ಮನೆ ಅಪರಾಧ ರೇಣುಕಾಸ್ವಾಮಿ ಕೊಲೆ ಪ್ರಕರಣ: ದರ್ಶನ್‌, ಪವಿತ್ರಾ ಗೌಡ ಸೇರಿ 10 ಮಂದಿ ಬೆರಳಚ್ಚು ಹೊಂದಾಣಿಕೆ

ರೇಣುಕಾಸ್ವಾಮಿ ಕೊಲೆ ಪ್ರಕರಣ: ದರ್ಶನ್‌, ಪವಿತ್ರಾ ಗೌಡ ಸೇರಿ 10 ಮಂದಿ ಬೆರಳಚ್ಚು ಹೊಂದಾಣಿಕೆ

0

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನೂರಾರು ಸಾಕ್ಷ್ಯ ಸಂಗ್ರಹಿಸಿರುವ ಪೊಲೀಸರು, ಇದೀಗ ನಟ ದರ್ಶನ್‌ ಸೇರಿ 10 ಮಂದಿ ಆರೋಪಿಗಳ ಬೆರಳಚ್ಚು ಹೊಂದಾಣಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ.

Join Our Whatsapp Group

ಕೊಲೆ ಪ್ರಕರಣದಲ್ಲಿ ನಟ ದರ್ಶನ್‌, ಪ್ರೇಯಸಿ ಪವಿತ್ರಾ ಗೌಡ, ಪವನ್‌, ಪ್ರದೋಷ್‌ ಸೇರಿ 17 ಆರೋಪಿಗಳನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದರು. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ 14 ಮಂದಿ ಹಾಗೂ ತುಮಕೂರು ಜಿಲ್ಲಾ ಕಾರಾಗೃಹದಲ್ಲಿ ಮೂವರು ಆರೋಪಿಗಳನ್ನು ಇರಿಸಲಾಗಿದೆ. ಈ 17 ಮಂದಿ ಪೈಕಿ 10 ಮಂದಿಯ ಬೆರಳಚ್ಚು ಮತ್ತು ಮೃತ ರೇಣುಕಸ್ವಾಮಿ ಮೈಮೇಲೆ ಮತ್ತು ಕೃತ್ಯಕ್ಕೆ ಬಳಸಿದ್ದ ದೊಣ್ಣೆ ಹಾಗೂ ಇತರೆ ವಸ್ತುಗಳ ಮೇಲೆ ದೊರೆತ ಬೆರಳಚ್ಚು ಹೊಂದಾಣಿಕೆಯಾಗಿವೆ ಎಂದು ತಿಳಿಸಿವೆ.

ಜೂನ್‌ 9ರಂದು ಪಟ್ಟಣಗೆರೆಯ ಶೆಡ್‌ನ‌ಲ್ಲಿ ಮೂಲಗಳು ರೇಣುಕಸ್ವಾಮಿ ಕೊಲೆ ನಡೆದಿತ್ತು. ಕೃತ್ಯ ನಡೆದ ಮರುದಿನ ನಾಲ್ವರು ಪೊಲೀಸರಿಗೆ ಶರಣಾಗಿದ್ದರು. ಜೂನ್‌ 11ರಂದು ದರ್ಶನ್‌ ಸೇರಿ 13 ಆರೋಪಿಗಳನ್ನು ವಿವಿಧ ಸ್ಥಳಗಳಲ್ಲಿ ಪೊಲೀಸರು ಬಂಧಿಸಿದ್ದರು.

ಕೊಲೆ ನಡೆದ ಪಟ್ಟಣಗೆರೆ ಶೆಡ್‌, ಶವ ಇಟ್ಟಿದ್ದ ಶೆಡ್‌ನ‌ ಸೆಕ್ಯೂರಿಟಿ ಗಾರ್ಡ್‌ ಕೊಠಡಿ, ಮೃತದೇಹ ಸಾಗಿಸಲು ಬಳಸಿದ್ದ ವಾಹನ, ಶವ ಎಸೆದಿದ್ದ ಸ್ಥಳ, ಮೃತನ ಬಟ್ಟೆಗಳು, ಹಲ್ಲೆ ಮಾಡಲು ಬಳಸಿದ್ದ ವಸ್ತುಗಳು, ಎಲೆಕ್ಟ್ರಿಕ್‌ ಶಾಕ್‌ ನೀಡಲು ಬಳಸಿದ್ದ ಉಪಕರಣ, ಆರೋಪಿಗಳ ಬಟ್ಟೆಗಳ ಮೇಲಿದ್ದ ಬೆರಳಚ್ಚನ್ನು ಮಹಜರು ವೇಳೆ ತಜ್ಞರು ಸಂಗ್ರಹಿಸಿದ್ದರು.

ಜತೆಗೆ ಬಂಧಿತರ ಬೆರಳಚ್ಚು ಮಾದರಿ ಸಹ ಸಂಗ್ರಹಿಸಿ ಬೆಂಗಳೂರು ಹಾಗೂ ಹೈದರಾಬಾದ್‌ನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇದೀಗ ತನಿಖೆಯ ಪ್ರಾಥಮಿಕ ಮಾಹಿತಿಗಳು ಹೊರಬಿದ್ದಿದ್ದು, ದರ್ಶನ, ಪವಿತ್ರಾ ಗೌಡ ಸೇರಿ ಕೆಲ ಆರೋಪಿಗಳ ಬೆರಳಚ್ಚು ಹೊಂದಾಣಿಕೆ ಆಗುತ್ತಿದೆ. ಮತ್ತೂಂದೆಡೆ ಡಿಎನ್‌ಎ ಪರೀಕ್ಷೆಗಾಗಿ 10 ಮಂದಿಯ ರಕ್ತ ಹಾಗೂ ಕೂದಲು ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಅದರ ವರದಿಯೂ ಬರಬೇಕಿದೆ ಎಂದು ಮೂಲಗಳು ಹೇಳಿವೆ.