ಮನೆ ಕಾನೂನು ಪವರ್ ಟಿವಿಗೆ ಬಿಗ್ ರಿಲೀಫ್: ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ

ಪವರ್ ಟಿವಿಗೆ ಬಿಗ್ ರಿಲೀಫ್: ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ

0

ಬೆಂಗಳೂರು: ಲೈಸೆನ್ಸ್‌ ನವೀಕರಿಸಿಲ್ಲ ಎಂಬ ಕಾರಣಕ್ಕೆ ಪವರ್ ಟಿವಿ ಚಾನೆಲ್ ಯಾವುದೇ ಕಾರ್ಯಕ್ರಮ ಪ್ರಸಾರ ಮಾಡದಂತೆ ನಿರ್ಬಂಧಿಸಿದ್ದ ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ಸೋಮವಾರದವರೆಗೂ ತಡೆ ನೀಡಿದೆ.

Join Our Whatsapp Group

ಇದೇ ವೇಳೆ ಟಿವಿ ಚಾನೆಲ್ ಕಾರ್ಯಕ್ರಮ ನಿರ್ಬಂಧಿಸುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದ ಅರ್ಜಿದಾರರ ಉದ್ದೇಶ ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಕೂಡಿದೆ ಎಂದು ಸುಪ್ರೀಂ ಅಭಿಪ್ರಾಯಪಟ್ಟಿದೆ.

ಟಿವಿ ಚಾನೆಲ್ ಕಾರ್ಯಕ್ರಮ ಪ್ರಸಾರಕ್ಕೆ ನಿರ್ಬಂಧ ವಿಧಿಸಿದ್ದ ರಾಜ್ಯ ಹೈಕೋರ್ಟ್ ನ ಆದೇಶ ಪ್ರಶ್ನಿಸಿ ಪವರ್ ಟಿವಿ ಮುಖ್ಯಸ್ಥರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್, ನ್ಯಾಯಮೂರ್ತಿ ಜೆ.ಬಿ ಪರ್ದಿವಾಲ ಹಾಗೂ ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರಿದ್ದ ಪೀಠ ಈ ಆದೇಶ ಮಾಡಿದೆ.

ಪ್ರಕರಣದ ವಿಚಾರಣೆ ವೇಳೆ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದ ಸಿಜೆಐ ಚಂದ್ರಚೂಡ್, “ನಾವು ನಿಮ್ಮ ವಾದ ಕೇಳುತ್ತೇವೆ. ಇದು ರಾಜಕೀಯ ದ್ವೇಷ ಎಂಬುದು ನಮಗೆ ಮನವರಿಕೆಯಾಗುತ್ತದೆ. ನಾವು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸಲು ಒಲವು ತೋರುತ್ತೇವೆ. ಅವರು (ಅರ್ಜಿದಾರರು-ಹವರ್ ಟಿವಿ) ರಾಜ್ಯದಲ್ಲಿನ ಕೆಲವು ಲೈಂಗಿಕ ಕಿರುಕುಳದ ಆರೋಪಗಳನ್ನು ಪ್ರಸಾರ ಮಾಡಲು ಬಯಸಿದ್ದರು. ಅವರ ಬಾಯಿ ಮುಚ್ಚಿಸಲು ಇಂತಹ ಕ್ರಮಕ್ಕೆ ಮುಂದಾಗಿದ್ದಾರೆ. ಇದೊಂದು ಸಂಪೂರ್ಣ ರಾಜಕೀಯ ದ್ವೇಷವಲ್ಲದೆ ಮತ್ತೇನೂ ಅಲ್ಲ. ಆದ್ದರಿಂದ ಅವರ ಕೆಲಸ ಮಾಡಲು ಅನುಮತಿಸದಿದ್ದರೆ ನಮ್ಮ ಕರ್ತವ್ಯ ನಿಭಾಯಿಸುವಲ್ಲಿ ವಿಫಲರಾಗುತ್ತೇವೆ.’ ಎಂದಿದ್ದಾರೆ.

ಪ್ರಜ್ವಲ್ ರೇವಣ್ಣ ಹಾಗು ಸೂರಜ್ ರೇವಣ್ಣಗೆ ಸಂಬಂಧಿಸಿದ ಲೈಂಗಿಕ ಕಿರುಕುಳ ಆರೋಪ ಪ್ರಕರಣಗಳ ಕುರಿತಂತೆ ಪವರ್ ಟಿವಿ ನಿರಂತರ ಕಾರ್ಯಕ್ರಮ ಪ್ರಸಾರ ಮಾಡುತ್ತಿತ್ತು. ಈ ನಡುವೆ ಜೆಡಿಎಸ್ ಎಂಎಲ್ಸಿ ಎಚ್.ಎಮ್ ರಮೇಶ್ ಗೌಡ ಇತರರು ಚಾನೆಲ್ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದರು.

ಚಾನೆಲ್ ನ ಲೈಸೆನ್ಸ್ ನವೀಕರಿಸದೇ ಪವರ್ ಟಿವಿ ಕಾರ್ಯಕ್ರಮ ಪ್ರಸಾರ ಮಾಡುತ್ತಿರುವುದು ನಿಯಮಬಾಹಿರ ಎಂದು ವಾದಿಸಿದ್ದರು. ಜತೆಗೆ ಈ ಕುರಿತಂತೆ ಚಾನೆಲ್ ಗೆ ಕೇಂದ್ರ ಸರ್ಕಾರ ಶೋಕಾಸ್ ನೋಟಿಸ್ ಜಾರಿ ಮಾಡಿರುವುದನ್ನು ಹೈಕೋರ್ಟ್ ಗಮನಕ್ಕೆ ತಂದಿದ್ದರು. ವಾದ ಪರಿಗಣಿಸಿದ್ದ ಹೈಕೋರ್ಟ್ ಜೂ.26ರಂದು ಚಾನೆಲ್ ಗೆ ಯಾವುದೇ ಕಾರ್ಯಕ್ರಮ ಪ್ರಸಾರ ಮಾಡದಂತೆ ನಿರ್ಬಂಧಿಸಿ ಆದೇಶಿಸಿತ್ತು. ಏಕಸದಸ್ಯ ಪೀಠದ ಆದೇಶದಲ್ಲಿ ಮಧ್ಯಪ್ರವೇಶಿಸಲು ವಿಭಾಗೀಯ ಪೀಠ ನಿರಾಕರಿಸಿತ್ತು.

ಹೈಕೋರ್ಟ್ ಆದೇಶ ಪ್ರಶ್ನಿಸಿ ಪವರ್ ಟಿವಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಅಲ್ಲದೇ, ಕೇಂದ್ರ ಸರ್ಕಾರ ಚಾನೆಲ್ ಲೈಸೆನ್ಸ್ ನವೀಕರಿಸದ ವಿಚಾರವಾಗಿ ಶೋಕಾಸ್ ನೋಟಿಸ್ ನೀಡಿರುವ ಕಾರಣಕ್ಕೆ ಚಾನೆಲ್ ಕಾರ್ಯಕ್ರಮ ಪ್ರಸಾರ ಮಾಡದಂತೆ ಹೈಕೋರ್ಟ್ ನಿರ್ಬಂಧಿಸಿರುವುದು ಸಮಂಜಸವಲ್ಲ ಎಂದು ವಾದಿಸಿತ್ತು. ಸದ್ಯ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿರುವ ಸುಪ್ರೀಂಕೋರ್ಟ್ ಮುಂದಿನ ಸೋಮವಾರ ಪ್ರಕರಣದ ವಿಚಾರಣೆ ಮುಂದುವರೆಸಲಿದೆ.