ಬೆಂಗಳೂರು: ಪರವಾನಗಿ ನವೀಕರಿಸದ ಆರೋಪ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಕನ್ನಡ ಸುದ್ದಿ ವಾಹಿನಿ ಪವರ್ ಟಿವಿ ಕೇಬಲ್ ಟೆಲಿವಿಷನ್ ನೆಟ್ವರ್ಕ್ಗಳ (ನಿಯಂತ್ರಣ) ಕಾಯಿದೆ ೧೯೯೫ರ ಆದೇಶ ಉಲ್ಲಂಘಿಸಿರುವ ಕಾರಣ ಕೂಡಲೇ ತನ್ನೆಲ್ಲಾ ಕಾರ್ಯಕ್ರಮಗಳ ಪ್ರಸಾರ ಸ್ಥಗಿತಗೊಳಿಸಬೇಕೆಂದು ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.
ಕೇಂದ್ರ ವಲಯದ ಐಜಿ ಬಿಆರ್ ರವಿಕಾಂತೇಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಎಚ್‌ಎಂ ರಮೇಶ್ ಗೌಡ ಸಲ್ಲಿಸಿದ್ದ ಅರ್ಜಿಗಳನ್ನು ಪರಿಶೀಲಿಸಿದ ನ್ಯಾಯಮೂರ್ತಿ ಎಸ್‌ಆರ್ ಕೃಷ್ಣಕುಮಾರ್ ಅವರಿದ್ದ ಏಕಸದಸ್ಯ ಪೀಠ, ಈ ಮಹತ್ವದ ಆದೇಶ ನೀಡಿದೆ. ಕೇಬಲ್ ಟೆಲಿವಿಷನ್ ನೆಟ್ವರ್ಕ್ಗಳ (ನಿಯಂತ್ರಣ) ಕಾಯಿದೆ ೧೯೯೫ರ ಆದೇಶ ಉಲ್ಲಂಘಿಸಿರುವ ಕಾರಣ ತಕ್ಷಣದಿಂದಲೇ ತಮ್ಮ ಚಾನೆಲ್ನಲ್ಲಿ ಸುದ್ದಿಗಳೂ ಸೇರಿದಂತೆ ಯಾವುದೇ ಕಾರ್ಯಕ್ರಮಗಳನ್ನು ಜುಲೈ ೮ರವರೆಗೆ ಪ್ರಸಾರ ಮಾಡಬಾರದು, ಎಂದು ಕರ್ನಾಟಕ ಹೈಕೋರ್ಟ್ ಕಟ್ಟಪ್ಪಣೆ ನೀಡಿದೆ.
ಪವರ್ ಟಿವಿ ಇತ್ತೀಚೆಗೆ ದೇವೇಗೌಡ ಅವರ ಕುಟುಂಬದಲ್ಲಿ ಆಗುತ್ತಿರುವ ಅನೇಕ ಬೆಳವಣಿಗೆಗಳ ಬಗ್ಗೆ ಸಾಲು ಸಾಲು ವರದಿಯನ್ನು ಪ್ರಸಾರ ಮಾಡಿತ್ತು. ನಂತರ ಸೂರಜ್ ರೇವಣ್ಣ ಪ್ರಕರಣವನ್ನು ಬಯಲಿಗೆ ತಂದಿತ್ತು.