ಮನೆ ರಾಜ್ಯ ಮಲೆನಾಡಿನಲ್ಲಿ ಮುಂದುವರೆದ ಮಳೆ: ಮೈದುಂಬಿದ ತುಂಗಾ, ಭದ್ರಾ, ವರದಾ, ಕುಮದ್ವತಿ

ಮಲೆನಾಡಿನಲ್ಲಿ ಮುಂದುವರೆದ ಮಳೆ: ಮೈದುಂಬಿದ ತುಂಗಾ, ಭದ್ರಾ, ವರದಾ, ಕುಮದ್ವತಿ

0

ಶಿವಮೊಗ್ಗ: ಆಷಾಢದ ಮಳೆ, ಕುಳಿರ್ಗಾಳಿಯ ನಡುವೆ ಮಲೆನಾಡಿನಲ್ಲಿ ಜುಗಲ್ ಬಂದಿ ಸೋಮವಾರವೂ ಮುಂದುವರೆದಿದೆ. ಶಿವಮೊಗ್ಗ ಜಿಲ್ಲೆ ಇಡೀ ದಿನ ಮಳೆಯ ಮಜ್ಜನದ ಖುಷಿ ಅನುಭವಿಸಿತು.

Join Our Whatsapp Group

ಜಿಲ್ಲೆಯಲ್ಲಿ ಸೋಮವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಸರಾಸರಿ 3.94 ಸೆಂ.ಮೀ ಮಳೆ ಆಗಿದೆ. ಸಾಗರ ತಾಲ್ಲೂಕಿನಲ್ಲಿ ಅತಿಹೆಚ್ಚು ಸರಾಸರಿ 7.19 ಸೆಂ.ಮೀ ಮಳೆ ದಾಖಲಾಗಿದೆ. ಜಿಲ್ಲೆಯಲ್ಲಿ ಹೊಸನಗರ ತಾಲ್ಲೂಕಿನ ಚಕ್ರಾದಲ್ಲಿ 14 ಸೆಂ.ಮೀ ಅತಿಹೆಚ್ಚು ಮಳೆ ಬಿದ್ದಿದೆ. ಉಳಿದಂತೆ  ಮಾಸ್ತಿಕಟ್ಟೆ 13.5, ಹುಲಿಕಲ್ 13.2, ಸಾವೇಹಕ್ಲು 12.5 ಹಾಗೂ ಮಾಣಿ 10.2 ಸೆಂ.ಮೀ ಮಳೆ ಸುರಿದಿದೆ.

ಮಳೆಯ ಆರ್ಭಟಕ್ಕೆ ತುಂಗಾ, ಭದ್ರೆ, ವರದಾ, ಕುಮದ್ವತಿ, ಶರಾವತಿ ಮೈದುಂಬಿವೆ. ಗಾಜನೂರಿನ ತುಂಗಾ ಜಲಾಶಯ ಭರ್ತಿ ಆಗಿರುವುದರಿಂದ 21 ಕ್ರಸ್ಟ್‌ ಗೇಟ್ ಗಳನ್ನೂ ತೆರೆಯಲಾಗಿದೆ. ಜಲಾಶಯಕ್ಕೆ 33 ಸಾವಿರ ಕ್ಯುಸೆಕ್ ಒಳಹರಿವು ಇದ್ದು, ಅಷ್ಟೇ ಪ್ರಮಾಣದ ನೀರನ್ನು ನದಿಗೆ ಹರಿಸಲಾಗುತ್ತಿದೆ. ಇದರಿಂದ ತುಂಗಾ ನದಿ ಶಿವಮೊಗ್ಗದಲ್ಲಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ.

ಲಕ್ಕವಳ್ಳಿಯ ಭದ್ರಾ ಹಾಗೂ ಕಾರ್ಗಲ್‌ನ  ಲಿಂಗನಮಕ್ಕಿ ಜಲಾಶಯಗಳಿಗೆ ಒಳಹರಿವು ಸತತವಾಗಿ ಏರುತ್ತಲೇ ಇದೆ. 

