ಮನೆ ಪ್ರಕೃತಿ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ

ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ

0

ಮೈಸೂರು(Mysuru): ಬೇಸಿಗೆಯ ಬಿರು ಬಿಸಿಲಿಗೆ ಒಣಗಿ ಹೋಗಿದ್ದ ಗಿಡ ಮರಗಳು, ಇತ್ತೀಚಿಗೆ ಎಡೆಬಿಡದೆ ಸುರಿದ ಮಳೆಯಿಂದಾಗಿ ಮತ್ತೆ ಹಚ್ಚ ಹಸುರಿನಿಂದ ಕಂಗೊಳಿಸುತ್ತಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಸ್ವರ್ಗಕ್ಕೆ ಕಿಚ್ಚುಹಚ್ಚುವಂತಿದೆ.

ಮರಗಿಡಗಳ ನಡುವೆ ಬೆಳೆದು ನಿಂತ ಹುಲ್ಲು, ಕುರುಚಲು ಗಿಡಗಳೊಳಗೆ ವನ್ಯಪ್ರಾಣಿಗಳು ಖುಷಿಯಿಂದ ಎಲ್ಲೆಂದರಲ್ಲಿ ಅಡ್ಡಾಡುತ್ತಾ ನಲಿದಾಡುತ್ತಿವೆ. ಜತೆಗೆ ಜನರನ್ನು ಕಾಣುವಾಗ ಅಚ್ಚರಿಯಿಂದ ನೆಗೆದು ಓಡುವ ದೃಶ್ಯಗಳು ಮನಮೋಹಕವಾಗಿವೆ.

ಕಳೆದ ಕೆಲವು ವರ್ಷಗಳಿಂದೀಚೆಗೆ ಅಗ್ನಿ ಅನಾಹುತದಿಂದ ಬೋಳಾಗಿದ್ದ ನಾಗರಹೊಳೆ ಹಸಿರಾಗಿದೆ. ಸತ್ತು ಹೋದ ಬಿದಿರುಗಳಿಂದ ಹುಟ್ಟಿ ಬಂದ ಮೊಳಕೆಗಳು ಮೆಳೆಗಳಾಗಿ ಬೆಳೆಯುತ್ತಾ ನಿಧಾನವಾಗಿ ಕಾಡನ್ನು ಆಕ್ರಮಿಸಿಕೊಳ್ಳುತ್ತಿವೆ. ಇದರಿಂದ ಮೈದಾನದಂತಿದ್ದ ಬಹುತೇಕ ಪ್ರದೇಶಗಳು ಹಸಿರಿನಿಂದ ಕಂಗೊಳಿಸಲಾರಂಭಿಸಿವೆ.

ನಾಗರಹೊಳೆ ಪ್ರಾಣಿಗಳ ಆವಾಸ ತಾಣ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಚೆಲುವು ಮೈಸೂರು ಮತ್ತು ಕೊಡಗಿಗೆ ವರದಾನವಾಗಿದ್ದು, ಸುಮಾರು 643 ಚ.ಕಿ.ಮೀ ವ್ಯಾಪ್ತಿಯಲ್ಲಿರುವ ಅರಣ್ಯವನ್ನು ವನ್ಯಪ್ರಾಣಿಗಳ ಆಹಾರ ಮತ್ತು ಕಾಡಿನ ರಕ್ಷಣೆ ದೃಷ್ಠಿಯಿಂದ ನಾಗರಹೊಳೆ, ಕಲ್ಲಹಳ್ಳ, ವೀರನಹೊಸಹಳ್ಳಿ, ಹುಣಸೂರು, ಆನೆಚೌಕೂರು, ಅಂತರಸಂತೆ, ಡಿ.ಬಿ.ಕುಪ್ಪೆ, ಮೇಟಿಕುಪ್ಪೆ ಹೀಗೆ ಎಂಟು ವಲಯಗಳಾಗಿ ವಿಂಗಡಣೆ ಮಾಡಲಾಗಿದೆ. ಅರಣ್ಯದ ನಡುವೆ ಹೆಮ್ಮರಗಳು, ಕುರುಚಲು ಕಾಡುಗಳು, ಬಿದಿರುಮೆಳೆಗಳು, ಕೆರೆ, ನದಿ, ತೊರೆ, ಬೆಟ್ಟ ಗುಡ್ಡ ಹೀಗೆ ಹತ್ತಾರು ಪ್ರಕೃತಿ ವಿಸ್ಮಯಗಳೊಂದಿಗೆ ಅಡಕವಾಗಿ ಕ್ರೂರ, ಸಾಧು ಪ್ರಾಣಿಗಳಿಗೆ ಆವಾಸ ಸ್ಥಾನಗಳಾಗಿದೆ.

ಹಸಿರ ವನಸಿರಿ ಕಣ್ಮನ ತಣಿಸುತ್ತಿದೆ ಈ ನಡುವೆ ಹಿಂಡು ಹಿಂಡಾಗಿ ಕಾಣುವ ಅಚ್ಚರಿಯ ನೋಟ ಬೀರುವ ಜಿಂಕೆಗಳ ದಂಡು, ಕಾಡುಕೋಣ, ಕಾಡಾನೆ, ನಿರ್ಭಯವಾಗಿ ಹೆಜ್ಜೆಹಾಕುವ, ಹುಲಿ, ಆಗೊಮ್ಮೆ ಈಗೊಮ್ಮೆ ಕಾಣುವ ಕರಿಚಿರತೆ ನಾಗರಹೊಳೆಯ ಖ್ಯಾತಿಯನ್ನು ಮತ್ತಷ್ಟು ಪಸರಿಸುವಂತೆ ಮಾಡಿದೆ.

ಈ ಬಾರಿ ಅರಣ್ಯದಲ್ಲಿರುವ ಚನ್ನಮ್ಮನಕಟ್ಟೆ, ಎರೆಕಟ್ಟೆ, ಮಂಟಳ್ಳಿಕೆರೆ, ಮಾದಳ್ಳಿಕಟ್ಟೆ ಮುದಗನೂರುಕೆರೆ, ಬಿಲ್ಲೆನಹೊಸಹಳ್ಳಿಕೆರೆ, ಭೀಮನಕಟ್ಟಿ, ಬಾಣೇರಿಕೆರೆ ಸೇರಿದಂತೆ ಹಲವು ಕೆರೆ-ಕಟ್ಟೆಗಳಲ್ಲಿ ಜಲವೃದ್ಧಿಯಾಗಿರುವುದು ಕಂಡು ಬರುತ್ತಿದೆ. ಸದ್ಯ ಹಸಿರು ಮೇವು ಸಮೃದ್ಧವಾಗಿರುವುದರಿಂದ ಸಸ್ಯಹಾರಿ ಪ್ರಾಣಿಗಳು ನೆಮ್ಮದಿಯಾಗಿ ಅರಣ್ಯದಲ್ಲಿ ವಿಹರಿಸುತ್ತಿವೆ. ಜತೆಗೆ ಪ್ರಾಣಿ, ಪಕ್ಷಿಗಳು ನೆಮ್ಮದಿಯಿಂದ ಬದುಕುತ್ತಿವೆ.