ಮನೆ ರಾಜ್ಯ ಡೆಂಗ್ಯೂ ಪ್ರಕರಣ ಹೆಚ್ಚಳ: ರಾಜ್ಯದಲ್ಲಿ ಮೆಡಿಕಲ್ ಎಮರ್ಜೆನ್ಸಿ ಘೋಷಿಸಲಿ ಎಂದ ಸಂಸದ ಡಾ.ಸಿ.ಎನ್.ಮಂಜುನಾಥ್

ಡೆಂಗ್ಯೂ ಪ್ರಕರಣ ಹೆಚ್ಚಳ: ರಾಜ್ಯದಲ್ಲಿ ಮೆಡಿಕಲ್ ಎಮರ್ಜೆನ್ಸಿ ಘೋಷಿಸಲಿ ಎಂದ ಸಂಸದ ಡಾ.ಸಿ.ಎನ್.ಮಂಜುನಾಥ್

0

ಬೆಂಗಳೂರು: ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಳವಾಗುತ್ತಿವೆ. ಇದರಿಂದ ರಾಜ್ಯದಲ್ಲಿ ಮೆಡಿಕಲ್ ಎಮರ್ಜೆನ್ಸಿ ಎಂದು ಘೋಷಿಸಬೇಕು. ಜೊತೆಗೆ ಡೆಂಗ್ಯೂ ನಿಯಂತ್ರಣಾ ಕ್ರಮಕ್ಕೆ ಟಾಸ್ಕ್ ಫೋರ್ಸ್ ರಚಿಸಬೇಕು ಎಂದು ಸಂಸದ ಡಾ.ಸಿ.ಎನ್. ಮಂಜುನಾಥ್ ಅವರು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

Join Our Whatsapp Group

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು (ಶನಿವಾರ) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಸಂದರ್ಭದಲ್ಲಿ ಯಾವ ರೀತಿ ಉಚಿತ ಚಿಕಿತ್ಸೆ ನೀಡಲಾಯ್ತು. ಅದೇ ರೀತಿ ಡೆಂಗ್ಯೂ ಕಾಯಿಲೆ ಬಂದವರಿಗೂ ಕನಿಷ್ಠ ಮಾನದಂಡದಲ್ಲಿ ಉಚಿತ ಚಿಕಿತ್ಸೆ ನೀಡಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದರು.

ಡೆಂಗ್ಯೂ ಜ್ವರ ನಿಯಂತ್ರಣ ಅಂದ್ರೆ ಸೊಳ್ಳೆ ನಿಯಂತ್ರಣ. ಸೊಳ್ಳೆ ನಿಯಂತ್ರಣ ಆದರೆ ಮಾತ್ರ ಡೆಂಗ್ಯೂ ನಿಯಂತ್ರಣ ಆಗಲಿದೆ. ಮಳೆಗಾಲ ಪ್ರಾರಂಭದಲ್ಲಿ ಸೊಳ್ಳೆಯಿಂದ ಹರಡುವ ಕಾಯಿಲೆಗಳು ಹೆಚ್ಚಾಗಲಿವೆ. ಡೆಂಗ್ಯೂ ತಡೆಗಟ್ಟದಿದ್ದರೆ ಚಿಕೂನ್​​​ ಗುನ್ಯಾ, ಜೀಕಾ ವೈರಸ್ ಬರಬಹುದು ಎಂದು ಹೇಳಿದರು.

ಕೋವಿಡ್ ಪ್ಯಾಂಡಮಿಕ್ ಅಂದೆವು. ಪ್ಯಾಂಡಮಿಕ್ ಅಂದರೆ ದೇಶದಲ್ಲಿ ಹರಡೋದು. ಡೆಂಗ್ಯೂ ಎಂಡಮಿಕ್ ಆಗಿದೆ. ಎಂಡಮಿಕ್ ಅಂದರೆ ರಾಜ್ಯಾದ್ಯಂತ ಹರಡಿರೋದು. ಇದಕ್ಕೆ ತುರ್ತು ಚಿಕಿತ್ಸೆ ಅಗತ್ಯವಿದೆ ಎಂದರು.

ಡೆಂಗ್ಯೂ‌ಗೆ ದರ ನಿಗದಿ ಮಾಡಿದೆ. ಡಯೋಗ್ನಾಸಿಸ್​ಗಳು ಹೆಚ್ಚು ವಸೂಲಿ ಮಾಡಿದ್ರೆ,‌ ಅವುಗಳ ಬಾಗಿಲು ಮುಚ್ಚಿಸಬೇಕು. ಮಳೆಗಾಲದಲ್ಲಿ ನೀರು ನಿಲ್ಲುವುದರಿಂದಲೇ ಡೆಂಗ್ಯೂ ಹರಡಲು ಕಾರಣವಾಗುತ್ತಿದೆ. ಹಲವೆಡೆ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಅಲ್ಲಿ ಸೊಳ್ಳೆಗಳು ಉತ್ಪತ್ತಿ ಆಗುತ್ತಿವೆ. ಈಡಸ್ ಈಜಿಪ್ಟೆ ಸೊಳ್ಳೆಯಿಂದ ಕಾಯಿಲೆ‌ ಹರಡುತ್ತಿದೆ. ಮಳೆಗಾಲ ಆರಂಭವಾದ ಮೇಲೆ ಎಚ್ಚೆತ್ತುಕೊಂಡಿದ್ದಾರೆ. ಹಾಗಾಗಿ ಯುದ್ಧೋಪಾದಿಯಲ್ಲಿ ಕೆಲಸ ಮಾಡಬೇಕಿದೆ. ಸರ್ಕಾರ ಮತ್ತು ಸಾರ್ವಜನಿಕರು ಇಬ್ಬರದ್ದೂ ಜವಾಬ್ದಾರಿ ಇದೆ ಎಂದರು.

