ಉಡುಪಿಯ ಉದ್ಯಮಿಗೆ ಹಣಕ್ಕೆ ಬೇಡಿಕೆ ಹಾಕಿ, ಜೀವ ಬೆದರಿಕೆ ಹಾಕಿದ ಪ್ರಕರಣದಲ್ಲಿ ಕುಖ್ಯಾತ ರೌಡಿ ಶೀಟರ್ ಬನ್ನಂಜೆ ರಾಜ ಜಾಮೀನು ಕೋರಿ ಈಚೆಗೆ ಮೈಸೂರು ನ್ಯಾಯಾಲಯದ ಮೆಟ್ಟಿಲೇರಿದ್ದಾನೆ. ಉದ್ಯಮಿ ಆರ್ ಎನ್ ನಾಯಕ್ ಕೊಲೆ ಪ್ರಕರಣದಲ್ಲಿ ದೋಷಿ ಎಂದು ಘೋಷಿತವಾಗಿರುವ ಬನ್ನಂಜೆ ರಾಜ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದು, ಸದ್ಯ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದಾನೆ.
ರಾಜೇಂದ್ರಕುಮಾರ್ ಎಸ್ ವಿ ಅಲಿಯಾಸ್ ಬನ್ನಂಜೆ ರಾಜ ಅಲಿಯಾಸ್ ರಾಜ ಅಲಿಯಾಸ್ ರಾಜ ಶೆಟ್ಟಿ ಅಲಿಯಾಸ್ ರಹೀಮ್ ಖಲೀಲ್ ಖಾನ್ ಅಲಿಯಾಸ್ ಕುಮಾರ ರಾಜ ಹೇಮಂತ್ ಹೆಗ್ಡೆ ಸಲ್ಲಿಸಿದ್ದ ಅರ್ಜಿಯನ್ನು ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರವೀಂದ್ರ ಹೆಗ್ಡೆ ಈಚೆಗೆ ವಿಚಾರಣೆ ನಡೆಸಿದರು.
ನ್ಯಾಯಾಲಯದ ನಿರ್ದೇಶನದಂತೆ ರಾಜ್ಯ ಸರ್ಕಾರವು ಜಾಮೀನು ಅರ್ಜಿ ವಿರೋಧಿಸಿ, ಆಕ್ಷೇಪಣೆ ಸಲ್ಲಿಸಿದೆ. ಅರ್ಜಿಯ ವಿಚಾರಣೆಯು ಜುಲೈ 20ರಂದು ನಡೆಯಲಿದೆ.
ಬನ್ನಂಜೆ ರಾಜ ಸಂಘಟಿತ ಅಪರಾಧ ಸಿಂಡಿಕೇಟ್‌ನ ಕಿಂಗ್‌ಪಿನ್ ಆಗಿದ್ದು, ತನ್ನ ಸಹಚರರಾದ ಶಶಿ ಪೂಜಾರಿ, ಧನರಾಜ್ ಕೋಟ್ಯಾನ್, ರವಿಚಂದ್ರ ಪೂಜಾರಿ, ಧನರಾಜ್ ಮತ್ತು ಉಲ್ಲಾಸ್ ಶೆಣೈ ಮೂಲಕ ಶ್ರೀಮಂತ ಉದ್ಯಮಗಳಿಗೆ ಜೀವ ಬೆದರಿಕೆ ಹಾಕಿ ಹಣ ಸುಲಿಗೆ ಮಾಡಿದ್ದಾನೆ. ಉದ್ಯಮಿ ಆರ್ ಎನ್ ನಾಯಕ್ ಕೊಲೆ ಪ್ರಕರಣದಲ್ಲಿ ಮೊದಲನೇ ಆರೋಪಿಯಾಗಿ ದೋಷಿ ಎಂದು ಘೋಷಿತನಾಗಿರುವ ಬನ್ನಂಜೆ ರಾಜ ಜೈಲಿನಲ್ಲಿದ್ದುಕೊಂಡೇ ಸಹಚರರ ನೆರವಿನಿಂದ ಉದ್ಯಮಿಗಳಿಂದ ಹಣ ಸುಲಿಗೆ ಮಾಡುವ ಕಾಯದಲ್ಲಿ ನಿರತನಾಗಿದ್ದಾನೆ ಎಂದು ಪ್ರಾಸಿಕ್ಯೂಷನ್ ಆಕ್ಷೇಪಣೆಯಲ್ಲಿ ಜಾಮೀನಿಗೆ ವಿರೋಧಿಸಿದೆ.
