ಮನೆ ಕಾನೂನು ವಿವಿಧ ಹೈಕೋರ್ಟ್‌ ಗಳಿಗೆ ಸಿಜೆ ನೇಮಿಸುವಾಗ ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿಗಳ ಅವಗಣನೆ: ಸಿಜೆಐಗೆ ರಂಗನಾಥ್‌ ಪತ್ರ

ವಿವಿಧ ಹೈಕೋರ್ಟ್‌ ಗಳಿಗೆ ಸಿಜೆ ನೇಮಿಸುವಾಗ ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿಗಳ ಅವಗಣನೆ: ಸಿಜೆಐಗೆ ರಂಗನಾಥ್‌ ಪತ್ರ

0

ದೇಶಾದ್ಯಂತ ಇರುವ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿಗಳನ್ನು ಪರಿಗಣಿಸದಿರುವುದಕ್ಕೆ ಕಳವಳ ವ್ಯಕ್ತಪಡಿಸಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಅವರಿಗೆ ಬೆಂಗಳೂರು ವಕೀಲರ ಸಂಘದ (ಎಎಬಿ) ಮಾಜಿ ಅಧ್ಯಕ್ಷ ಎ ಪಿ ರಂಗನಾಥ ಪತ್ರ ಬರೆದಿದ್ದಾರೆ.

Join Our Whatsapp Group

ಸಾರ್ವಜನಿಕ ಹಿತಾಸಕ್ತಿ ಹೊಂದಿರುವ ವಕೀಲನಾಗಿ ಮತ್ತು ಎಎಬಿಯ ಮಾಜಿ ಅಧ್ಯಕ್ಷನಾಗಿ ನ್ಯಾಯಯುತ ಮತ್ತು ಸಮಾನ ನ್ಯಾಯದಾನದ ದೃಷ್ಟಿಯಿಂದ ಈ ವಿಚಾರದಲ್ಲಿ ನಿಮ್ಮ ಗಮನಸೆಳೆಯುವ ತುರ್ತು ಪರಿಗಣಿಸಿ ಪತ್ರ ಬರೆಯುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ಕರ್ನಾಟಕ ಹೈಕೋರ್ಟ್‌ನಿಂದ ಹಲವು ಅರ್ಹ ಮತ್ತು ಅನುಭವಿ ನ್ಯಾಯಮೂರ್ತಿಗಳು ಹೊರಹೊಮ್ಮಿದ್ದು, ಕಾನೂನು ಪಾಂಡಿತ್ಯ, ನ್ಯಾಯಾಂಗ ಮನೋಧರ್ಮ ಮತ್ತು ಸಂವಿಧಾನ ಎತ್ತಿ ಹಿಡಿಯುವ ನಿಟ್ಟಿನಲ್ಲಿ ಅವರು ಅಗ್ರಗಣ್ಯರಾಗಿದ್ದಾರೆ. ಅದಾಗ್ಯೂ, ಇತ್ತೀಚಿನ ವರ್ಷಗಳಲ್ಲಿ ಬೇರೆ ಹೈಕೋರ್ಟ್‌ಗಳಿಗೆ ಮುಖ್ಯ ನ್ಯಾಯಮೂರ್ತಿಗಳನ್ನು ನೇಮಕ ಮಾಡುವಾಗ ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿಗಳ ಹಿರಿತನ ಮತ್ತು ಅರ್ಹತೆಯು ಇತರೆ ನ್ಯಾಯಮೂರ್ತಿಗಳಿಗಿಂತ ಹೆಚ್ಚಿದ್ದರೂ ಅವರನ್ನು ಪರಿಗಣಿಸಲಾಗುತ್ತಿಲ್ಲ ಎಂದು ಬೇಸರಿಸಿದ್ದಾರೆ.