ಲಿಂಗನಮಕ್ಕಿ ಒಳಹರಿವು ಭಾರೀ ಏರಿಕೆ: ಲಿಂಗನಮಕ್ಕಿ ಜಲಾಶಯಕ್ಕೆ  45,115 ಕ್ಯುಸೆಕ್ ಒಳಹರಿವು ದಾಖಲಾಗಿದೆ. ಭಾನುವಾರ ಜಲಾಶಯಕ್ಕೆ 36,197 ಕ್ಯುಸೆಕ್ ಇತ್ತು. ಲಿಂಗನಮಕ್ಕಿ ಜಲಾಶಯದ ಗರಿಷ್ಠ ನೀರಿನ ಸಂಗ್ರಹ 1819 ಅಡಿ. ಸದ್ಯ ಜಲಾಶಯದಲ್ಲಿ 1778.2 ಅಡಿ ನೀರಿನ ಸಂಗ್ರಹ ಇದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1755.3‌ ಅಡಿ ನೀರಿನ ಸಂಗ್ರಹ ಇತ್ತು.

ಕಾರ್ಗಲ್ ಸುತ್ತಲೂ ಮಳೆಯಾಗುತ್ತಿರುವುದರಿಂದ ಜೋಗ ಜಲಪಾತದ ಚೆಲುವು ಇಮ್ಮಡಿಗೊಂಡಿದೆ. ಪ್ರವಾಸಿಗರ ಕೈ ಬೀಸಿ ಕರೆಯುತ್ತಿದೆ.

ಭದ್ರಾ ಜಲಾಶಯ, ಕಳೆದ ವರ್ಷದಷ್ಟೇ ನೀರಿನ ಸಂಗ್ರಹ:

ಭದ್ರಾ ಜಲಾಶಯಕ್ಕೆ 16,041 ಕ್ಯುಸೆಕ್ ಇತ್ತು. ಹಿಂದಿನ ದಿನ ಜಲಾಶಯಕ್ಕೆ 14,150 ಕ್ಯುಸೆಕ್ ನೀರು ಹರಿದು ಬರುತ್ತಿತ್ತು. ಈ ಬಾರಿ ಮಳೆ ಕೊರತೆಯಿಂದ ದಾಖಲೆಯ ಮಟ್ಟದಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿತ್ತು. ಈಗ ಜಲಾಶಯ ಭರ್ತಿ ಆಗುತ್ತಿರುವುದು ಅಚ್ಚುಕಟ್ಟು ಪ್ರದೇಶದ ರೈತರಲ್ಕಿ ಜಲಾಶಯ ಭರ್ತಿ ಆಗುವ ಆಶಾಭಾವನೆ‌ ಮೂಡಿಸಿದೆ. 186 ಅಡಿ ನೀರಿನ ಸಂಗ್ರಹ ಸಾಮರ್ಥ್ಯದ ಭದ್ರಾ ಜಲಾಶಯದಲ್ಲಿ ಸದ್ಯ 141.3 ಅಡಿ ನೀರಿನ ಸಂಗ್ರಹ ಇದೆ. ಜಲಾಶಯ ಭರ್ತಿ ಆಗಲು ಇನ್ನೂ 45 ಅಡಿ ನೀರಿನ ಸಂಗ್ರಹ ಆಗಬೇಕಿದೆ. ವಿಶೇಷವೆಂದರೆ ಕಳೆದ ವರ್ಷವೂ ಇದೇ ಅವಧಿಯಲ್ಲಿ ಜಲಾಶಯದಲ್ಲಿ ಇಷ್ಟೇ ನೀರಿನ ಸಂಗ್ರಹ (141.3 ಅಡಿ) ಇತ್ತು.

ವರದಾ ನದಿ ಕೂಡ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಸಾಗರ ತಾಲೂಕಿನಲ್ಲಿ ನೂರಾರು ಎಕರೆ ಭತ್ತದ ಗದ್ದೆ ಜಲಾವೃತವಾಗಿವೆ. ಕುಮದ್ವತಿಯಲ್ಲೂ ನೀರಿನ ಹರಿವು ಹೆಚ್ಚಾಗಿದ್ದು, ಶಿಕಾರಿಪುರ ತಾಲ್ಲೂಕಿನ ಅಂಜನಾಪುರ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ.