ಭ್ರಷ್ಟಾಚಾರ ಕುರಿತಂತೆ ನಡೆಯುವ ಅನಗತ್ಯ ವಿಚಾರಣೆಗಳು ಸಾರ್ವಜನಿಕ ಸೇವಕರ ವೃತ್ತಿಜೀವನಕ್ಕೆ ಧಕ್ಕೆ ತರಬಹುದು ಎಂದು ಕೇರಳ ಹೈಕೋರ್ಟ್ ಇತ್ತೀಚೆಗೆ ಹೇಳಿದೆ.
ಆದ್ದರಿಂದ ಭ್ರಷ್ಟಾಚಾರ ನಿಗ್ರಹ ಕಾಯಿದೆ ಅಡಿಯಲ್ಲಿ ಕಾರ್ಯನಿರ್ವಹಿಸುವ ವಿಶೇಷ ನ್ಯಾಯಾಧೀಶರು ಸಾರ್ವಜನಿಕ ಸೇವಕರ ವಿರುದ್ಧ ತನಿಖೆಗೆ ಆದೇಶಿಸುವಾಗ ವಿವೇಚನೆ ಬಳಸಬೇಕು ಎಂದು ನ್ಯಾಯಮೂರ್ತಿ ಕೆ ಬಾಬು ಕಿವಿಮಾತು ಹೇಳಿದರು.
” ಭ್ರಷ್ಟಾಚಾರ ನಿಗ್ರಹ ಕಾಯಿದೆ ಅಡಿಯಲ್ಲಿ ಕಾರ್ಯನಿರ್ವಹಿಸುವ ವಿಶೇಷ ನ್ಯಾಯಾಧೀಶರು ತಮ್ಮ ಕರ್ತವ್ಯ ಮತ್ತು ಹೊಣೆಗಾರಿಕೆ ಬಗ್ಗೆ ಜಾಗೃತರಾಗಿರಬೇಕು. ಅನಗತ್ಯ ಪ್ರಾಥಮಿಕ ವಿಚಾರಣೆ ಕೂಡ ಸಾರ್ವಜನಿಕ ಸೇವಕರ ವೃತ್ತಿಜೀವನಕ್ಕೆ ಕಳಂಕ ಉಂಟುಮಾಡಬಹುದು ” ಎಂದು ನ್ಯಾಯಾಲಯ ಹೇಳಿದೆ.
ಆ ಮೂಲಕ ಐಎಎಸ್ ಅಧಿಕಾರಿಯೊಬ್ಬರ ವಿರುದ್ಧ ಪ್ರಾಸಂಗಿಕವಾಗಿ ಪ್ರತಿಕೂಲ ಅವಲೋಕನ ಮಾಡಿದ್ದ ಭ್ರಷ್ಟಾಚಾರ ನಿಗ್ರಹ ಕಾಯಿದೆ ಅಡಿಯಲ್ಲಿ ರೂಪುಗೊಂಡ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ಕ್ರಮಗಳಿಗೆ ನ್ಯಾಯಾಲಯ ಅಸಮ್ಮತಿ ಸೂಚಿಸಿತು.
” ದುರದೃಷ್ಟವಶಾತ್, ಪ್ರಸ್ತುತ ಪ್ರಕರಣದಲ್ಲಿ, ವಿಶೇಷ ನ್ಯಾಯಾಧೀಶರು ತಮ್ಮ ಕರ್ತವ್ಯ ಮತ್ತು ಹೊಣೆಗಾರಿಕೆ ಬಗ್ಗೆ ಅರಿವು ಹೊಂದಿಲ್ಲ. ದೂರನ್ನು ವ್ಯವಹರಿಸುವಾಗ ವಿಶೇಷ ನ್ಯಾಯಾಧೀಶರ ಪ್ರಾಸಂಗಿಕವಿಧಾನ ಐಎಎಸ್ ಅಧಿಕಾರಿ ಎ. ಜಯತಿಲಕ್ ಅವರಿಗೆ ಮುಜುಗರವನ್ನುಂಟುಮಾಡಿದೆ ಎಂದು ಹೇಳಲೇಬೇಕು. ವಿಶೇಷ ನ್ಯಾಯಾಧೀಶರ ತಪ್ಪಾದ ಆದೇಶ/ಪರಿಶೀಲನೆಯು ಅತ್ಯಂತ ಪ್ರಾಮಾಣಿಕ ನಾಗರಿಕ ಸೇವಕನ ವೃತ್ತಿಜೀವನದಲ್ಲಿ ಯಾವುದೇ ಕಳಂಕ ಉಂಟುಮಾಡಬಾರದು.. ಆಕ್ಷೇಪಾರ್ಹ ಆದೇಶದಲ್ಲಿನ ಅವಲೋಕನಗಳನ್ನು ಸಂಪೂರ್ಣವಾಗಿ ತೆಗೆದುಹಾಕಬೇಕುಎಂದು ನ್ಯಾಯಾಲಯ ಹೇಳಿತು.