ಪ್ರಾಸಿಕ್ಯೂಷನ್ ತನ್ನ ಆಕ್ಷೇಪಣೆಯಲ್ಲಿ, ಆರೋಪ ಪಟ್ಟಿ ಮತ್ತು ಪೂರಕ ಆರೋಪ ಪಟ್ಟಿಯ ಜೊತೆಗೆ ಉಡುಪಿ ಪೊಲೀಸರು ಸಲ್ಲಿಸಿರುವ ವಿಶೇಷ ವರದಿಯ ಪ್ರಕಾರ ಬನ್ನಂಜೆ ರಾಜನ ವಿರುದ್ಧ ವಿವಿಧೆಡೆ 40 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಹೊರದೇಶದಿಂದ ಬಂಧಿಸಿ ಕರೆತರಲ್ಪಟ್ಟಿರುವ ರಾಜ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದುಕೊಂಡೇ ತನ್ನ ಸಹಚರರ ಮೂಲಕ ಸುಲಿಗೆ ಕೃತ್ಯ ಮುಂದುವರಿಸಿದ್ದಾನೆ. ಜೈಲು ಸಂದರ್ಶಕರ ದಾಖಲೆಯ ಪ್ರಕಾರ ಇತರೆ ಆರೋಪಿಗಳು ಬನ್ನಂಜೆ ರಾಜನನ್ನು ಜೈಲಿನಲ್ಲಿ ಭೇಟಿ ಮಾಡಿದ್ದಾರೆ ಎಂದಿದೆ. ಅಲ್ಲದೆ, 2019ರ ಜೂನ್ 11ರಂದು ಹಿಂಡಲಗಾ ಜೈಲಿನಲ್ಲಿ ಶೋಧ ನಡೆಸಿದಾಗ ಬನ್ನಂಜೆ ರಾಜನ ಸೆಲ್‌ನಲ್ಲಿ ಮೊಬೈಲ್ ಫೋನ್ ಪತ್ತೆಯಾಗಿದೆ. ರಾಜನ ಸಹಚರರು ತಪ್ಪೊಪ್ಪಿಗೆ ಹೇಳಿಕೆಯಲ್ಲಿ ಆತನ ಪಾತ್ರದ ಬಗ್ಗೆ ಹೇಳಿಕೆ ನೀಡಿದ್ದಾರೆ. ಹೀಗಾಗಿ, ಬನ್ನಂಜೆ ರಾಜ ಜಾಮೀನಿಗೆ ಅರ್ಹನಲ್ಲ ಎಂದು ವಿರೋಧಿಸಿದೆ.
ಬನ್ನಂಜೆ ರಾಜ 1990ರಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದು ಹಲವು ಕೋಕಾ ಪ್ರಕರಣಗಳು ದಾಖಲಾಗಿವೆ. ಒಂದು ಕೋಕಾ ಪ್ರಕರಣದಲ್ಲಿ ಆತ ದೋಷಿ ಎಂದು ಸಾಬೀತಾಗಿದೆ. ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಪರಾರಿಯಾಗಲು ರಾಜ ನಕಲಿ ಪಾಸ್‌ಪೋರ್ಟ್‌ಗಳನ್ನು ಬಳಸಿದ್ದಾನೆ ಎಂಬುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಹಣ ಸುಲಿಗೆ ಮಾಡಲು ಮತ್ತು ತನ್ನ ಕುಟುಂಬ ಸದಸ್ಯರಿಗೆ ಕರೆ ಮಾಡಲು ಜೈಲಿನಿಂದ ಬನ್ನಂಜೆ ರಾಜ ಬೇನಾಮಿ ಸಿಮ್‌ಗಳನ್ನು ಬಳಕೆ ಮಾಡಿದ್ದಾನೆ. 2018ರ ಫೆಬ್ರವರಿ ಮತ್ತು ಅಕ್ಟೋಬರ್‌ನಲ್ಲಿ ಕ್ರಮವಾಗಿ ₹15 ಲಕ್ಷ ಮತ್ತು ₹25 ಲಕ್ಷ ಹಣವನ್ನು ಉದ್ಯಮಿ ರತ್ನಾಕರ ಶೆಟ್ಟಿ ಅವರಿಂದ ಸುಲಿಗೆ ಮಾಡಿದ್ದಾನೆ ಎಂದು ಪ್ರಾಸಿಕ್ಯೂಷನ್ ಆರೋಪಿಸಿದೆ.
