ಶಿವಮೊಗ್ಗ: ವಾಲ್ಮೀಕಿ ನಿಗಮ ಪ್ರಕರಣದಲ್ಲಿ ಈಗಲೇ ಶಾಸಕ ನಾಗೇಂದ್ರ ಅವರನ್ನು ಆರೋಪಿ ಎಂದು ಹೇಳಲಾಗದು. ತನಿಖೆಯ ಪಟ್ಟಿಯಲ್ಲಿ ಅವರ ಹೆಸರು ಇರುವುದರಿಂದ ವಿಚಾರಣೆ ನಡೆಸಲಾಗುತ್ತಿದೆ. ಈ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ದುರುದ್ದೇಶದಿಂದ ಬಿಜೆಪಿ ಮೇಲೆ ಆರೋಪ ಮಾಡುತ್ತಿದೆ ಎಂದು ಶಿವಮೊಗ್ಗದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡೂವರೆ ವರ್ಷದ ಹಿಂದೆ ಅಧ್ಯಕ್ಷರಾಗಿದ್ದ ವೀರಯ್ಯ ಅವರ ಹೆಸರು ಥಳಕು ಹಾಕಲಾಗುತ್ತಿದೆ. ದಲಿತ ಮುಖಂಡನ ಮೇಲೆ ಆರೋಪ ಮಾಡಲಾಗುತ್ತಿದೆ. ಕಾಂಗ್ರೆಸ್ ನ ಸೇಡಿನ ರಾಜಕೀಯ ಜನರಿಗೆ ಅರ್ಥವಾಗುತ್ತದೆ. ನಾಳೆ ನಡೆಯುವ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಛೀಮಾರಿ ಹಾಕುವ ಕೆಲಸ ಮಾಡಲಿದ್ದೇವೆ ಎಂದರು.
ಎಲ್ಲಾ ವಿಭಾಗಗಳಲ್ಲೂ ಬೆಲೆ ಏರಿಕೆಯಾಗಿದೆ. ರೈತರ ಪ್ರೋತ್ಸಾಹ ಧನದ ಮೇಲೂ ಈ ಸರ್ಕಾರ ಕಣ್ಣು ಹಾಕಿದೆ. ಮುದ್ರಾಂಕ ಶುಲ್ಕ ಹೆಚ್ಚಳ ಮಾಡಿದ್ದಾರೆ. ಕರೆಂಟ್ ಬಿಲ್, ಅಬಕಾರಿ ಸುಂಕ, ಪೆಟ್ರೋಲ್ ಸುಂಕ, ಹಾಲಿನ ದರ ಏರಿಕೆ ಮಾಡಿದ್ದಾರೆ. ಈ ಸರ್ಕಾರದ ವಿರುದ್ಧ ಜನರು ಬೇಸರಗೊಂಡಿದ್ದಾರೆ ಎಂದು ರಾಘವೇಂದ್ರ ಹೇಳಿದರು.
ಹಾವೇರಿ ಬಳಿ ಅಪಘಾತವಾಗಿದ್ದ ಸುದ್ಧಿ ನಮಗೆ ಆಘಾತ ತಂದಿತ್ತು. ಭೀಕರ ಅಪಘಾತದಲ್ಲಿ 13 ಜನ ಅಸುನೀಗಿದ್ದರು. ಈ ಹಿಂದೆ ನಾವು ಈ ಕುಟುಂಬಕ್ಕೆ ಸಾಂತ್ವನ ಹೇಳುವ ಕೆಲಸ ಮಾಡಿದ್ದೆವು. ಈ ನೊಂದ ಕುಟುಂಬಕ್ಕೆ ಪರಿಹಾರ ನೀಡುವ ಮಾನವೀಯ ಕೆಲಸ ಮಾಡಿದ್ದೇವೆ. ನೊಂದಿರುವ ಕುಟುಂಬಕ್ಕೆ ಸಾಂತ್ವನ ಹೇಳಿದ್ದೇವೆ. ಬಿಜೆಪಿ ಪಕ್ಷದ ವತಿಯಿಂದ 15 ಲಕ್ಷ ರೂ. ಪರಿಹಾರ ನೀಡಿದ್ದೇವೆ ಎಂದರು.
ಇನ್ನೂ ಸಮಾಧಾನಕರ ಮಳೆ ಕೂಡ ಆಗಿಲ್ಲ. ಕೆರೆ, ಕಟ್ಟೆಗಳಿಗೆ ನೀರು ಸರಿಯಾಗಿ ಹರಿದಿಲ್ಲ. ಜನರು ನೆಮ್ಮದಿಯಿಂದ ಇಲ್ಲ. ಸರ್ಕಾರದ ವಿರುದ್ಧ ಛಾಟಿ ಬೀಸಲು ನಾಳೆ ನಡೆಯುವ ಅಧಿವೇಶನದಲ್ಲಿ ಹೋರಾಟ ಮಾಡಲು ನಮ್ಮ ಪಕ್ಷ ಸನ್ನದ್ಧವಾಗಿದೆ ಎಂದು ರಾಘವೇಂದ್ರ ಹೇಳಿದರು.