ನಾಗಮಂಗಲ:ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಮುಂದಿನ ಐದು ವರ್ಷದೊಳಗೆ ಕಾವೇರಿ ಸಮಸ್ಯೆಯನ್ನು ಪರಿಹಾರ ಮಾಡಿದರೆ ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸವಾಲು ಹಾಕಿದರು.
ಹಾಲಿ ಜಾರಿಯಲ್ಲಿರುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವನ್ನು ರದ್ದುಗೊಳಿಸಿ ಕೇಂದ್ರ ಸರ್ಕಾರದ ಮಧ್ಯಸ್ಥಿಕೆಯಲ್ಲಿ ಕಾವೇರಿ ನೀರನ್ನು ಸಂಪೂರ್ಣವಾಗಿ ಕರ್ನಾಟಕಕ್ಕೆ ದೊರಕಿಸಿಕೊಟ್ಟರೆ ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದೂ ಇಲ್ಲ. ಅವರ ಸೇವಕನಾಗಿ ಕೆಲಸ ಮಾಡುತ್ತೇನೆ ಎಂದು ಬುಧವಾರ ನಾಗಮಂಗಲದಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮಂಡ್ಯ ಜಿಲ್ಲೆ ಸಂಸದರಾಗಿ ಮತ್ತು ಕೇಂದ್ರ ಸಚಿವರಾಗಿ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸುವುದು ಅವರ ಕರ್ತವ್ಯ. ಅದನ್ನು ಬಿಟ್ಟು ಬೇಜವಾಬ್ದಾರಿತನದಿಂದ ಮಾತನಾಡುವ ಮೂಲಕ ಜಿಲ್ಲೆಯ ಜನರಿಗೆ ಅಗೌರವ ತಂದಿದ್ದಾರೆ. ಜೊತೆಗೆ ಗೋಡಂಬಿ, ದ್ರಾಕ್ಷಿ ತಿನ್ನಲು ಸಭೆಗೆ ಹೋಗಬೇಕಿತ್ತಾ ಎಂದು ಲಘುವಾಗಿ ಮಾತನಾಡಿರುವುದು ಸಭ್ಯತೆಯಲ್ಲ ಎಂದು ಹೇಳಿದರು.
ಕಾವೇರಿ ಸಮಸ್ಯೆಗೆ ಪರಿಹಾರ ಸೂಚಿಸುವುದಾಗಿ ಭರವಸೆ ನೀಡಿರುವ ಅವರು, ಸರ್ವಪಕ್ಷ ಸಭೆಯಲ್ಲಿ ಪಾಲ್ಗೊಂಡು ಸಲಹೆ, ಸೂಚನೆಗಳನ್ನು ನೀಡುವುದರೊಂದಿಗೆ ಕೇಂದ್ರ ಮಟ್ಟದಲ್ಲಿ ನೀರಿನ ಸಮಸ್ಯೆ ವಿಚಾರದಲ್ಲಿ ಗಮನ ಸೆಳೆಯುವ ಪ್ರಯತ್ನ ಮಾಡಿದ್ದರೆ, ಸಮಸ್ಯೆ ಬಗ್ಗೆ ಇವರಿಗೆ ಇರುವ ಆಸಕ್ತಿ ತೋರ್ಪಡಿಸುತ್ತಿತ್ತು ಎಂದು ತಿಳಿಸಿದರು.
ಉದ್ಧಟತನದ ಮಾತು ಶೋಭೆಯಲ್ಲ:
ಸಂಸದರಾಗಿ ಒಂದೇ ತಿಂಗಳಲ್ಲಿ ಸಮಸ್ಯೆ ಬಗೆಹರಿಸಬೇಕೆಂದು ನಾವ್ಯಾರೂ ಒತ್ತಾಯಿಸಿರಲಿಲ್ಲ. ಸರ್ವಪಕ್ಷ ಸಭೆಗೆ ಬಂದು ತಮ್ಮ ಜವಾಬ್ದಾರಿಯನ್ನು ಪ್ರದರ್ಶಿಸಬೇಕೆಂಬುದಷ್ಟೇ ನಮ್ಮ ಕಳಕಳಿ. ಅದನ್ನು ಬಿಟ್ಟು ಒಂದು ಗಂಭೀರ ವಿಷಯದ ಬಗ್ಗೆ ಉದ್ಧಟತನದ ಮಾತುಗಳನ್ನಾಡುವುದು ಶೋಭೆ ತರುವುದಿಲ್ಲ ಎಂದು ಕುಟುಕಿದರು.
ಸಮಾರಂಭ, ಬಾಡೂಟ ಇನ್ನೊಂದು ದಿನ ಮಾಡಬಹುದಲ್ವಾ?