ಹಾಲಿ ಪ್ರಕರಣದಲ್ಲಿ ಬನ್ನಂಜೆ ರಾಜನ ವಿರುದ್ಧ ಕೋಕಾ ಅಪರಾಧಕ್ಕೆ ಆರೋಪ ಪಟ್ಟಿ ಸಲ್ಲಿಕೆಯಾಗಿದ್ದು, ಆತನಿಗೆ ಜಾಮೀನು ನೀಡಲು ಅವಕಾಶವಿಲ್ಲ. ಬನ್ನಂಜೆ ರಾಜನ ಸಹಚರರು ಕರ್ನಾಟಕವಲ್ಲದೇ ದೇಶದ ಬೇರೆಬೇರೆ ರಾಜ್ಯಗಳಲ್ಲೂ ಇದ್ದಾರೆ. ಉಡುಪಿ, ಮಲ್ಪೆ, ಬಾರ್ಕೆ ಠಾಣೆಗಳಲ್ಲಿ ಬನ್ನಂಜೆ ರಾಜನ ವಿರುದ್ಧ ರೌಡಿ ಶೀಟ್ ತೆಗೆಯಲಾಗಿದೆ ಎಂದು ಆಕ್ಷೇಪಿಸಲಾಗಿದೆ.
4ನೇ ಆರೋಪಿ ರವಿಚಂದ್ರ ಪೂಜಾರಿ ಮತ್ತು 5ನೇ ಆರೋಪಿ ಧನರಾಜ ಸಾಲಿಯಾನ್‌ಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದ್ದು, ಇದನ್ನು ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದೆ. 6ನೇ ಆರೋಪಿ ಉಲ್ಲಾಸ್ ಶೆಣೈಗೆ ಜಾಮೀನು ಮಂಜೂರು ಮಾಡಿರುವ ಹೈಕೋರ್ಟ್‌ನ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ ಎಂದು ರಾಜ್ಯ ಸರ್ಕಾರದ ಆಕ್ಷೇಪಣೆಯಲ್ಲಿ ವಿವರಿಸಲಾಗಿದೆ.
ಪ್ರಕರಣದ ಹಿನ್ನೆಲೆ: ಉಡುಪಿಯ ಉದ್ಯಮಿ ರತ್ನಾಕರ ಡಿ. ಶೆಟ್ಟಿ ನೀಡಿದ ದೂರಿನ ಮೇರೆಗೆ ಬನ್ನಂಜೆ ರಾಜ, ಶಶಿ ಪೂಜಾರಿ ಅಲಿಯಾಸ್ ಶಾಡೊ ಅಲಿಯಾಸ್ ಶಶಿಕುಮಾರ್, ಧನರಾಜ್ ವಿ. ಕೋಟ್ಯಾನ್ ಅಲಿಯಾಸ್ ಧನರಾಜ್ ಪೂಜಾರಿ ಅಲಿಯಾಸ್ ಧನರಾಜ್ ಅಲಿಯಾಸ್ ರಾಕ್, ರವಿಚಂದ್ರ ಪೂಜಾರಿ ಅಲಿಯಾಸ್ ವಿಕ್ಕಿ ಪೂಜಾರಿ, ಧನರಾಜ್ ಸಾಲಿಯಾನ್ ಅಲಿಯಾಸ್ ಧನು ಕೋಳ, ಉಲ್ಲಾಸ್ ಶೆಣೈ ಅಲಿಯಾಸ್ ಉಲ್ಲಾಸ್ ವಿರುದ್ಧ 2019ರಲ್ಲಿ ಉಡುಪಿ ನಗರ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ಗಳಾದ 384,387,504,506,507,120(ಬಿ),109,201 ಜೊತೆಗೆ 34 ಹಾಗೂ ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯಿದೆ ಸೆಕ್ಷನ್‌ಗಳಾದ 3(i)(ii),2(2),3(4),3(5) ಅಡಿ ಪ್ರಕರಣ ದಾಖಲಿಸಲಾಗಿದೆ.
ವಿವಿಧ ಮೊಬೈಲ್ ನಂಬರ್‌ಗಳಿಂದ ಕರೆ ಮಾಡಿದ್ದ ಬನ್ನಂಜೆ ರಾಜ ತುಳು ಭಾಷೆಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ತನ್ನ ಸಹಚರರಿಗೆ ಹಣ ನೀಡುವಂತೆ ಜೀವ ಬೆದರಿಕೆ ಹಾಕಿದ್ದಾನೆ. ಈ ಸಂಬಂಧ 2018ರ ಫೆಬ್ರವರಿ ಮತ್ತು ಅಕ್ಟೋಬರ್‌ನಲ್ಲಿ ಎರಡು ಬಾರಿ ಕ್ರಮವಾಗಿ ₹15 ಮತ್ತು ₹25 ಲಕ್ಷ ನೀಡಿರುವುದಾಗಿ ರತ್ನಾಕರ ಶೆಟ್ಟಿ ದೂರಿದ್ದರು.