ವಿಶೇಷ ನ್ಯಾಯಾಧೀಶರ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಮೇಲೆ ಈ ತೀರ್ಪು ನೀಡಲಾಗಿದೆ.
ಈಗ ನಿವೃತ್ತರಾಗಿರುವ ಜಿಲ್ಲಾಧಿಕಾರಿ ಮುರಳೀಧರನ್ ಸೇವೆ ಸಲ್ಲಿಸುತ್ತಿದ್ದ ವೇಳೆ ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗಿತ್ತು. ಆದರೆ 2022 ರಲ್ಲಿ ರಾಜ್ಯ ಸರ್ಕಾರ ಅದಕ್ಕೆ ಇತಿಶ್ರೀ ಹಾಡಿದ ಬಳಿಕ ಮುರಳೀಧರನ್ ಬಡ್ತಿ ಕೋರಿ ಮುಖ್ಯ ಕಾರ್ಯದರ್ಶಿ ಅವರಿಗೆ ಪತ್ರ ಬರೆದಿದ್ದರು. ಆದರೆ ಕೆಲ ಅಧಿಕಾರಿಗಳು ತಮ್ಮ ಮನವಿಯನ್ನು ತಡೆ ಹಿಡಿದಿದ್ದು ಇದರಿಂದ ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಮುಂದೆ ಪ್ರಸ್ತಾವನೆ ಸಲ್ಲಿಸಿಲ್ಲ ಎಂದು ತ್ರಿಶೂರ್‌ನ ತನಿಖಾ ಆಯುಕ್ತರು ಮತ್ತು ವಿಶೇಷ ನ್ಯಾಯಾಧೀಶರಿಗೆ ಅವರು ದೂರು ಸಲ್ಲಿಸಿದ್ದರು.
ಅಧಿಕಾರಿಗಳ ದುರ್ವರ್ತನೆ ಮೇಲ್ನೋಟಕ್ಕೆ ಕಂಡು ಬಂದಿದೆ ಎಂದಿದ್ದ ವಿಶೇಷ ನ್ಯಾಯಾಧೀಶರು ನಿರ್ದಿಷ್ಟವಾಗಿ ಐಎಎಸ್ ಅಧಿಕಾರಿ ಮುರಳೀಧರನ್ ಮತ್ತು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎ ಜಯತಿಲಕ್ ವಿರುದ್ಧ ಪ್ರತಿಕೂಲ ಅವಲೋಕನ ಮಾಡಿದ್ದರು.
ವಾದಗಳನ್ನು ಆಲಿಸಿದ ಹೈಕೋರ್ಟ್ ವಿಶೇಷ ನ್ಯಾಯಾಧೀಶರ ಆದೇಶ “ಅತಾರ್ಕಿಕವಾದುದಾಗಿದ್ದು, ಕಾನೂನಿನ ಪ್ರಕಾರ ಸಮರ್ಥನೀಯವಲ್ಲ. ಜೊತೆಗೆ ಅದು ತೀವ್ರ ಲೋಪಗಳಿಂದ ಕೂಡಿದ್ದು ಸ್ಪಷ್ಟವಾಗಿ ಅಸಮಂಜಸವಾಗಿದೆ ” ಎಂದಿತು. ಅಂತೆಯೆ ವಿಶೇಷ ನ್ಯಾಯಾಧೀಶರ ಎಲ್ಲಾ ಅವಲೋಕನಗಳನ್ನು ರದ್ದುಗೊಳಿಸಿತು.