ಹಾಸನ: ಆಟವಾಡುತ್ತಾ ಕಾಣೆಯಾಗಿದ್ದ ಬಾಲಕನ ಶವ ರೈಲ್ವೆ ಹಳಿ ಸಮೀಪ ದೊರೆತಿದೆ. ಹಾಸನದ ಬಸವನಹಳ್ಳಿಯಲ್ಲಿ ಘಟನೆ ನಡೆದಿದೆ.
ಕುಶಾಲ್ ಗೌಡ (12) ಮೃತಪಟ್ಟ ಬಾಲಕ.
ಚಿಕ್ಕಹೊನ್ನೇನಹಳ್ಳಿಯ ವೆಂಕಟೇಶ್ ಹಾಗೂ ರೂಪಾ ದಂಪತಿಯ ಪುತ್ರ ಕುಶಾಲ್, ಜುಲೈ 9ರ ಸಂಜೆ ಮಕ್ಕಳೊಂದಿಗೆ ಕಣ್ಣಾಮುಚ್ಚಾಲೆ ಆಡುತ್ತಿದ್ದಾಗ ಬಚ್ಚಿಟ್ಟುಕೊಳ್ಳಲು ಹೋಗಿ ಕಾಣೆಯಾಗಿದ್ದ. ಮಗು ವಾಪಸ್ ಬಾರದ ಹಿನ್ನೆಲೆಯಲ್ಲಿ ಪೋಷಕರು ಗಾಬರಿಗೊಂಡು ಸಾಕಷ್ಟು ಹುಡುಕಾಟ ನಡೆಸಿದ್ದಾರೆ. ಇತ್ತೀಚೆಗೆ ಚಿರತೆ ಕಾಟ ಹೆಚ್ಚಾಗಿತ್ತು. ಹೀಗಾಗಿ, ಚಿರತೆ ಹೊತ್ತೊಯ್ದಿರಬಹುದು ಎಂಬ ಶಂಕೆಯಿಂದಲೂ ಪೋಷಕರ ಜೊತೆ ಅರಣ್ಯ ಇಲಾಖೆ ಸಿಬ್ಬಂದಿ ಶೋಧ ನಡೆಸಿದ್ದರು. ಆದರೆ, ಬಾಲಕ ಎಲ್ಲಿಯೂ ಪತ್ತೆಯಾಗಿರಲಿಲ್ಲ.
ಇದಾದ ಬಳಿಕ, ಮರುದಿನ ಜೂ.10ರ ಮಧ್ಯಾಹ್ನ ರೈಲ್ವೆ ಹಳಿ ಪಕ್ಕದಲ್ಲಿ ಬಾಲಕನ ಮೃತದೇಹ ಸಿಕ್ಕಿದೆ. ರೈಲು ಡಿಕ್ಕಿಯಾಗಿ ಸಾವನ್ನಪ್ಪಿರಬಹುದೆಂದು ಬಿಂಬಿಸಲು ಕೊಲೆ ಮಾಡಿ ಶವ ಎಸೆದಿರುವ ಶಂಕೆಯೂ ವ್ಯಕ್ತವಾಗಿದೆ.
ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಬೆರಳಚ್ಚು ತಜ್ಞರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