ಈ ವಿದ್ಯಮಾನವು ಸಮಸ್ಯಾತ್ಮಕವಾಗಲಿದ್ದು, ನ್ಯಾಯಾಂಗದ ಅತ್ಯುನ್ನತ ಸ್ಥಾನದಲ್ಲಿನ ವೈವಿಧ್ಯತೆ ಮತ್ತು ಪ್ರಾದೇಶಿಕ ಪ್ರಾತಿನಿಧ್ಯದ ಕೊರತೆಯನ್ನು ಸೂಚಿಸುತ್ತದೆ. ಹೈಕೋರ್ಟ್‌ನ ಒಟ್ಟಾರೆ ಕಾರ್ಯಾಚರಣೆ ಮತ್ತು ದೂರದರ್ಶಿತ್ವದ ದೃಷ್ಟಿಯಿಂದ ಮುಖ್ಯ ನ್ಯಾಯಮೂರ್ತಿ ಪಾತ್ರವು ಅತಿ ಮುಖ್ಯವಾಗಿದೆ. ಈ ಹುದ್ದೆಗಳಿಗೆ ಅರ್ಹ ನ್ಯಾಯಮೂರ್ತಿಗಳನ್ನು ನೇಮಕ ಮಾಡಲು ವಿಫಲವಾಗುವುದರಿಂದ ಆ ಸ್ಥಾನಕ್ಕೆ ಅವರು ತರಬಹುದಾದ ಮೌಲ್ಯಯುತ ದೃಷ್ಟಿಕೋನ ಮತ್ತು ಹೊಳಹುಗಳಿಂದ ನ್ಯಾಯಾಂಗ ವಂಚಿತವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಹಿರಿತನ, ಅರ್ಹತೆ ಮತ್ತು ಪ್ರಾದೇಶಿಕ ಸಮಾನತೆ ವಿಚಾರಗಳನ್ನು ಒಳಗೊಂಡಿರುವುದರಿಂದ ನ್ಯಾಯಾಂಗ ನೇಮಕಾತಿ ಪ್ರಕ್ರಿಯೆ ಸಂಕೀರ್ಣವಾಗಿದೆ ಎಂಬುದರ ಬಗ್ಗೆ ನನಗೆ ಅರಿವಿದೆ. ಅಸಮಾನತೆ ತೊಡೆದು ಹಾಕುವ ನಿಟ್ಟಿನಲ್ಲಿ ಕೊಲಿಜಿಯಂನ ಮುಖ್ಯಸ್ಥರಾದ ತಾವು ಈ ವಿಚಾರವನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿ, ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸುತ್ತೇನೆ. ಇದಕ್ಕೆ ಅತ್ಯಂತ ಹೆಚ್ಚು ಪಾರದರ್ಶಕ ಮತ್ತು ಎಲ್ಲರನ್ನೂ ಒಳಗೊಳ್ಳುವ ಆಯ್ಕೆ ಪ್ರಕ್ರಿಯೆ ಅಗತ್ಯವಿದ್ದು ಕರ್ನಾಟಕ ಮತ್ತು ಇತರೆ ಪ್ರಾತಿನಿಧ್ಯ ದೊರೆಯದ ಭಾಗದ ಸೂಕ್ತ ಅಭ್ಯರ್ಥಿಗಳನ್ನು ಪತ್ತೆ ಮಾಡಿ ಅವರಿಗೆ ಪದೋನ್ನತಿ ನೀಡುವುದು ಅಗತ್ಯವಾಗಿದೆ ಎಂದು ಪ್ರತಿಪಾದಿಸಿದ್ದಾರೆ.

ನ್ಯಾಯಯುತ ಮತ್ತು ಪ್ರಾತಿನಿಧಿಕ ತತ್ವದ ದೃಷ್ಟಿಯಿಂದ ಮಾತ್ರವಷ್ಟೇ ಅಲ್ಲದೆ ಇದು ಸಂಸ್ಥೆಯ ಮೇಲೆ ಸಾರ್ವಜನಿಕ ನಂಬಿಕೆ ನಿರ್ವಹಿಸುವ ನಿಟ್ಟಿನಲ್ಲಿ ಮಹತ್ವದ ಯತ್ನವಾಗಿದೆ. ಈ ವಿಚಾರಕ್ಕೆ ನೀವು ಹೆಚ್ಚಿನ ಪ್ರಾಶಸ್ತ್ಯ ನೀಡುವಿರಿ ಮತ್ತು ಪರಿಸ್ಥಿತಿ ಸರಿಪಡಿಸಲು ಸೂಕ್ತ ಕ್ರಮಕೈಗೊಳ್ಳುತ್ತೀರಿ ಎಂದು ಭಾವಿಸುತ್ತೇನೆ ಎಂದು ರಂಗನಾಥ್‌ ಪತ್ರದಲ್ಲಿ ಹೇಳಿದ್ದಾರೆ.