ಡೆಂಗ್ಯೂ ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಶಾಲೆಗಳಿಗೆ ಸರ್ಕ್ಯೂಲರ್ ಹೊರಡಿಸಬೇಕು. ಮಕ್ಕಳಲ್ಲಿ ಆರೋಗ್ಯ ಹದಗೆಟ್ಟಿದ್ರೆ ಕ್ರಮ ತೆಗೆದುಕೊಳ್ಳಬೇಕು. ಈಗಾಗಲೇ ರಾಜ್ಯದಲ್ಲಿ ಏಳೆಂಟು ಜನ ಸಾವನ್ನಪ್ಪಿದ್ದಾರೆ. ಸೊಳ್ಳೆ ನಿಯಂತ್ರಣ ಮಾಡೋದ್ರಲ್ಲಿ ಸರ್ಕಾರ ಎಡವಿದೆ. ಏನೇನೋ ಫ್ರೀ ಕೊಡ್ತೀವಿ, ಯಾವುದನ್ನೋ ಉಚಿತ ಕೊಡ್ತಿದ್ದಾರೆ. ಅದರ ಜೊತೆಗೆ ಸ್ಲಂಗಳಲ್ಲಿ, ವಠಾರದಲ್ಲಿ ವಾಸವಾಗಿದ್ದಾರೆ, ಅವರ ಮನೆಗೆ ಸೊಳ್ಳೆಪರದೆಯನ್ನ ಉಚಿತವಾಗಿ ನೀಡಬೇಕು. ಇದರಿಂದ ಬಹಳಷ್ಟು ರೋಗ ನಿಯಂತ್ರಣ ಆಗಲಿದೆ ಎಂದು ಹೇಳಿದರು.

ಡೆಂಗ್ಯೂ ಬಂದು ಮತ್ತೆ ಹುಷಾರಾಗುವಾಗ ಪ್ಲೇಟ್ ಲೆಟ್ಸ್ ಕಡಿಮೆ ಆಗುತ್ತದೆ. ಜೊತೆಗೆ ದೇಹದಲ್ಲಿ ನೀರು ತುಂಬಿಕೊಳ್ಳುತ್ತದೆ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವರ‌ ಗಮನಕ್ಕೂ ನಾನು ತರಲಿದ್ದೇನೆ. ಅವಶ್ಯಕತೆ ಇರುವವರಿಗೆ ಮೊದಲೇ ಚಿಕಿತ್ಸೆ ನೀಡಬೇಕು. ಡೆಂಗ್ಯೂ ಕಾಯಿಲೆಗೆ ಬೇಕಾದ ಮಾತ್ರೆಗಳ ಕೊರತೆ ಕೂಡ ಎದುರಾಗಿದೆ. ವಾರ್ ರೂಮ್ ಮೂಲಕ ಮಾನಿಟರ್ ಮಾಡಬೇಕು. ಮುಂದುವರೆದ ದೇಶಗಳಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ಕಾಯಿಲೆ ತಡೆದಿದ್ದಾರೆ. ಮಸ್ಕ್ಯೂಟೋ ರೆಫಲೆಂಟ್ಸ್ ಅಂತ ಸ್ಟಿಕರ್ ಬರಲಿದೆ. ಅದನ್ನು ಇಲ್ಲೂ ಹಾಕಬೇಕು. ಇದರಿಂದ ಮಕ್ಕಳಿಗೆ ಸೊಳ್ಳೆ ಕಡಿಯೋದ್ರಿಂದ ತಪ್ಪಿಸಬಹುದು  ಎಂದರು.

ಜಪಾನ್, ಸಿಂಗಾಪುರ್, ಅಮೆರಿಕದಲ್ಲಿ ಡೆಂಗ್ಯೂ ಕಾಯಿಲೆಗೆ ಬೇಕಾದ ಮೆಡಿಸಿನ್ ಇದೆ. ಅವುಗಳನ್ನು ರಾಜ್ಯ ಸರ್ಕಾರ ತರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನಾವು ಐದನೇ ಆರ್ಥಿಕ ಸ್ಥಿತಿಯಲ್ಲಿ ಇದ್ದೇವೆ. ಮೂರನೇ ಸ್ಥಾನಕ್ಕೆ ಬರುತ್ತಿದ್ದೇವೆ. ಇನ್ನು ಐದು ವರ್ಷಗಳಲ್ಲಿ ಮೂರನೇ ಸ್ಥಾನಕ್ಕೆ ತಲುಪುತ್ತೇವೆ ಎಂದರು.

ರಾಜ್ಯ ವಕ್ತಾರ ಅಶೋಕ್ ಕೆ.ಎಂ. ಗೌಡ, ವೈದ್ಯಕೀಯ ಪ್ರಕೋಷ್ಠದ ರಾಜ್ಯ ಸಂಚಾಲಕ ಡಾ. ನಾರಾಯಣ ಕೆ, ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.