ಬೆಂಗಳೂರು : ಸರಕಾರದ ವತಿಯಿಂದ ಕೈಗೊಳ್ಳುವ ಕಾಮಗಾರಿಗಳು ಉತ್ತಮ ಗುಣಮಟ್ಟದ್ದಾಗಿದ್ದರೆ ಲಕ್ಷಾಂತರ ಜನರ ಸಮಸ್ಯೆಗೆ ಪರಿಹಾರ ಒದಗಿಸುತ್ತದೆ. ಹಾಗೆಯೇ, ಸರಕಾರದ ಮೇಲಿನ ವಿಶ್ವಾಸವನ್ನು ಹೆಚ್ಚಿಸುತ್ತವೆ. ಈ ನಿಟ್ಟಿನಲ್ಲಿ ಗುಣಮಟ್ಟದ ಕಾಮಗಾರಿಗಳಿಗೆ ಆದ್ಯತೆ ನೀಡುವಂತೆ ಸಣ್ಣ ನೀರಾವರಿ ಇಲಾಖೆಯ ಇಂಜಿನೀಯರ್‌ಗಳಿಗೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ ಎಸ್ ಭೋಸರಾಜು ನಿರ್ದೇಶನ ನೀಡಿದರು.
ಇಂದು ನಗರದ ಬೆಂಗಳೂರು ಇನ್ಸಿಟ್ಯೂಟ್ ಆಫ್ ಇಂಜಿನೀಯರಿಂಗ್ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಟೆಕ್ನಿಕಲ್ ವರ್ಕ್‌ಶಾಪ್ ಆನ್ ಕ್ವಾಲಿಟಿ ಮಾನಿಟರೀಂಗ್ ವರ್ಕ್‌ಶಾಪ್ ಫಾರ್ ಮೈನರ್ ಇರ್ರಿಗೇಷನ್ ಇಂಜಿನೀಯರ್ಸ್ ಗೆ ಚಾಲನೆ ನೀಡಿ ಅವರು ಮಾತನಾಡಿದರು.
ಯಾವುದೇ ಕ್ಷೇತ್ರದಲ್ಲಾಗಲಿ ಗುಣಮಟ್ಟ ಬಹಳ ಪ್ರಮುಖ್ಯತೆಯನ್ನು ವಹಿಸುತ್ತದೆ. ಅದು ತಿನ್ನುವ ಆಹಾರವಾಗಲಿ, ಬಳಸುವ ಔಷಧಿಯಾಗಲಿ ಗುಣಮಟ್ಟ ಬಹಳ ಮುಖ್ಯ. ಅದರಲ್ಲೂ ತೆರಿಗೆ ಹಣದಲ್ಲಿ ಕೈಗೊಳ್ಳುವ ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡಬೇಕಾಗಿರುವುದು ಇಂಜಿನೀಯರ್‌ಗಳ ಕರ್ತವ್ಯ. ಸರಕಾರಗಳ ವತಿಯಿಂದ ಕೈಗೊಳ್ಳಲಾಗುವ ಕೆಲವು ಕಾಮಗಾರಿಗಳ ಗುಣಮಟ್ಟದ ಬಗ್ಗೆ ಅನುಮಾನಗಳನ್ನ ಸಾರ್ವಜನಿಕರು ವ್ಯಕ್ತಪಡಿಸುತ್ತಾರೆ. ಇದನ್ನ ತೊಡೆದು ಹಾಕುವ ನಿಟ್ಟಿನಲ್ಲಿ ಇಂಜಿನೀಯರ್‌ಗಳ ಪಾತ್ರ ಬಹಳ ಹಿರಿದಾಗಿದೆ. ಯಾವುದೇ ಒತ್ತಡಕ್ಕೂ ಮಣೀಯದೇ, ಉತ್ತಮ ಗುಣಮಟ್ಟದ ಕಾಮಗಾರಿಗಳನ್ನು ಕೈಗೊಳ್ಳಿ ಎಂದು ಇಂಜಿನೀಯರ್‌ಗಳಿಗೆ ಸೂಚಿಸಿದರು.
ದೇಶದಲ್ಲಿ ಶೇಕಡಾ 70 ರಷ್ಟು ಜನರು ಕೃಷಿ ಮೇಲೆ ಅವಲಂಬಿತರಾಗಿದ್ದಾರೆ. ಇವರಿಗೆ ಶಕ್ತಿ ಕೊಡುವ ನಿಟ್ಟಿನಲ್ಲಿ ನೀರಾವರಿ ಇಲಾಖೆಯ ಪಾತ್ರ ಪ್ರಮುಖವಾಗಿದೆ. ನಮ್ಮ ಇಲಾಖೆ ವತಿಯಿಂದ ಕೈಗೊಳ್ಳಲಾಗುವ ಚೆಕ್‌ಡ್ಯಾಂ, ಕೆರೆಗಳ ನಿರ್ವಹಣೆ, ಅಂತರ್ಜಲ ವೃದ್ದಿಯಂತಹ ಕಾಮಗಾರಿಗಳಿಂದ ವರ್ಷಪೂರ್ತಿ ನೀರಿನ ಲಭ್ಯತೆ ಯನ್ನು ಕಾಪಾಡಬಹುದಾಗಿದೆ. ಈ ಕಾಮಗಾರಿಗಳಲ್ಲಿ ಉನ್ನತ ಮಟ್ಟದ ಗುಣಮಟ್ಟವನ್ನು ಕಾಪಾಡಿಕೊಳ್ಳಬೇಕು. ಈಗಾಗಲೇ ಕೆಸಿ ವ್ಯಾಲಿ, ಎಚ್ ಎನ್ ವ್ಯಾಲಿ ಯೋಜನೆಗಳ ಸಮರ್ಪಕ ಅನುಷ್ಠಾನದಿಂದ ಕೋಲಾರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಅಂತರ್ಜಲ ಹೆಚ್ಚಳಕ್ಕೆ ಕಾರಣೀಭೂತರಾಗಿದ್ದೇವೆ. ಮುಂದಿನ ದಿನಗಳಲ್ಲಿ ಯೋಜಿಸಿರುವ ಪ್ರತಿಯೊಂದು ಕಾಮಗಾರಿಗಳು ಅತ್ಯುತ್ತಮ ಗುಣಮಟ್ಟ ಹೊಂದಬೇಕು. ಈ ಮೂಲಕ ಲಕ್ಷಾಂತರ ಜನರಿಗೆ ಅನುಕೂಲವಾಗುವಂತೆ ಅನುಷ್ಠಾನಗೊಳಿಸಬೇಕು ಎಂದು ಹೇಳಿದರು.
ಎರಡು ದಿನಗಳ ಕಾಲ ನಡೆಯಲಿರುವ ಕಾರ್ಯಾಗಾರದಲ್ಲಿ ತಮ್ಮ ಚರ್ಚೆಗಳು ಹೊಸ ತಂತ್ರಜ್ಞಾನವನು ಅಳವಡಿಸಿಕೊಳ್ಳುವ ಮೂಲಕ ರೈತರ ಹಿತದೃಷ್ಟಿಯಿಂದ ಸರಕಾರ ಕೈಗೊಳ್ಳುವ ನೀರಾವರಿ ಯೋಜನೆಗಳಲ್ಲಿ ಪ್ರಾಮಾಣಿಕತೆಯಿಂದ, ಗುಣಮಟ್ಟದಿಂದ ಕಾಮಗಾರಿಗಳನ್ನು ಕೈಗೊಳ್ಳುವಂತಹ ದೃಷ್ಟಿಯಲ್ಲಿ ಇರಲಿ ಎಂದು ಸೂಚನೆ ನೀಡಿದರು.
ಕಾರ್ಯಕ್ರಮದಲ್ಲಿ ಕಿಮ್ಸ್ ನಿರ್ದೇಶಕರಾದ ಡಾ ನಾರಾಯಣಸ್ವಾಮಿ, ಬಿಐಟಿ ಪ್ರಾಂಶುಪಾಲರಾದ ಡಾ. ಎಂ. ಯು ಅಶ್ವಥ್, ಸಣ್ಣ ನೀರಾವರಿ ಇಲಾಖೆ ದಕ್ಷಿಣ ವಲಯ ಮುಖ್ಯ ಅಭಿಯಂತರರಾದ ರಾಘವನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.