ಅಭಿನಂದನಾ ಸಮಾರಂಭ, ಬಾಡೂಟ ಇನ್ನೊಂದು ದಿನ ಮಾಡುವುದಕ್ಕೂ ಅವಕಾಶವಿತ್ತು. ಸರ್ವಪಕ್ಷ ಸಭೆ ಯಾವಾಗಲೂ ನಡೆಯುವುದಿಲ್ಲ. ಬಿಜೆಪಿಯ ಹಲವು ಹಿರಿಯ ನಾಯಕರು ಸಭೆಗೆ ಆಗಮಿಸಿ ತಮ್ಮ ಅಭಿಪ್ರಾಯ ತಿಳಿಸಿದ್ದರು. ಸಭೆಗೆ ಹಾಜರಾಗಿ ರಾಜಕೀಯ ಪ್ರಬುದ್ಧತೆ ಪ್ರದರ್ಶಿಸಬೇಕಿತ್ತು. ನನ್ನಿಂದ ಈ ಸಮಸ್ಯೆ ಬಗೆಹರಿಸಲು ಆಗುವುದಿಲ್ಲ. ಚುನಾವಣೆಗಾಗಿ, ರಾಜಕೀಯ ಕಾರಣದಿಂದ ಆ ಮಾತನ್ನು ಹೇಳಬೇಕಾಯಿತೆಂದು ಹೇಳಿ ಬಿಡಲಿ. ಮುಂದೆ ಯಾವತ್ತೂ ಅವರನ್ನು ಈ ವಿಚಾರವಾಗಿ ಪ್ರಶ್ನಿಸುವುದೇ ಇಲ್ಲ. ನಮ್ಮ ಪಾಡಿಗೆ ನಾವು ಅಭಿವೃದ್ಧಿ ಕೆಲಸ ಮಾಡಿಕೊಂಡು ಹೋಗುತ್ತೇವೆ ಎಂದು ಚಲುವರಾಯಸ್ವಾಮಿ ಹೇಳಿದರು.
ಇದೀಗ ವಿಶ್ವೇಶ್ವರಯ್ಯ ನಾಲೆ(ವಿಸಿ) ಆಧುನೀಕರಣವಾಗುತ್ತಿದ್ದು, ನಾಗೇಗೌಡರ ಕಾಲದಲ್ಲಿ ಆದ ನಂತರ ಪೂರ್ತಿ ನಾಲೆ ಆಧುನೀಕರಣ ವಾಗಿದ್ದು ನಮ್ಮಕಾಲದಲ್ಲಿ.ಆದ್ರೆ ನಾಲೆ ಆಧುನೀಕರಣದ ಕೆಲಸವನ್ನ ಜಿಲ್ಲೆಯ ಜನ ಅರ್ಥ ಮಾಡಿಕೊಳ್ಳಲಿಲ್ಲ.ಆಗ ನಾವು ನೀರು ಬಿಟ್ಟಿದ್ದರೂ ನೀರು ಕೊನೆ ಭಾಗಕ್ಕೆ ತಲುಪಿತ್ತಿರಲಿಲ್ಲ. ಮತ್ತೊಂದು ಕಡೆ ನಾಲೆ ಆಧುನೀಕರಣದ ಕೆಲಸವೂ ಆಗ್ತಿರಲಿಲ್ಲ.ಆದ್ರೆ ಈಗ ನಾಲೆಗೆ ನೀರು ಬಿಟ್ಟ 24 ಗಂಟೆಯಲ್ಲೇ ಮಳವಳ್ಳಿಯ ಕೊನೆ ಭಾಗಕ್ಕೆ ನೀರು ಹೋಗಿದೆ ಎಂದರು.
ನಮಗೆ ಪ್ರತೀ ವರ್ಷ ನೀರು ಇರಲಿ ಇಲ್ಲದಿರಲಿ, ಜುಲೈ ಕೊನೆ ವಾರದಲ್ಲಿ ಅಥವಾ ಆಗಸ್ಟ್ ಮೊದಲ ವಾರದಲ್ಲಿ ನಾಲೆಗೆ ನೀರು ಬಿಡಲಾಗ್ತಿತ್ತು.
