ಹೊಸಕೋಟೆ: ಡ್ರಗ್ ಪೆಡ್ಲರ್ ಓರ್ವನನ್ನು ಪೊಲೀಸರು ಹಿಡಿಯಲು ಹೋಗಿದ್ದು, ಈ ವೇಳೆ ಆತ ಪೊಲೀಸರ ಮೇಲೆಯೇ ತಲ್ವಾರ್ ನಿಂದ ಹಲ್ಲೆ ನಡೆಸಲು ಮಾಡಲು ಮುಂದಾಗಿದ್ದಾನೆ. ಪೊಲೀಸರು ಗುಂಡು ಹಾರಿಸಿ, ಆರೋಪಿಯನ್ನು ಅರೆಸ್ಟ್ ಮಾಡಿರುವ ಘಟನೆ ಹೊಸಕೋಟೆ ಟೋಲ್ ಪ್ಲಾಜಾ ಸಮೀಪ ಮಂಗಳವಾರ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ನಡೆದಿದೆ.
ಟೋಲ್ ಪ್ಲಾಜಾ ಸಮೀಪ ಮೂವರು ವ್ಯಕ್ತಿಗಳು ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿರುವ ಮಾಹಿತಿ ಪಡೆದ ಹೊಸಕೋಟೆ ಇನ್ಸ್ ಪೆಕ್ಟರ್ ಅಶೋಕ್ ನೇತೃತ್ವದ ತಂಡ ಸ್ಥಳಕ್ಕೆ ತೆರಳುತ್ತಿದ್ದಂತೆ ಸ್ಕೂಟರ್ ನಲ್ಲಿ ಬಂದಿದ್ದ ಡ್ರಗ್ ಪೆಡ್ಲರ್ ಸೈಯದ್ ಸುಹೇಲ್ ಎಂಬಾತ ತನ್ನಲ್ಲಿದ್ದ ಮಾರಕಾಸ್ತ್ರದಿಂದ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ಆತ್ಮರಕ್ಷಣೆಗಾಗಿ ಇನ್ಸ್‌ಪೆಕ್ಟರ್ ಅಶೋಕ್, ಆರೋಪಿಯ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಾಗರಾಜ್ ತಿಳಿಸಿದ್ದಾರೆ.
ಆರೋಪಿ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆಯಲಾಗಿದೆ. ತಕ್ಷಣ ಆತನನ್ನು ಹೊಸಕೋಟೆ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಎಂ.ವಿ.ಜೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಬಂಧಿತ ಡ್ರಗ್ ಪೆಡ್ಲರ್ ಈ ಹಿಂದೆ ಯಲಹಂಕ ಪೊಲೀಸರ ಮೇಲೂ ಹಲ್ಲೆ ನಡೆಸಿ ಪರಾರಿಯಾಗಿದ್ದ ಎಂದು ಅವರು ಮಾಹಿತಿ ನೀಡಿದರು.
ಪೊಲೀಸರು ಬಂಧಿಸಲು ಹೋದ ವೇಳೆ ಹಲ್ಲೆ ನಡೆಸುವ ಚಾಳಿ ಇಟ್ಟುಕೊಂಡಿದ್ದ. ನಿನ್ನೆಯೂ ಸಹ ಅದೇ ರೀತಿ ಹಲ್ಲೆಗೆ ಮುಂದಾದಾಗ ಫೈರಿಂಗ್ ಮಾಡಲಾಗಿದೆ. ಆತನ ಮೇಲೆ ಹೊಸಕೋಟೆ ಠಾಣೆಯಲ್ಲಿ ರೌಡಿ ಶೀಟರ್ ತೆರೆಯಲಾಗಿದೆ. ಈ ಹಿಂದೆ 10 ಬೈಕ್ ಗಳನ್ನು ಕೂಡ ಈತನಿಂದ ವಶಕ್ಕೆ ಪಡೆದುಕೊಳ್ಳಲಾಗಿದೆ. ಈತ ಹೊರರಾಜ್ಯಗಳಿಂದ ಗಾಂಜಾ ಖರೀದಿಸಿ ಹೊಸಕೋಟೆ ಟೋಲ್ ಬಳಿ ಮಾರಾಟ ಮಾಡುತ್ತಿದ್ದ ಎಂದು ತಿಳಿಸಿದರು.