ಮನೆ ಸ್ಥಳೀಯ ಆಷಾಢ ಮಾಸದ ವಿಶೇಷ ಪೂಜೆಗೆ ಚಾಮುಂಡಿ ಬೆಟ್ಟದಲ್ಲಿ ಸಿದ್ದತೆ: 25 ಸಾವಿರ ಮೈಸೂರು ಪಾಕ್​

ಆಷಾಢ ಮಾಸದ ವಿಶೇಷ ಪೂಜೆಗೆ ಚಾಮುಂಡಿ ಬೆಟ್ಟದಲ್ಲಿ ಸಿದ್ದತೆ: 25 ಸಾವಿರ ಮೈಸೂರು ಪಾಕ್​

0

ಮೈಸೂರು: ಪ್ರತಿ ವರ್ಷದಂತೆ ಈ ವರ್ಷವೂ ಆಷಾಢ ಮಾಸದ ಶುಕ್ರವಾರದಂದು ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ನೆರವೇರಲಿದೆ.

ಪ್ರತಿ ವರ್ಷ ಸಾವಿರಾರು ಭಕ್ತರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡಿಗೆ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದು ಪುನೀತರಾಗುತ್ತಾರೆ. ಆಷಾಢ ಶುಕ್ರವಾರದ ವಿಶೇಷ ಪೂಜೆಗೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ವಿಶೇಷ ಪೂಜೆಗಾಗಿ ಚಾಮುಂಡೇಶ್ವರಿ ಸೇವಾ ಸಮಿತಿ ವತಿಯಿಂದ 25 ಸಾವಿರ ಮೈಸೂರು ಪಾಕ್ ಸಿದ್ದಪಡಿಸಿದೆ.

ಶುಕ್ರವಾರ (ಜು.12) ರಂದು ಬೆಳಗ್ಗೆ 6 ಗಂಟೆಯಿಂದ ಸಾಯಂಕಾಲ 4 ಗಂಟೆಯವರೆಗೂ ಪ್ರಸಾದ ವಿನಿಯೋಗ ಮಾಡಲಾಗುತ್ತದೆ. ಮೈಸೂರು ಪಾಕ್​ಗೆ 200 ಕೆಜಿ ಕಡಲೆ‌ಹಿಟ್ಟು, 500 ಕೆಜಿ ಸಕ್ಕರೆ, 30 ಲೀಟರ್ ಎಣ್ಣೆ, 100 ಕೆಜಿ ತುಪ್ಪ 100 ಕೆಜಿ ಬೆಣ್ಣೆ ಕಾಯಿಸಿದ ತುಪ್ಪ, 3 ಕೆಜಿ ಏಲಕ್ಕಿ 2 ಕೆಜಿ ಅಡುಗೆ ಅರಿಶಿನ ಬಳಸಲಾಗುತ್ತಿದೆ. 40 ಜನ‌ ಬಾಣಸಿಗರು ಮೈಸೂರು ಪಾಕ್ ತಯಾರಿಸುತ್ತಿದ್ದಾರೆ.

ಚಾಮುಂಡಿ ಬೆಟ್ಟಕ್ಕೆ ಶನಿ, ಭಾನುವಾರವೂ ಖಾಸಗಿ ವಾಹನ ನಿಷೇಧ ಚಾಮುಂಡಿಬೆಟ್ಟದಲ್ಲಿ ಶುಕ್ರ, ಶನಿ, ಭಾನವಾರದಂದು ಆಷಾಢ ಮಾಸದ ವಿಶೇಷ ಪೂಜೆ ನೆರವೇರಲಿದೆ. ಹೀಗಾಗಿ, ಈ‌ ಬಾರಿ ಎಲ್ಲ ಆಷಾಢ ಶುಕ್ರವಾರ, ಶನಿವಾರ, ಭಾನುವಾರದಂದು ಖಾಸಗಿ ವಾಹನಗಳಿಗೆ ನಿರ್ಬಂಧಿಸಲಾಗಿದೆ. ಶುಕ್ರವಾರ ಮಾತ್ರ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಶನಿವಾರ ಮತ್ತು ಭಾನುವಾರ ಉಚಿತ ಬಸ್ ವ್ಯವಸ್ಥೆ ಇರುವುದಿಲ್ಲ.

ಜು.12, 13, 14, 19, 20, 21, 26, 27, 28 ಮತ್ತು ಆಗಸ್ಟ್​​ 02, 03 ಮತ್ತು 04ನೇ ತಾರೀಖಿನಂದು ಬೆಟ್ಟಕ್ಕೆ ಖಾಸಗಿ ವಾಹನಗಳನ್ನು ನಿರ್ಬಂಧಿಸಲಾಗಿದೆ. ಗಣ್ಯರು, ಕರ್ತವ್ಯನಿರತ ಸಿಬ್ಬಂದಿ, ಮಾಧ್ಯಮ ಹಾಗೂ ಚಾಮುಂಡಿ ಬೆಟ್ಟದ ನಿವಾಸಿಗಳಿಗೆ ವಿನಾಯತಿ ನೀಡಲಾಗಿದೆ. ಪ್ರಸಾದ ಹಂಚಲು ಚಾಮುಂಡಿ ಬೆಟ್ಟದ ಬಸ್ ನಿಲ್ದಾಣದ ಬಳಿ ವ್ಯವಸ್ಥೆ ಮಾಡಲಾಗಿದೆ. ಈ ಬಾರಿ ಚಾಮುಂಡಿ ಬೆಟ್ಟದಲ್ಲಿ ನಡೆಯುವ ಆಷಾಢ ಶುಕ್ರವಾರದ ಪೂಜೆಗೆ ಯಾವುದೇ ವಿಶೇಷ ಪಾಸ್‌ ಇರುವುದಿಲ್ಲ ಎಂದು ಪ್ರಭಾರ ಪೊಲೀಸ್ ಕಮಿಷನರ್ ಡಾ‌. ಎಂಬಿ ಬೋರಲಿಂಗಯ್ಯ ತಿಳಿಸಿದ್ದಾರೆ.