ಬೆಂಗಳೂರು (Bengaluru)- ವಿಧಾನಪರಿಷತ್ ಚುನಾವಣೆಗೆ ಇಂದು ರಾತ್ರಿ ಅಥವಾ ನಾಳೆ ಬೆಳಿಗ್ಗೆ ಹೊತ್ತಿಗೆ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ಸಮ್ಮುಖದಲ್ಲಿ ಅಭ್ಯರ್ಥಿ ಹೆಸರು ಘೋಷಣೆ ಆಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದರು.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಮಪತ್ರ ಸಲ್ಲಿಸಲು ನಾಳೆ ಕೊನೆ ದಿನವಾಗಿದ್ದು, ಎರಡು, ಮೂರು ಅಭ್ಯರ್ಥಿಗಳು ಇದ್ದಾರೆ. ಇಂದು ರಾತ್ರಿ ಅಥವಾ ನಾಳೆ ಬೆಳಿಗ್ಗೆ ಹೊತ್ತಿಗೆ ಹೆಸರು ಘೋಷಣೆ ಮಾಡಲಾಗುವುದು ಎಂದರು.
ಸಿ.ಎಂ.ಇಬ್ರಾಹಿಂ ಅವರು ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಜೆಡಿಎಸ್ ರಾಜ್ಯಾಧ್ಯಕ್ಷರಾಗಿರುವ ಅವರು ಪಕ್ಷ ಸಂಘಟನೆಗಾಗಿ ಪಕ್ಷದ ತೀರ್ಮಾನಕ್ಕೆ ಎಲ್ಲಾ ರೀತಿ ಸಹಮತ ಇರುತ್ತದೆ ಎಂದು ಹೇಳಿದ್ದರು. ರಾತ್ರಿ ಅಥವಾ ನಾಳೆ ಬೆಳಿಗ್ಗೆ ತೀರ್ಮಾನ ಮಾಡಿ ಅಭ್ಯರ್ಥಿ ಘೋಷಣೆ ಮಾಡುತ್ತೇವೆ ಎಂದರು.
ನಮ್ಮಲ್ಲಿ ಸಮಸ್ಯೆ ಏನು ಇಲ್ಲ. ರಾಜ್ಯಸಭೆ ಚುನಾವಣೆಗೆ ಇನ್ನು ಸಮಯ ಇದೆ. ಅಲ್ಲೂ ಮೂರ್ನಾಲ್ಕು ಜನ ಆಕಾಂಕ್ಷಿಗಳು ಇದ್ದಾರೆ. ಯಾರಲ್ಲೂ ಅಸಮಾಧಾನ ಇಲ್ಲ. ಎಲ್ಲರ ಸಹಮತದೊಂದಿಗೆ ನಾನು, ಇಬ್ರಾಹಿಂ ಹಾಗೂ ವರಿಷ್ಠ ನಾಯಕರಾದ ದೇವೇಗೌಡರು ಚರ್ಚೆ ಮಾಡುತ್ತೇವೆ. ದೇವೇಗೌಡರ ತೀರ್ಮಾನವೇ ಅಂತಿಮ ಎಂದು ಹೇಳಿದರು.
ನೀವೇ (ಮಾಧ್ಯಮಗಳು) ಟಿ.ಎ.ಶರವಣ, ವೀರೇಂದ್ರ ಅಂತ ಹೆಸರು ಪ್ರಸಾರ ಮಾಡುತ್ತಿದ್ದಿರಾ, ರಾತ್ರಿಯೊಳಗೆ ತೀರ್ಮಾನ ಮಾಡಲಾಗುತ್ತದೆ ಎಂದ ಅವರು, ಎಂಟತ್ತು ಜನರ ಒತ್ತಡ ಇತ್ತು. ದಾಸರಹಳ್ಳಿ ಕ್ಷೇತ್ರದ ಅಂದಾನಪ್ಪ ಕೂಡ ಹಿರಿಯ ನಾಯಕರು. ಕೋಲಾರದಲ್ಲಿ ರಾಜೇಶ್ವರಿ ಅವರು ಆಕಾಂಕ್ಷಿಗಳಾಗಿದ್ದಾರೆ. ನಾರಾಯಣಸ್ವಾಮಿ ಅವರು ಕೂಡ ಹಳೆಯವರು. ಆದರೆ ಅಂತಿಮವಾಗಿ ಅಭ್ಯರ್ಥಿ ಯಾರು ಎಂಬುದನ್ನು ರಾತ್ರಿ ತೀರ್ಮಾನ ಮಾಡುತ್ತೇವೆ ಎಂದು ಅವರು ಹೇಳಿದರು.