ಆದ್ರೆ ನೀವು ಮಾಧ್ಯದವರೂ ನಮ್ಮ ವಿರುದ್ದ ಬರೆದ್ರಿ.ನೀರು ಬಿಡಿ
ಸುಳ್ಳು ಬರೆಯಲು ಹಿತ ಎನ್ನಿಸುತ್ತೆ. ಈಗ ಸರ್ಕಾರ ತೀರ್ಮಾನ ತೆಗೆದುಕೊಂಡು ಇದೇ 10 ರಿಂದ ನಾಲೆಗೆ ನೀರು ಬಿಡಲಾಗಿದೆ. ಕಾವೇರಿ ನೀರು ನಿರ್ವಹಣಾ ಸಮಿತಿ ಸಭೆ ನಡೆಸಿ ತಮಿಳುನಾಡಿಗೆ ಪ್ರತೀನಿತ್ಯ 1 ಟಿಎಂಸಿ ನೀರು ಬಿಡಲು ಸೂಚನೆ ಕೊಟ್ಟಿತ್ತು.ಈ ಸಂಬಂಧ ಚರ್ಚಿಸಲು ನಾವು ಕಳದ ಭಾನುವಾರ ಸರ್ವಪಕ್ಷ ಸಭೆ ಕರೆದೆವು. ಆ ಸಭೆಯಲ್ಲಿ ಸಮಿತಿಯ ಸೂಚನೆ ವಿರುದ್ಧ ಪ್ರಾಧಿಕಾರದಲ್ಲಿ ಮೇಲ್ಮನವಿ ಸಲ್ಲಿಸಲು ನಿರ್ಧರಿಸಲಾಯ್ತು. ಈ ತಿಂಗಳ ಕೊನೆವರೆಗೆ ನಾವು ನೀರು ಬಿಡೊ ಬಗೆಗೆ ಏನೂ ಹೇಳಲಾಗಲ್ಲ ಎಂದು ತಿಳಿಸಿದ್ದೇವೆ. ಇಷ್ಟಾದರೂ ವಿರೋಧ ಪಕ್ಷದವರು ಮಾತಾಡ್ತಾರೆ.
ಸದ್ಯ ಕಬಿನಿಯಿಂದಲೇ 30 ಸಾವಿರ ಕ್ಯೂಸೆಕ್ ನೀರು ತಮಿಳುನಾಡಿಗೆ ಹರಿದು ಹೋಗ್ತಿದೆ. ಕೆಆರ್ ಎಸ್ ಡ್ಯಾಂ ಗೆ 35 ಸಾವಿರ ಕ್ಯೂಸೆಕ್ ನೀರು ಹರಿದು ಬರ್ತಿದೆ. ನಾವು ಕೆಆರ್ ಎಸ್ ನಿಂದ ತಮಿಳುನಾಡಿಗೆ ಅಣೆಕಟ್ಟೆ ಭರ್ತಿಯಾಗುವವರೆಗೂ ನೀರು ಬಿಡಲ್ಲ.ಡ್ಯಾಂ ನ ನೀರಿನ ಮಟ್ಟ ಸಂಜೆ ನಾಲ್ಕು ಗಂಟೆಗೆ 111 ಅಡಿ ಮುಟ್ಟಿದೆ. ಪ್ರಸ್ತುತ ಮಳೆ ಏನಾದ್ರು ನಿಂತರೆ ಡ್ಯಾಂನ ಮಟ್ಟ 115 ಅಡಿಗೆ ನಿಲ್ಲಬಹುದು ಎಂದರು.
ಜಿಲ್ಲೆಯ ರೈತರು ಮೊದಲ ಬೆಳೆಯಾಗಿ ಭತ್ತ ಅಥವಾ ರಾಗಿ ನಾಟಿ ಮಾಡಬಹುದು. ಮೊದಲ ಬೆಳೆಗೆ ಯಾವುದೇ ತೊಂದರೆ ಎದುರಾಗುವುದಿಲ್ಲ. ಹಾಗಾಗಿ ಜಿಲ್ಲೆಯಲ್ಲಿ ಬಿತ್ತನೆ ಬೀಜ ಪೂರೈಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದೇನೆ.ಜಿಲ್ಲೆಯಲ್ಲಿ ಬಿತ್ತನೆ ಬೀಜಕ್ಕೆ ಕೊರತೆ ಇಲ್ಲ.ಜಿಲ್ಲೆಯ ಜನರು ಒಂದು ಬೆಳೆ ಬೆಳೆಯಲು ಕಟ್ಟು ಪದ್ಧತಿ ರೀತಿಯಲ್ಲಿ ನೀರು ಬಿಡಲಾಗುವುದಿಲ್ಲ ಎಂದರು.
ಗೋಷ್ಠಿಯಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜೇಶ್, ಮುಖಂಡ ಟಿ.ಎಲ್.ಕೃಷ್ಣೇ ಗೌಡ, ಮನ್ ಮುಲ್ ನಿರ್ದೇಶಕ ಕದಲೂರು ರಾಮಕೃಷ್ಣ ಸೇರಿ ಇತರರಿದ್ದರು.














