ಮನೆ ಅಪರಾಧ ಬುಡುಬುಡಿಕೆ ವೇಷ ಧರಿಸಿ 2.4 ಲಕ್ಷ ರೂ. ಬೆಲೆಯ ಚಿನ್ನಾಭರಣ ಪಡೆದು ವಂಚನೆ

ಬುಡುಬುಡಿಕೆ ವೇಷ ಧರಿಸಿ 2.4 ಲಕ್ಷ ರೂ. ಬೆಲೆಯ ಚಿನ್ನಾಭರಣ ಪಡೆದು ವಂಚನೆ

0

ಕನಕಪುರ: ದೋಷ ಪರಿಹಾರ ಮಾಡಿಕೊಡುವುದಾಗಿ ನಂಬಿಸಿ ಬುಡುಬುಡಿಕೆ ವೇಷಧಾರಿಗಳು 2.4 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣ ಪಡೆದು ವಂಚನೆ ಮಾಡಿ ಪರಾರಿ ಆಗಿರುವ ಘಟನೆ ಸಾತನೂರು ಗ್ರಾಮದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

Join Our Whatsapp Group

ತಾಲೂಕಿನ ಸಾತನೂರಿನ ಆಂಜನೇಯ ದೇವ ಸ್ಥಾನದ ರಸ್ತೆ ನಿವಾಸಿ ಕೆಂಪರಾಜಮ್ಮ ವಂಚನೆಗೊಳಗಾದ ಮಹಿಳೆ. ಕಳೆದ ಶುಕ್ರವಾರ ಕೆಂಪರಾಜಮ್ಮ ಅವರ ಮನೆ ಬಳಿ ಬಂದ ಇಬ್ಬರು ಬುಡಬುಡುಕೆ ವೇಷಧಾರಿಗಳು, “ನಿಮ್ಮ ಮನೆಯಲ್ಲಿ ನಿಮ್ಮ ಗಂಡ ಮತ್ತು ಮಗಳು ಇಬ್ಬರು ಒಂದು ವಾರದಲ್ಲಿ ಸಾವನ್ನಪ್ಪುತ್ತಾರೆ’ ಎಂದು ಹೆದರಿಸಿದ್ದಾರೆ.

ಬಳಿಕ ಅದಕ್ಕೆ ನಾವೇ ಪರಿಹಾರ ಮಾಡಿಕೊಡುತ್ತೇವೆ ಎಂದು ಹೇಳಿ 2 ಸಾವಿರ ರೂ. ಪಡೆದು ಮನೆ ಬಳಿ ಪೂಜೆ ಮಾಡಿದ್ದಾರೆ. ನಂತರ ಈ ಮನೆಯಲ್ಲಿ ದೋಷವಿದೆ. ಹೀಗಾಗಿ ನಿಮ್ಮ ಮಗಳಿಗೆ ವಿವಾಹವಾಗಿಲ್ಲ. ದೋಷ ಪರಿಹಾರವಾಗಬೇಕಾದರೆ ಪೂಜೆ ಮಾಡಬೇಕು. 28 ಸಾವಿರ ರೂ. ಕೊಟ್ಟರೆ ಅದನ್ನು ನಾವು ಪರಿಹರಿಸಿಕೊಡುತ್ತೇವೆ ಎಂದು ನಂಬಿಸಿದ್ದಾರೆ. ಬಳಿಕ ಅವರ ಹಣೆಗೆ ಭಸ್ಮ ಹಚ್ಚಿ ನೀವು ಬಳಸುವ ಚಿನ್ನಾಭರಣ ಕೊಟ್ಟರೆ ಅದಕ್ಕೆ ನಾವು ಪೂಜೆ ಮಾಡಿ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಮಾಡಿ ಕೊಡುತ್ತೇವೆ ಎಂದು ಪುಸಲಾಯಿಸಿದ್ದಾರೆ.

ಅದನ್ನು ನಂಬಿದ ಕುಟುಂಬಸ್ಥರು 5 ಗ್ರಾಂ ಉಂಗುರ, 17 ಗ್ರಾಂ ಚೈನ್‌, 13.5 ಗ್ರಾಂ ಕಿವಿ ಓಲೆ ಸೇರಿ ಒಟ್ಟು 2.40 ಲಕ್ಷ ರೂ.ಬೆಲೆ ಬಾಳುವ ಚಿನ್ನಾಭರಣ ವಂಚಕರಿಗೆ ಕೊಟ್ಟಿದ್ದಾರೆ. ಅದನ್ನು ಒಂದು ಮಣ್ಣಿನ ಕುಡಿಕೆಯಲ್ಲಿ ಹಾಕಿ ದಾರ ಸುತ್ತಿ ಮತ್ತು ಪೂಜೆ ಮಾಡಿ ವಾಪಸ್‌ ಕೊಟ್ಟು, ನಾವು ನಾಳೆ ಬರುತ್ತೇವೆ ಇದನ್ನು ಪೂಜೆ ಸಲ್ಲಿಸಿ ತೆಗೆಯಬೇಕು. ಇಲ್ಲದಿದ್ದರೆ ನಿಮ್ಮ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ನಂಬಿಸಿ ಹೊರಭಾಗದಿಂದ ಮನೆ ಬಾಗಿಲನ್ನು ಹಾಕಿಕೊಂಡು ಪರಾರಿಯಾಗಿದ್ದಾರೆ. ಅದನ್ನು ನಂಬಿದ ಕೆಂಪರಾಜಮ್ಮನವರ ಕುಟುಂಬ ವಂಚಕರು ಕೊಟ್ಟ ಮಣ್ಣಿನ ಕುಡಿಕೆಯಲ್ಲಿ ಏನಿದೆ ಎಂದು ನೋಡಿರಲಿಲ್ಲ. ಮರುದಿನ ಬುಡ ಬುಡಕೆ ವೇಷಧಾರಿಗಳು ಮನೆ ಬಳಿ ಬರಲಿಲ್ಲ, ಅನುಮಾನಗೊಂಡು ಕುಡಿಕೆಗೆ ಪೂಜೆ ಸಲ್ಲಿಸಿ ತೆಗೆದು ನೋಡಿದಾಗ ಅದ ರಲ್ಲಿ ಒಡವೆಗಳು ಇರಲಿಲ್ಲ. ಮೋಸ ತಿಳಿದು ಸಾತನೂರು ಠಾಣೆಗೆ ದೂರು ದಾಖಲಿಸಿದ್ದಾರೆ.