ಹೊರಟ್ಟಿ ವಿರುದ್ಧ ಜೆಡಿಎಸ್ ಅಭ್ಯರ್ಥಿ ಕಣಕ್ಕೆ
ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಪ್ರತಿನಿಧಿಸುತ್ತಿದ್ದ ಕ್ಷೇತ್ರ
ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಶ್ರೀಶೈಲ ನಿಂಗಪ್ಪ ಗಡದಿನ್ನಿ ಅಭ್ಯರ್ಥಿಯಾಗಿ ಮಾಡಲಾಗಿದೆ. ಇನ್ನು ವಾಯುವ್ಯ ಶಿಕ್ಷಕರ ಕ್ಷೇತ್ರದಿಂದ ಚಂದ್ರಶೇಖರ ಇ. ಲೋಣಿ ಅಭ್ಯರ್ಥಿಯಾಗಿದ್ದಾರೆ.
ನಾನು ಸಿಎಂ ಆಗಿದ್ದಾಗ ಶಿಕ್ಷಕರ ಕ್ಷೇತ್ರಕ್ಕೆ ಅಪಾರ ಕೊಡುಗೆ ಕೊಟ್ಟಿದ್ದೇನೆ. ಜೂನ್ 3 ರ ನಂತರ ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ನಾನೇ ಎರಡು ದಿನಗಳ ಪ್ರವಾಸ ಮಾಡುತ್ತೇನೆ. ಅಲ್ಲಿ ಶಿಕ್ಷಕರ ಬಳಿ ಮತಯಾಚನೆ ಮಾಡುತ್ತೇನೆ ಎಂದು ಹೇಳಿದರು.
ನಮ್ಮ ಪಕ್ಷದಿಂದ ಬಿಟ್ಟು ಹೊರಟ್ಟಿ ಅವರು ಬಿಜೆಪಿಗೆ ಹೋಗಿ ಅಲ್ಲಿ ಚುನಾವಣೆಗೆ ನಿಂತಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಅವರಿಗೆ ಯಾವ ರೀತಿ ನ್ಯಾಯ ಸಿಕ್ಕಿದೆ ಎಂಬುದು ಗೊತ್ತಿಲ್ಲ. ನಾವು ಹಿಂದೆ ಸರಿಯುವುದಿಲ್ಲ ಎಂದರು.
ಇತ್ತೀಚೆಗೆ ನಡೆದ ಒಂದು ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ
ನನ್ನ ಮೇಲಿನ ಒತ್ತಡ ಕಡಿಮೆ ಮಾಡಬೇಕೆಂದು ಎಲ್ಲರು ತೀರ್ಮಾನ ಮಾಡಿದ್ದಾರೆ. ಜೂನ್ ತಿಂಗಳ ಬಳಿಕ ಜವಾಬ್ದಾರಿ ನೀಡಲಾಗುತ್ತದೆ ಎಂದು ಹೇಳಿದರು.
ಸೆಸ್ ಕಡಿಮೆ ಮಾಡಲಿ:
ಪೆಟ್ರೋಲ್, ಡೀಸೆಲ್ ಬೆಲೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಅವರು, ಅಬಕಾರಿ ಸುಂಕ ಕಡಿಮೆ ಮಾಡಿರುವ ಬಗ್ಗೆ ಗೊಂದಲ ಇತ್ತು. ಈ ಮೂಲಕ ಕೇಂದ್ರ ಸರ್ಕಾರದ 15 ನೇ ಹಣಕಾಸಿನ ನೀತಿ ಏನಿತ್ತು. ಅನುದಾನ ಏನಿದೆ ಅದರಲ್ಲಿ ರಾಜ್ಯ ಸರ್ಕಾರದ ಮೇಲೆ ಹೆಚ್ಚಿನ ಒತ್ತಡ ಹಾಕಿದ್ದಾರೆ ಎನ್ನಲಾಗಿತ್ತು. ಆದರೆ ಇಂದು ಅದರ ಹೆಚ್ಚಿನ ಒತ್ತಡವನ್ನು ನಾವೇ ಹೊರಿಸಿಕೊಳ್ತೀವಿ ಅಂತ ಹೇಳಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಾವೋಸ್ ಪ್ರವಾಸದಲ್ಲಿ ಇದ್ದು ಬಂದ ಮೇಲೆ ನಿರ್ಧಾರ ಮಾಡುತ್ತೇನೆ ಅಂದಿದ್ದಾರೆ. ಆದರೆ ಈ ಸೆಸ್ ಕಡಿಮೆ ಮಾಡುವುದು ಉತ್ತಮ ಎಂದು ಅಭಿಪ್ರಾಯಪಟ್ಟರು.