ಮನೆ ರಾಷ್ಟ್ರೀಯ ಗ್ಯಾಸ್‌ ಸಿಲಿಂಡರ್‌ ಮೇಲೆ 200 ರೂ. ಸಬ್ಸಿಡಿ ಘೋಷಿಸಿದ ಕೇಂದ್ರ ಸರ್ಕಾರ

ಗ್ಯಾಸ್‌ ಸಿಲಿಂಡರ್‌ ಮೇಲೆ 200 ರೂ. ಸಬ್ಸಿಡಿ ಘೋಷಿಸಿದ ಕೇಂದ್ರ ಸರ್ಕಾರ

0

ನವದೆಹಲಿ (New Delhi)-ಕೇಂದ್ರ ಸರ್ಕಾರ ಶನಿವಾರ ದೇಶದ ಜನತೆಗೆ ಗುಡ್‌ ನ್ಯೂಸ್‌ ನೀಡಿದೆ. ಪೆಟ್ರೋಲ್-ಡೀಸೆಲ್‌ ದರವನ್ನು ಕಡಿತಗೊಳಿಸಿರುವುದಲ್ಲದೆ, ಗ್ಯಾಸ್‌ ಸಿಲಿಂಡರ್‌ ಮೇಲೆ ಸಬ್ಸಿಡಿ ಘೋಷಿಸಿದೆ.

ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೆಟ್ರೋಲ್-ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತಗೊಳಿಸಿರುವ ಕೇಂದ್ರ ಸರ್ಕಾರ ಇದರ ನಡುವೆಯೇ ಗ್ಯಾಸ್ ಸಿಲಿಂಡರ್ ಮೇಲೆ ಸಬ್ಸಿಡಿ ಕೂಡ ಘೋಷಣೆ ಮಾಡಿದೆ.

ಪೆಟ್ರೋಲ್ ಬೆಲೆ 9.5 ರೂ., ಡೀಸೆಲ್ ದರ 7 ರೂ. ಇಳಿಕೆ ಮಾಡಿದ್ದು, ಗ್ಯಾಸ್ ಸಿಲಿಂಡರ್‌ಗಳ ಮೇಲೆ 200 ರೂ. ಸಬ್ಸಿಡಿ ಘೋಷಿಸಿದೆ.

ಪ್ರಧಾನ ಮಂತ್ರಿ ಉಜ್ವಲ ಯೋಜನೆಯ 9 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ಈ ಸಬ್ಸಿಡಿ ಲಭ್ಯವಾಗಲಿದ್ದು, ಆದರೆ ಈ ಸಬ್ಸಿಡಿ ವಿಚಾರಕ್ಕೆ ಷರತ್ತು ಕೂಡ ಹಾಕಲಾಗಿದೆ. ಈ ಸಬ್ಸಿಡಿಯನ್ನು ವಾರ್ಷಿಕವಾಗಿ 12 ಸಿಲಿಂಡರ್‌ಗಳಿಗೆ ಮಾತ್ರ ನೀಡಲಾಗುವುದು ಎಂದು ವಿತ್ತ ಸಚಿವಾಲಯ ಮಾಹಿತಿ ನೀಡಿದೆ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದು, ಪ್ರಧಾನಿ ಉಜ್ವಲ ಯೋಜನೆಯ 9 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ಈ ವರ್ಷ ಪ್ರತಿ ಗ್ಯಾಸ್ ಸಿಲಿಂಡರ್‌ಗೆ (12 ಸಿಲಿಂಡರ್‌ಗಳವರೆಗೆ) 200 ರೂ. ಸಬ್ಸಿಡಿ ನೀಡಲಿದ್ದಾರೆ. ಇದು ನಮ್ಮ ತಾಯಿ ಮತ್ತು ಸಹೋದರಿಯರಿಗೆ ಸಹಾಯ ಮಾಡುತ್ತದೆ. ಇದು ಸುಮಾರು 6100 ಕೋಟಿ ವಾರ್ಷಿಕ ಆದಾಯದ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ.