ಬಾಗಲಕೋಟೆ : ಕಾರ್ಮಿಕ ಇಲಾಖೆ ಗುತ್ತಿಗೆ ನೌಕರ ದ್ಯಾವಪ್ಪ ತಳವಾರ ವಿರುದ್ಧ ಹಣ ದುರ್ಬಳಕೆ ಆರೋಪ ಕೇಳಿ ಬಂದಿದೆ. 2 ಕೋಟಿ 83 ಲಕ್ಷ 400 ರೂ. ದುರ್ಬಳಕೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಬಾಗಲಕೋಟೆ ಕಾರ್ಮಿಕ ಇಲಾಖೆಯಲ್ಲಿ ಕಾರ್ಯನಿರ್ವಾಹಕನಾಗಿದ್ದ ದ್ಯಾವಪ್ಪ ಎನ್ನುವವರು 2 ಕೋಟಿ 83 ಲಕ್ಷ ಹಣವನ್ನು ಫಲಾನುಭವಿಗಳ ಹೆಸರಲ್ಲಿ ಇತರೆ ಖಾತೆಗಳಿಗೆ ವರ್ಗಾಯಿಸಿ ವಂಚನೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಅಕ್ರಮದ ಬಗ್ಗೆ ಮಾಹಿತಿ ಸಿಕ್ಕಿದ್ದು 2 ಕೋಟಿ 83 ಲಕ್ಷ ಪೈಕಿ 37 ಲಕ್ಷ ಹಣ ವಾಪಸ್ ಪಡೆಯಲಾಗಿದೆ. ಹಾಗೂ ಬ್ಯಾಂಕ್ ಖಾತೆಯಲ್ಲಿದ್ದ 76 ಲಕ್ಷ ಹಣವನ್ನು CEN ಪೊಲೀಸರು ಫ್ರೀಜ್ ಮಾಡಿದ್ದಾರೆ. 8 ತೊಲೆ ಚಿನ್ನ, 1 ಲಕ್ಷ ಹಣ, 8 ಲಕ್ಷ ಮೌಲ್ಯದ ಜಮೀನು ಪತ್ರ ಜಪ್ತಿ ಮಾಡಲಾಗಿದೆ.
ಕಾರ್ಮಿಕ ಇಲಾಖೆಯಲ್ಲಿ ಗುತ್ತಿಗೆಯ ಆಧಾರದ ಮೇಲೆ ಕಾರ್ಯನಿರ್ವಾಹಕನಾಗಿದ್ದ ದ್ಯಾವಪ್ಪ ತಳವಾರ 2023 ಆಗಸ್ಟ್ರಿಂದ 2024 ಫೆಬ್ರವರಿ ನಡುವೆ ಅಕ್ರಮ ಎಸಗಿದ್ದು ಈಗ ಅಕ್ರಮ ಬಹಿರಂಗವಾಗಿದೆ. ಕಟ್ಟಡ ಕಾರ್ಮಿಕರ ಮದುವೆ, ವೈದ್ಯಕೀಯ ಸಹಾಯಧನ ದುರ್ಬಳಕೆ, ಬೇರೆ ಖಾತೆಗಳಿಗೆ ಅನುದಾನ ಮಂಜೂರು ಮಾಡಿಸಿಕೊಂಡು ಹಣ ನುಂಗಿರೋದು ಪತ್ತೆಯಾಗಿದೆ.
ಬೇರೆಯವರ ಬ್ಯಾಂಕ್ ಖಾತೆ ನೀಡಿ ಫಲಾನುಭವಿ ಪಟ್ಟಿ ಸಿದ್ದಪಡಿಸಿಕೊಂಡು ನಂತರ ಕಾರ್ಮಿಕ ಅಧಿಕಾರಿಗಳ ಸಹಿ ಪಡೆದು ಬೇರೆ ಖಾತೆಗಳಿಗೆ ಅನುದಾನ ಮಂಜೂರು ಮಾಡಿಸಿಕೊಂಡು ಆ ಹಣವನ್ನು ಡ್ರಾ ಮಾಡಿಸಿಕೊಂಡು ವಂಚನೆ ಮಾಡಿದ್ದಾನೆ. 37,12,837 ರೂ ವಂಚನೆ ಹಿನ್ನೆಲೆ ಎಫ್ಐಆರ್ ದಾಖಲಾಗಿದೆ.
ಎಫ್ಐಆರ್ ನಲ್ಲಿ ಇದಷ್ಟೇ ಅಲ್ಲದೇ ಕೋಟ್ಯಾಂತರ ರೂ ತನ್ನ ಹಾಗೂ ಇತರೆ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾನೆಂದು ಉಲ್ಲೇಖಿಸಲಾಗಿದೆ. ಫಲಾನುಭವಿಗಳ ಪಟ್ಟಿಯಲ್ಲಿ ತಮ್ಮ ಸಂಬಂಧಿಕರ, ಆಪ್ತರ ಖಾತೆ ಸೇರಿಸಿ 37,12,837 ರೂ ವಂಚನೆ ಮಾಡಿದ್ದು ತನ್ನ ಖಾತೆ ಹಾಗೂ ಸಂಬಂಧಿಕರಾದ ಭಾಗೀರಥಿ ತಳವಾರ, ಹನುಮಾನ ತಳವಾರ, ಪಲ್ಲವಿ ತಳವಾರ ಖಾತೆಗೆ ಹಣ ಬಿಡುಗಡೆ ಮಾಡಿದ್ದಾನೆ. ನಂತರ ಆ ಹಣ ಪಡೆದು ಕಾರ್ಮಿಕ ಇಲಾಖೆಗೆ ಮೋಸ ಮಾಡಿದ್ದಾನೆ ಎಂದು ಉಲ್ಲೇಖಿಸಲಾಗಿದೆ.
ಅಕ್ರಮದ ಬಗ್ಗೆ ಉಪಕಾರ್ಮಿಕ ಆಯುಕ್ತ ಡಿ.ಜಿ.ನಾಗೇಶ್ ದೂರು ಹಿನ್ನೆಲೆ ಆರೋಪಿ ದ್ಯಾವಪ್ಪ ತಳವಾರ, ಸಂಬಂಧಿಕರಾದ ಭಾಗೀರಥಿ ತಳವಾರ, ಹನುಮಾನ ತಳವಾರ, ಪಲ್ಲವಿ ತಳವಾರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಫೆ.29ರಂದು ಬಾಗಲಕೋಟೆ ಸಿಇಎನ್ ಠಾಣೆಯಲ್ಲಿ ನಾಲ್ವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಸದ್ಯ ನಾಲ್ವರು ಆರೋಪಿಗಳು ಜಾಮೀನಿನ ಮೇಲೆ ಹೊರ ಬಂದಿದ್ದಾರೆ.