ಮನೆ ರಾಜ್ಯ ಜೈವಿಕವಾಗಿ ವಿಘಟನೆಯಾಗುವ ಕ್ಯಾರಿಬ್ಯಾಗ್ ಗೆ ಅನುಮತಿ: ಈಶ್ವರ ಖಂಡ್ರೆ

ಜೈವಿಕವಾಗಿ ವಿಘಟನೆಯಾಗುವ ಕ್ಯಾರಿಬ್ಯಾಗ್ ಗೆ ಅನುಮತಿ: ಈಶ್ವರ ಖಂಡ್ರೆ

0

ಬೆಂಗಳೂರು: ಜೈವಿಕವಾಗಿ ವಿಘಟನೆಯಾಗುವ ಮತ್ತು 180 ದಿನಗಳಲ್ಲಿ ಕರಗಿಹೋಗುವ ಸಸ್ಯ ಜನ್ಯ ಪಾಲಿ ಲಿಕ್ವಿಡ್ ಆಸಿಡ್ ಪೋಲಿಮರ್ ಕೈಚೀಲ (ಕ್ಯಾರಿ ಬ್ಯಾಗ್)ಗಳ ತಯಾರಿಕೆ, ದಾಸ್ತಾನು, ಮಾರಾಟಕ್ಕೆ ಅವಕಾಶ ಆಗುವಂತೆ ತುರ್ತು ಕ್ರಮ ಕೈಗೊಳ್ಳಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದ್ದಾರೆ.

Join Our Whatsapp Group


ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿಂದು ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಮಣ್ಣಲ್ಲಿ ಮಣ್ಣಾಗದ, ನೀರಲ್ಲಿ ಕರಗದ, ಸುಟ್ಟರೆ ವಾತಾವರಣವನ್ನೇ ಕಲುಷಿತಗೊಳಿಸುವ ಏಕ ಬಳಕೆ ಪ್ಲಾಸ್ಟಿಕ್ ಈ ಪರಿಸರಕ್ಕೆ ಮಾರಕವಾಗಿದ್ದು. ಇದಕ್ಕೆ ಪರ್ಯಾಯವಾಗಿ ಜೈವಿಕವಾಗಿ ಕೊಳೆಯುವಂತಹ ಉತ್ಪನ್ನದ ಅಗತ್ಯ ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿದೆ ಎಂದರು.
ಈ ನಿಟ್ಟಿನಲ್ಲಿ ಜೈವಿಕವಾಗಿ ವಿಘಟನೆಯಾಗುವ ಸಸ್ಯಜನ್ಯ ಪಾಲಿ ಲಿಕ್ವಿಡ್ ಆಸಿಡ್ ಪೋಲಿಮರ್ ಚೀಲಗಳ ತಯಾರಿಕೆ, ದಾಸ್ತಾನು ಮತ್ತು ಮಾರಾಟಕ್ಕೆ ತೊಡಕಾಗಿರುವ ಕರ್ನಾಟಕ ಸರ್ಕಾರದ 2016ರ ಅಧಿಸೂಚನೆಗೆ ತಿದ್ದುಪಡಿ ತಂದು ಇಲ್ಲವೆ ಹಿಂಪಡೆದು, ಕೇಂದ್ರ ಪರಿಸರ ಇಲಾಖೆಯ 2021ರ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ (ತಿದ್ದುಪಡಿ) ನಿಯಮಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು.
ಮೆಕ್ಕೆಜೋಳದ ಸಾರದಿಂದ ತಯಾರಿಸುವ ಕೈಚೀಲಗಳು 6 ತಿಂಗಳುಗಳಲ್ಲಿ ಇಟ್ಟಲ್ಲಿಯೇ ಕರಗಿ ಹೋಗುತ್ತವೆ ಎಂದು ಸಭೆಗೆ ಪರಿಸರ ಅಧಿಕಾರಿಗಳು ವಿವರಿಸಿದರು.
ಇದಕ್ಕೆ ಸ್ಪಂದಿಸಿದ ಸಚಿವರು ಈ ಕೈಚೀಲಗಳು ಪರಿಸರಕ್ಕೆ ಹಾನಿಕಾರಕವಲ್ಲ ಮತ್ತು ವೈಜ್ಞಾನಿಕವಾಗಿ ವಿಘಟನೆಯಾಗುತ್ತದೆ ಎಂದು ಸಾಬೀತಾಗಿದ್ದಲ್ಲಿ, ಇದಕ್ಕೆ ಶೀಘ್ರ ಅನುಮತಿ ನೀಡಿ ಎಂದರು.
ಈ ಪೋಲಿಮರ್ ಕೈಚೀಲಗಳ ದರ ಕೂಡ ಪ್ರಸ್ತುತ ಲಭ್ಯವಿರುವ ಏಕ ಬಳಕೆ ಪ್ಲಾಸ್ಟಿಕ್ ಕೈಚೀಲಗಳ ದರದಲ್ಲೇ ಲಭ್ಯವಾದರೆ ಯಾರೂ ಆಗ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಖರೀದಿಸುವುದಿಲ್ಲ ಎಂದೂ ಸಚಿವ ಈಶ್ವರ ಖಂಡ್ರೆ ಅಭಿಪ್ರಾಯಪಟ್ಟರು.
ಸಭೆಯಲ್ಲಿ ಅಧಿಕಾರೇತರ ಸದಸ್ಯರಾದ ಶರಣಕುಮಾರ ಮೋದಿ ಮತ್ತು ಪರಿಸರ ಇಲಾಖೆ ಪ್ರಧಾನ ಕಾರ್ಯದರ್ಶಿ ಬಿ.ಪಿ. ರವಿ ಮತ್ತಿತರರು ಉಪಸ್ಥಿತರಿದ್ದರು.