್‌ ಸೇರಿ 6 ಜನ ಆರೋಪಿಗಳನ್ನು ಕಸ್ಟಡಿಗೆ ನೀಡುವಂತೆ ರಿಮ್ಯಾಂಡ್‌ ಅರ್ಜಿಯನ್ನು ಪೊಲೀಸರು ಕೋರ್ಟಿಗೆ ಸಲ್ಲಿಸಿದ್ದಾರೆ. ಆದರೆ ತಮಗೆ ರಿಮ್ಯಾಂಡ್‌ ಅರ್ಜಿಯ ಪ್ರತಿ ತಲುಪಿಲ್ಲ ಎಂದು ದರ್ಶನ್‌ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೋರ್ಟಿಗೆ ಸಲ್ಲಿಸಿರುವ ರಿಮ್ಯಾಂಡ್‌ ಅರ್ಜಿಗೆ ತಮಗೂ ಬೇಕೆಂದು ವಕೀಲರು ಕೇಳಿದ್ದರು.

ಪ್ರಕರಣ ಸಂಬಂಧ ಎ9, ಎ10, ಎ14, ತನಿಖೆಗೆ ಸಹಕಾರ ನೀಡುತ್ತಿಲ್ಲ. ಕಳೆದುಹೋದ ರೇಣುಕಾಸ್ವಾಮಿ ಮೊಬೈಲ್‌ ಇನ್ನೂ ಸಿಕ್ಕಿಲ್ಲ.  ಎ10 ಧನರಾಜ್‌ ಮೊಬೈಲ್‌ ಎಸೆದ ಬಗ್ಗೆ ಬಾಯಿಬಿಡುತ್ತಿಲ್ಲ ಎಂದು ಎಸ್‌ ಪಿಪಿ ನ್ಯಾಯಾಧೀಶರ ಮುಂದೆ ವಾದಿಸಿದ್ದಾರೆ.

ಆರ್ಥಿಕ ಅಪರಾಧಗಳ ವಿಶೇಷ ಕೋರ್ಟಿನಲ್ಲಿ ವಿಚಾರಣೆ ನಡೆಸಲಾಗಿದ್ದು,ವಾದ ಪ್ರತಿವಾದಗಳನ್ನು ಆಲಿಸಿದ ಬಳಿಕ ಪವಿತ್ರಾ ಗೌಡ ಸೇರಿ ಇತರೆ 10 ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ನೀಡಿದ್ದಾರೆ.

ಇತ್ತ ನಟ ದರ್ಶನ್‌ ಅವರನ್ನು ಮತ್ತೆ 2 ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ನೀಡಿ ಆದೇಶ ನೀಡಲಾಗಿದೆ. ಎ2 ದರ್ಶನ್‌ ಸೇರಿ 4 ಆರೋಪಿಗಳನ್ನು ಪೊಲೀಸ್‌ ಕಸ್ಟಡಿಗೆ ನೀಡಲಾಗಿದೆ. ದರ್ಶನ್‌ ಸೇರಿ ಎ9 ಧನರಾಜ್, ಎ10 ವಿನಯ್, ಎ14 ಪ್ರದೋಶ್‌ ಅವರನ್ನು ಪೊಲೀಸ್‌ ಕಸ್ಟಡಿಗೆ ಒಪ್ಪಿಸಲಾಗಿದೆ.

ಗೆಳತಿ ಪವಿತ್ರಾ ಗೌಡ ಅವರಿಗೆ ಆಶ್ಲೀಲ ಮೆಸೇಜ್‌ ಹಾಗೂ ಕಾಮೆಂಟ್‌ ಮಾಡುತ್ತಿದ್ದ ಕಾರಣ ರೇಣುಕಾಸ್ವಾಮಿ ಅವರನ್ನು ಅಪಹರಿಸಿ, ಬೆಂಗಳೂರಿನ ಶೆಡ್‌ ವೊಂದರಲ್ಲಿ ಇರಿಸಿ ಹಲ್ಲೆ ಮಾಡಿ, ಹತ್ಯೆಗೈದು ಮೃತದೇಹವನ್ನು ಮೋರಿಗೆ ಎಸೆಯಲಾಗಿತ್ತು. ಇದಾದ ಬಳಿಕ ಇಬ್ಬರು ಠಾಣೆಗೆ ಬಂದು ಈ ಕೊಲೆಯನ್ನು ತಾವು ಹಣಕಾಸಿನ ವಿಚಾರಕ್ಕೆ ಮಾಡಿದ್ದೇವೆ ಎನ್ನುವ ಮಾತುಗಳನ್ನು ಪೊಲೀಸರು ಮುಂದೆ ಹೇಳಿದ್ದರು. ಆದರೆ ಪೊಲೀಸರು ಮತ್ತಷ್ಟು ವಿಚಾರಣೆಯನ್ನು ನಡೆಸಿದಾಗ, ದರ್ಶನ್‌ ಸೂಚನೆಯ ಮೇರೆಗೆ ಕೊಲೆ ಮಾಡಿದ್ದೇವೆ ಎನ್ನುವ ಸತ್ಯಾಂಶವನ್ನು ಬಾಯಿಬಿಟ್ಟಿದ್ದರು.