ಮನೆ ಕಾನೂನು ಸಿಸಿ ಕ್ಯಾಮೆರಾ ದೃಶ್ಯಾವಳಿ, ಫೂರೆನ್ಸಿಕ್‌ ವರದಿ ಸಾಕ್ಷಿಯಾಗಿಸಿ ಶಿಕ್ಷೆ ವಿಧಿಸಿದ ನ್ಯಾಯಾಲಯ

ಸಿಸಿ ಕ್ಯಾಮೆರಾ ದೃಶ್ಯಾವಳಿ, ಫೂರೆನ್ಸಿಕ್‌ ವರದಿ ಸಾಕ್ಷಿಯಾಗಿಸಿ ಶಿಕ್ಷೆ ವಿಧಿಸಿದ ನ್ಯಾಯಾಲಯ

0

ಮಂಗಳೂರು: ಕೊಲೆ ಯತ್ನ ಪ್ರಕರಣವೊಂದರಲ್ಲಿ ಸಾಕ್ಷಿದಾರರು ರಾಜಿಯಾಗಿ ಅಭಿಯೋಜನೆಗೆ ವಿರುದ್ಧವಾಗಿ ಸಾಕ್ಷಿ ನುಡಿದರೂ ತನಿಖಾಧಿಕಾರಿ ಹಾಜರುಪಡಿಸಿದ ಸಿಸಿ ಕೆಮರಾ ದೃಶ್ಯಾವಳಿ ಮತ್ತು ಫೂರೆನ್ಸಿಕ್‌ ವರದಿಯನ್ನೇ ಬಲವಾದ ಸಾಕ್ಷಿಯೆಂದು ಪರಿಗಣಿಸಿ ಅಪರಾಧಿಗಳಿಗೆ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

Join Our Whatsapp Group

ಸುರತ್ಕಲ್‌ ಇಡ್ಯಾ ಗ್ರಾಮದ ಕಾನಕಟ್ಲ ಜನತಾ ಕಾಲನಿ ನಿವಾಸಿ ರಾಜೇಶ್‌ ದೇವಾಡಿಗ ಯಾನೆ ರಾಜಾ (42) ಮತ್ತು ಜೋಕಟ್ಟೆ 62ನೇ ತೋಕೂರು ಶೇಡಿಗುರಿ ಗ್ರಾಮದ ಜಗದೀಶ್‌ ಯಾನೆ ಜಗ್ಗು (45) ಶಿಕ್ಷೆಗೆ ಒಳಗಾದವರು.

ಪ್ರಕರಣದ ವಿವರ

ಶಿಕ್ಷೆಗೊಳಗಾಗಿರುವ ರಾಜೇಶ್‌, ದೂರುದಾರ ಇಡ್ಯಾ ಜನತಾ ಕಾಲನಿ ನಿವಾಸಿ ಜೀವನ್‌ ಮಸ್ಕರೇನಸ್‌ (28) ಅವರು 2016 ರಲ್ಲಿ ನಡೆದ ಹಲ್ಲೆ ಪ್ರಕರಣದಲ್ಲಿ ಆರೋಪಿಗಳಾಗಿದ್ದರು. ರಾಜೇಶ್‌ ಕೋರ್ಟ್‌ಗೆ ಹಾಜರಾಗದೆ ಪ್ರಕರಣದ ವಿಚಾರಣೆ ದಿನಾಂಕ ಮುಂದೂಡಿಕೆಯಾಗುತ್ತಿತ್ತು. ಇದರಿಂದ ಜೀವನ್‌ಗೆ ತೊಂದರೆಯಾಗುತ್ತಿದ್ದರಿಂದ ಅನೇಕ ಬಾರಿ ಇವರ ನಡುವೆ ಮಾತಿನ ಚಕಮಕಿ ನಡೆದಿತ್ತು.

2019ರ ಡಿ.14ರಂದು ರಾತ್ರಿ 10.30ರ ವೇಳೆಗೆ ಇಡ್ಯಾ ಬಳಿಯ ಬಾರೊಂದರಲ್ಲಿ ಜೀವನ್‌ ಹಾಗೂ ಆತನ ಗೆಳೆಯ ಪ್ರಶಾಂತ್‌ ಮದ್ಯ ಸೇವಿಸುತ್ತಿದ್ದಾಗ, ರಾಜೇಶ್‌ ಮತ್ತು ಜಗದೀಶ್‌ ಅಲ್ಲಿಗೆ ಬಂದಿದ್ದರು. ಜೀವನ್‌ನನ್ನು ನೋಡಿದ ಆತ ಹೊರಗೆ ಹೋಗಿ ಕತ್ತಿ ತಂದು ಭುಜಕ್ಕೆ, ಬಲಕೈ ಮತ್ತು ಮೊಣಗಂಟಿಗೆ ಹೊಡೆದಿದ್ದ.

ಸುರತ್ಕಲ್‌ನ ಅಂದಿನ ಪಿಎಸ್‌ಐ ಸುಂದರಿ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದರು. ಜತೆಗೆ ಬಾರ್‌ನ ಸಿಸಿ ಕೆಮರಾ ದೃಶ್ಯಾವಳಿಯನ್ನು ಸಂಗ್ರಹಿಸಿ ನೀಡಿದ್ದರು.

ಪ್ರಕರಣದಲ್ಲಿ 31 ಸಾಕ್ಷಿದಾರರು ಮತ್ತು 58 ದಾಖಲೆಗಳನ್ನು ಗುರುತಿಸಲಾಗಿತ್ತು. ಸಾಕ್ಷಿದಾರರು ಅಭಿಯೋಜನೆಗೆ ವಿರುದ್ಧವಾಗಿ ಸಾಕ್ಷಿ ನುಡಿದರೂ ಸಿಸಿ ಕೆಮರಾ ದೃಶ್ಯಾವಳಿ ಮತ್ತು ಫೋರೆನ್ಸಿಕ್‌ ವರದಿಯನ್ನು ಸಾಕ್ಷಿ ಎಂದು ಪರಿಗಣಿಸಿದೆ. 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಸ್ವಾಮಿ ಎಚ್‌.ಎಸ್‌. ಅವರು ರಾಜೇಶ್‌ನಿಗೆ 323 ದಿನಗಳ ಸಾದಾ ಸಜೆ ಮತ್ತು 2 ಸಾವಿರ ರೂ. ದಂಡ, ಜಗದೀಶನಿಗೆ 39 ದಿನಗಳ ಸಾದಾ ಸಜೆ ಮತ್ತು 2 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಇಬ್ಬರೂ ವಿಚಾರಣಾಧೀನ ಕೈದಿಗಳಾಗಿ ಅದಕ್ಕಿಂತಲೂ ಹೆಚ್ಚು ದಿನ ಜೈಲಿನಲ್ಲಿದ್ದ ಕಾರಣ ಜೈಲು ಶಿಕ್ಷೆಯನ್ನು ಮನ್ನಾ ಮಾಡಲಾಗಿದೆ.

ಸರಕಾರಿ ಅಭಿಯೋಜಕರಾಗಿ ಜುಡಿತ್‌ ಓಲ್ಗಾ ಮಾರ್ಗರೇಟ್‌ ಕ್ರಾಸ್ತಾ ವಾದ ಮಂಡಿಸಿದ್ದಾರೆ.