ಮನೆ ಸ್ಥಳೀಯ ಹುಣಸೂರು ತಾಲೂಕಿನ ಸಮಗ್ರ ಅಭಿವೃದ್ದಿಗೆ ಬದ್ದ: ಸಂಸದ ಯದುವೀರ್‌ ಒಡೆಯರ್

ಹುಣಸೂರು ತಾಲೂಕಿನ ಸಮಗ್ರ ಅಭಿವೃದ್ದಿಗೆ ಬದ್ದ: ಸಂಸದ ಯದುವೀರ್‌ ಒಡೆಯರ್

0

ಹುಣಸೂರು: ಹುಣಸೂರು ತಾಲೂಕಿನ ಸಮಗ್ರ ಅಭಿವೃದ್ದಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಸಂಸದ ಯದುವೀರ್ ಒಡೆಯರ್ ತಿಳಿಸಿದರು.

Join Our Whatsapp Group

ನಗರದ ಕನಕ ಭವನದಲ್ಲಿ ಬಿಜೆಪಿ-ಜೆಡಿಎಸ್ ಪಕ್ಷದವತಿಯಿಂದ ಜಂಟಿಯಾಗಿ ಆಯೋಜಿಸಿದ್ದ ಕೃತಜ್ಞತೆ ಹಾಗೂ ಅಭಿನಂದನಾ ಸಭೆಯಲ್ಲಿ ಮುಖಂಡರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ಚುನಾವಣೆಯಲ್ಲಿ ಅಪಾರ ಬೆಂಬಲ ನೀಡಿರುವ ತಾಲೂಕಿನ ಮತದಾರರು ಹಾಗೂ ಎನ್‌ಡಿಎ ಪಕ್ಷಗಳ ಕಾರ್ಯಕರ್ತರು, ಮುಖಂಡರು ಶ್ರಮಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು.

ಮೂರನೇ ಬಾರಿಗೆ ಮೋದಿಯವರು ಪ್ರಧಾನಿಯಾಗಿದ್ದು, ಐದು ಮಂತ್ರಿಗಳನ್ನು ನೀಡಿರುವುದು ರಾಜ್ಯದ ಹೆಮ್ಮೆ, ಇವರೆಲ್ಲರ ಸಹಕಾರದೊಂದಿಗೆ ಶಾಸಕ ಹರೀಶ್‌ಗೌಡರು ಪ್ರಸ್ತಾಪಿಸಿರುವ ಅಭಿವೃದ್ಧಿಗೆ ಸಹಕರಿಸುವೆ. ಕ್ಷೇತ್ರದ ತಂಬಾಕು, ಹೆದ್ದಾರಿ, ರೈಲ್ವೆ ಸೇರಿದಂತೆ ಎಲ್ಲರೀತಿಯ ಸಮಸ್ಯೆಗಳಿಗೆ ಸ್ಪಂದಿಸುವೆ, ಅಲ್ಲದೆ ಪ್ರಕೃತಿ,ಪರಿಸರ ಉಳಿಸುವ, ನಿರುದ್ಯೋಗ ಸಮಸ್ಯೆ ನಿವಾರಿಸುವ ಹಾಗೂ ಕಲುಷಿತ ಲಕ್ಷ್ಮಣತೀರ್ಥ ನದಿ ಸ್ವಚ್ಛತೆಯೊಂದಿಗೆ ಸ್ವಚ್ಛ ಭಾರತ್ ಪರಿಕಲ್ಪನೆ ಸಾಕಾರಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖನಾಗುವೆ. ಐದು ವರ್ಷದ ದೂರ ದೃಷ್ಟಿಯನ್ನಿಟ್ಟುಕೊಂಡು ಕಾರ್ಯನಿರ್ವಹಿಸುವೆ ಎಂದರು.

ಶಾಸಕ ಜಿ.ಡಿ.ಹರೀಶ್‌ಗೌಡ ಮಾತನಾಡಿ ‘ಲೋಕಸಭಾ ಚುನಾವಣೆಯಲ್ಲಿ ಹಿಂದೆಲ್ಲಾ ಕಾಂಗ್ರೆಸ್‌ಗೆ ಲೀಡ್ ಬರುತ್ತಿದ್ದ ತಾಲೂಕಿನಲ್ಲಿ ಪ್ರಥಮ ಬಾರಿಗೆ3 ಸಾವಿರಕ್ಕೂ ಹೆಚ್ಚು ಮತಗಳ ಮುನ್ನಡೆ ಸಿಕ್ಕಿದೆ. ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಬೇಕೆಂಬ ಮಹದಾಸೆಯಿಂದ ಜನರು ಮತಹಾಕಿದ್ದಾರೆ. ಕಾಂಗ್ರೆಸ್ಸಿಗರು 20 ಸಾವಿರ ಲೀಡ್‌ಗಳಿಸುತ್ತೇವೆಂದು ಹೇಳಿಕೊಂಡಿದ್ದರು, ಮೈತ್ರಿ ಪಕ್ಷಗಳ ಕಾರ್ಯಕರ್ತರ ಒಗ್ಗಟ್ಟಿನ ಫಲವಾಗಿ ಮೈತ್ರಿಯ ಶಕ್ತಿಯನ್ನು ತೋರಿಸಿಕೊಟ್ಟಿದ್ದು, ಅಭಿವೃದ್ದಿ ಮಾಡಬೇಕಾದ ಸ್ಪಷ್ಟ ಸಂದೇಶವನ್ನು ಮತದಾರರು ನೀಡಿದ್ದಾರೆ. ರಾಜ್ಯದ 143 ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷಗಳು ಮುನ್ನಡೆ ಸಾಧಿಸಿದ್ದು, ಯಾವುದೇ ಅಭಿವೃದ್ಧಿ ಮಾಡದ ಕಾಂಗ್ರೆಸ್ ಸರಕಾರದ ವಿರುದ್ದ ನೀಡಿರುವ ತೀರ್ಪೆಂದು ಬಣ್ಣಿಸಿ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಸಂಸದ ಯದುವೀರ್ ಒಡೆಯರ್‌ರವರ ಸಹಕಾರದೊಂದಿಗೆ ಕ್ಷೇತ್ರದ ಅಭಿವೃದ್ದಿಗೆ ಶ್ರಮಹಾಕುವೆ, ಸಂಸದರು ಕ್ಷೇತ್ರದ ಅಭಿವೃದ್ಧಿಗೆ ನೆರವಾಗುವಂತೆ ಮನವಿ ಮಾಡಿದರು.

 ‘ಗ್ಯಾರಂಟಿ ಹೆಸರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ವರ್ಷವಾದರೂ ಅಭಿವೃದ್ಧಿ ಎಂಬುದು ಮರಿಚಿಕೆಯಾಗಿದೆ. ಆದರೆ ಯಾವುದೇ ಅಭಿವೃದ್ದಿಗೆ ಹಣಕಾಸಿನ ತೊಂದರೆ ಇಲ್ಲವೆಂದು ಸಿಎಂ, ಡಿಸಿಎಂ ಹೇಳುತ್ತಿರುವುದು ನಾಚಿಕೆಗೇಡು. ರಾಜ್ಯದಲ್ಲಿ ಅಭಿವೃದ್ಧಿ ಎಂಬುದು ಮರಿಚಿಕೆಯಾಗಿದೆ. ಮಂತ್ರಿಗಳನ್ನು ಭೇಟಿ ಮಾಡಿ ಅಭಿವೃದ್ಧಿ ಬಗ್ಗೆ ಚರ್ಚಿಸಿದರೆ ಅನುದಾನವಿಲ್ಲವೆನ್ನುತ್ತಾರೆ, ಕಾಂಗ್ರೆಸ್ ಶಾಸಕರು ತಮ್ಮ ಎದುರಿನಲ್ಲೇ ಮಂತ್ರಿಗಳಿಗೆ ಅನುದಾನ ನೀಡದಿದ್ದಲ್ಲಿ ನಾವು ತೀರ್ಮಾನ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದನ್ನು ಕಂಡೆನೆಂದು ಬೇಸರ ವ್ಯಕ್ತಪಡಿಸಿದರು.

ತಾವು ಯಾವುದೇ ಮಂತ್ರಿಯನ್ನು ಭೇಟಿ ಮಾಡಿದಾಗ ಹುಣಸೂರು ಕ್ಷೇತ್ರಕ್ಕೆ ಅನುದಾನ ನೀಡಬೇಡಿ ಎಂಬ ಒತ್ತಾಯವಿದೆ. ಹಿಂದೆಯೇ ಕ್ಷೇತ್ರಕ್ಕೆ ಸರಕಾರದಿಂದ ಅನುದಾನ ತನ್ನಿ, ನೀವೇ ಕ್ರೆಡಿಟ್ ತಗೆದುಕೊಳ್ಳಿ ಅಭಿನಂದಿಸುತ್ತೇನೆಂದು ಹೇಳಿದ್ದೆ. ಈಗಲೂ ಬದ್ದನಾಗಿದ್ದೇನೆಂದು ಮಾಜಿ ಶಾಸಕ ಮಂಜುನಾಥರ ಹೆಸರು ಹೇಳದೆ ಟೀಕಿಸಿ, ಇನ್ನು ಕಂದಾಯಮಂತ್ರಿ ಕೃಷ್ಣಬೈರೇಗೌಡ ನಿಮ್ಮ ತಾಲೂಕಿನಿಂದ ಅಕ್ರಮ-ಸಕ್ರಮ ಸಮಿತಿ ರಚನೆಗೆ ಯಾವುದೇ ಹೆಸರು ಶಿಫಾರಸ್ಸಾಗಿಲ್ಲವೆನ್ನುತ್ತಾರೆ. ಇನ್ನು ಕಾಲೇಜುಗಳ ಸಿಡಿಸಿ ಸಮಿತಿಗೆ ವರ್ಷದಿಂದ ಜಿಲ್ಲಾ ಉಸ್ತುವಾರಿ ಸಚಿವರು ಸಹಿ ಹಾಕುತ್ತಿಲ್ಲ. ಇನ್ನಾದರೂ ಅಭಿವೃದ್ಧಿಗೆ ಅಡ್ಡಿ ಮಾಡುವ ಬುದ್ದಿ ಬಿಡಿ ಎಂದು ಛೇಡಿಸಿ, ಅಭಿವೃದ್ಧಿ ವಿಚಾರದಲ್ಲಿ ಯಾರೂ ರಾಜಕಾರಣ ಬೆರೆಸಬಾರದು ಇದೇ ರೀತಿ ಮುಂದುವರೆದರೆ ಜನರೊಂದಿಗೆ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸಬೇಕಾದೀತೆಂದು ಎಚ್ಚರಿಸಿದರು.